ಪ್ರಿಯತಮೆಯ ಮನದಾಳ(ಕಿರುಗತೆ)
ಅದೆಷ್ಟು ಹಂಬಲಿಸುತ್ತಿರುವೆ ನಿನ್ನ ನುಡಿಗಾಗಿ, ನಿನ್ನ ಕರೆಗಾಗಿ? ತಡೆಯಲಾಗದೆ ನಾನೇ ಕರೆ ಮಾಡಿದರೂ ನೀನು ಸದಾ ಬ್ಯುಸಿ... ಸಮಯವೇ ಇಲ್ಲವೇ ನಿನ್ನ ಬಳಿ ನನಗಾಗಿ?
ಮರುಕಳಿಸುತ್ತಾ ಕುಳಿತಿರುವೆ ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳ...ವಾವ್!ಅದೆಷ್ಟು ರಮ್ಯ ನನ್ನ ಬಾಳಿಗೆ!ನಿನ್ನ ನೋಡುತ್ತಾ ಕಣ್ಣಲ್ಲೇ ಕವನ ಕಟ್ಟೋದು ತುಂಬಾ ಇಷ್ಟ ನನಗೆ.. ನಿನ್ನ ಕಣ್ಣ ಬಿಂಬದಲ್ಲಿ ನನ್ನ ನಾನು ನೋಡಲು ಕಾತರಗೊಂಡಿರುವೆ. ಆದರೇನು? ನಿನ್ನಲ್ಲಿಲ್ಲವಲ್ಲ ನನಗಾಗಿ ಸಮಯ? ನನ್ನ ಎದೆ ಕದದ ಬಾಗಿಲನು ಒಡೆದು ನನ್ನ ಹೃದಯದರಮನೆ ಸೇರಿ ಅಲ್ಲೆ ಚಿಲಕ ಹಾಕಿ ಒಳ ಕುಳಿತವ ನೀನು... ನನ್ನ ಎದೆಗುಡಿಯಲಿ ನಿತ್ಯ ಪೂಜೆ ನಿನಗೆ..ನಿನಗೆ ತಿಳಿದಿದೆ ನನ್ನ ಈ ಅಗಾಧ ಪ್ರೀತಿಯ ಆಳ!
ಆದರೂ ನನ್ನಲೊಂದು ಯಕ್ಷ ಪ್ರಶ್ನೆ ಕಾಡುತ್ತಿದೆ,ನನ್ನಂತೆ ನೀನೂ ಭಾವುಕ ಅಂದುಕೊಂಡಿರುವೆ.ನನ್ನ ಮನದಾಳದ ಅನಿಸಿಕೆ ಸರಿ ಎಂದಾದರೆ ನಿನಗೂ ನನ್ನ ನೆನಪು ಆಗಾಗ ಸುಳಿಯಬೇಕಿತ್ತಲ್ಲವೇ? ನಿನ್ನ ಬದುಕಿಗೂ ನನ್ನ ಅಗತ್ಯ ಕಾಣಬೇಕಲ್ಲವೇ? ಒಂದೇ ಕೈಯಲ್ಲಿ ಚಪ್ಪಾಳೆ ಬರದು..ನೀನೂ ಕೈ ಸೇರಿಸಿದರೆ ಮಾತ್ರ ನಮ್ಮ ಬದುಕು ಚಪ್ಪಾಳೆಯ ಮಳೆಗರೆವುದು..
ಇನಿಯಾ ನನ್ನ ಭಾವನೆಗಳಿಗೆ ಬೆಲೆಕೊಡುವೆ ತಾನೇ? ಪ್ರೀತಿ ಎಂದರೆ ವಿಶ್ವಾಸ,ನಂಬಿಕೆ ನನಗೆ,ನಿನಗೆ ಎಲ್ಲರಿಗೂ. ನನ್ನ ನಂಬಿಕೆಯ ಗಿಡಕ್ಕೆ ನೀರೆರೆದು ನನ್ನ ಬದುಕನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಿನ್ನದು. ನೀನೇ ಹೀಗೆ ಸುಮ್ಮನಾದರೆ ಹೇಗೆ?
ಮೌನಂ ಸಮ್ಮತಿ ಲಕ್ಷಣಂ ಎನ್ನಲೇ ಆಥವಾ ಮೌನಂ ದೂರ್ತ ಲಕ್ಷಣಂ ಎಂದು ಜರಿಯಲೇ? ನಿನಗೆ ನಾನು ಜರಿಯುವುದೇ...ಛೆ..ನನ್ನ ಹೃದಯ ಸಾಮ್ರಾಜನಲ್ಲವೇ ನೀ.. ಪ್ರಪಂಚದ ಸಾವಿರಾರು ಹುಡುಗರಲ್ಲಿ ನನಗಾಗಿ ಆರಿಸಿಕೊಂಡದ್ದು ನಿನ್ನೊಬ್ಬನನ್ನೇ ಅಲ್ಲವೇ?
ನೀ ನನ್ನವನು,ನನ್ನ ಹೃದಯ ಕಮಲದಲಿ ರಾರಾಜಿಸುವ ರಾಜ! ರಾಜನಿಗಾರೂ ಸಾಟಿಯಿಲ್ಲ ಅಲ್ಲವೇ? ರಾಜ ತನ್ನ ಜವಾಬ್ದಾರಿಯನ್ನು ಮರೆಯ ಬಾರದು ತಾನೇ? ರಾಣಿ ನನಗಾಗೇ ಕಾಯುತಿರುವಳು, ನನ್ನ ಕರೆಗೆ ಓಗೊಟ್ಟು ಬರುವಳು ಎಂಬ ನಂಬಿಕೆ ನಿನ್ನಲ್ಲಿರುವಂತೆ ನನ್ನೊಳಗೂ ಇದೆಯಲ್ಲವೇ?
ನಿನ್ನುಸಿರು ನನಗಾಗಿ ನನ್ನುಸಿರು ನಿನಗಾಗಿ ಎಂದಾದ ಮೇಲೆ ನನ್ನ ಮರೆವುದು ಸರಿಯೇ? ರಾಜನಿಗೆ ಸಾವಿರ ಕೆಲಸಗಳಿರಬಹುದು ಅದರೊಳಗೆ ರಾಣಿಯನು ಕಡೆಗಣಿಸ ಬಾರದಲ್ಲವೆ ಪ್ರಭು! ನಿನ್ನ ಕಾರ್ಯ ವೈಖರಿ, ಆಲೋಚನೆಗಳ ಮಹಾಪೂರ ಅದ್ಭುತ! ನಿನಗೆ ನೀನೇ ಸಾಟಿ ನನ್ನ ರಾಜ! ಹೆಮ್ಮೆಯಿದೆ ನನಗೆ ನಿನ್ನ ಬಗ್ಗೆ ಆದರೆ ತುಂಬಾ ಸಿಟ್ಟಿದೆ ನನಗೆ ನೀ ತೋರದ ಕಾಳಜಿಯ ಬಗ್ಗೆ!
ನಿನಗಿರಬಹುದು ನೂರಾರು ನೋವುಗಳು..ಆದರೆ ಹಂಚಿಕೊಳ್ಳಲು ನಾನಿಲ್ಲವೇ? ಅದನ್ನೆಲ್ಲ ನಿನ್ನಲ್ಲೇ ಏಕೆ ಬಚ್ಚಿಟ್ಟುಕೊಂಡು ಕೊರಗುತ್ತಿರುವೆ ಇನಿಯಾ?
ಬದುಕುವ ಪ್ರತಿ ಜೀವಿಗೂ ದುಃಖವಿದೆಯಲ್ಲವೇ? ನಮ್ಮನ್ನು ನಾವು ಸಂತೈಸಿಕೊಂಡು ಇತತರಿಗೆ ಸಂತಸ ಕೊಡುವುದೇ ಜೀವನದ ಗುಟ್ಟಲ್ಲವೇ? ನಮ್ಮದೇನೇ ಕಷ್ಟವಿದ್ದರೂ ನಮ್ಮ ಕರ್ತವ್ಯವನ್ನು ಪೂರೈಸಿ ಹಿಂದಿರುಗಲೆಂದೇ ಬಂದ ಶಪಿತ ಗಂಧರ್ವರಲ್ಲವೇ ನಾವು? ನಮ್ಮ ಬುದ್ಧಿ ಮಟ್ಟ, ನಮ್ಮ ಕಾರ್ಯ ವೈಖರಿ,ನಮ್ಮ ಮಟ್ಟ ನಮಗೆ ತಿಳಿದಿದೆ.ಹಾಗಿರುವಾಗ ನಮ್ಮ ಯಾವುದೇ ತರಹದ ಭಾವನೆಗಳನ್ನು ನಾವೇ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇರಬೇಕಲ್ಲವೇ? ಹೇಳು ಗೆಳೆಯಾ!"
ಗೆಳೆಯನದೊಂದೆ ಉತ್ತರ "ಸಾರಿ,ತಪ್ಪಾಯಿತು". ಹೆಣ್ಣು ಕ್ಷಮಯಾ ಧರಿತ್ರಿ!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ