ಲೇಖನ- ಬೆಳೆಯುತ್ತಿರುವ ತಮ್ಮ ಮಕ್ಕಳನ್ನು ಹಲವು ಪೋಷಕರೇ ತಪ್ಪು ದಾರಿಗೆಳೆಯುತ್ತಿರುವರೇ?
"ಕಾಲ ಕೆಟ್ಹೋಯ್ತು " ಎಂದು ಜನ ಮಾತಾಡಿಕೊಂಡ ಹಾಗೆ ಈ ತಂತ್ರಜ್ಞಾನ ಯುಗದಲ್ಲಿ ಮಾನವ ಕೆಟ್ಟಿರುವನೇ? ಹೊಸ ಹೊಸ ಆವಿಷ್ಕಾರಗಳು ಒಳ್ಳೆಯದೇ? ಅವುಗಳೇ ನಮ್ಮನ್ನು ಸೋಮಾರಿಗಳನ್ನಾಗಿ ಮಾಡಿ ಅಧಃಪತನದತ್ತ ದೂಕುತ್ತಿವೆಯೇ? ಉತ್ತರ ಕೊಡುವವರಾರೂ ಇಲ್ಲ, ನಾವೇ ಕಂಡುಕೊಳ್ಳ ಬೇಕು!
ಪ್ರತಿಯೊಂದು ಕುಟುಂಬಕ್ಕೂ ಒಂದು ಅಥವಾ ಎರಡು ಮಕ್ಕಳು ಈಗ. ಪ್ರೀತಿಯನ್ನು ಬಿಟ್ಟರೆ ಇನ್ಯಾವುದಕ್ಕೂ ಬರಗಾಲವೂ ಇಲ್ಲ! ಏಕೆಂದರೆ ಕೂಲಿ ಕೆಲಸಗಾರನ ದಿನದ ಸಂಬಳವೂ ರೂ. ಐನೂರು ತಲುಪಿದೆ ಇಂದು. ಹಾಗಾಗಿ ತಿಂಗಳಿಗೆ ಹತ್ತುಸಾವಿರಕ್ಕಿಂತ ಕಡಿಮೆ ದುಡಿತವಿಲ್ಲ! ಬಡವರೆಂದರೆ ವಿಪರೀತ ಕುಡುಕರು ಮಾತ್ರ! ತಂದೆ ತಾಯಿಯರು ಹೊರಗಿನ ಕೆಲಸದಲ್ಲಿ ಮಗ್ನರಾದಾಗ ಮಕ್ಕಳನ್ನು ನೋಡಿಕೊಳ್ಳಲು, ಅವರೊಡನಿರಲು, ಕತೆ ಹೇಳಿ ರಮಿಸಲು ವಿಭಕ್ತ ಕುಟುಂಬದ ದುಡಿಯುವ ತಂದೆ-ತಾಯಿಗಳಿಗೆ ಸಮಯವಿಲ್ಲ, ಅವಿಭಕ್ತ ಕುಟುಂಬದ ಅಜ್ಜಿಗೆ ಟಿ.ವಿ. ಧಾರಾವಾಹಿಗಳ ಹುಚ್ಚಿನಿಂದ ಕತೆ ಹೇಳಲು ಆಗದು, ಅವರು ಸುಬ್ಬಲಕ್ಷ್ಮಿ ಸಂಸಾರದ ಬಗ್ಗೆ ಚಿಂತಿಸುತ್ತಿರುವವರು. ಪಾರುನ ಬಗ್ಗೆ ಕನಿಕರ ಹೊಂದಿರುವವರು. ಅಗ್ನಿ ಸಾಕ್ಷಿಯ ಸಮಯದಲ್ಲಿ ಹೊರಗೆಲ್ಲೂ ಇಣುಕದವರು, ಮಹಾವಿಷ್ಣು ದಶಾವತಾರದ, ಶನಿದೇವನ ಕತೆಯನ್ನು ನೋಡುವ ಭಕ್ತರು! ಇನ್ನು ರಾಮಾಯಣ, ಮಹಾಭಾರತ, ಈಸೋಪನ ನೀತಿ ಕತೆಗೆಳು ಹಲ ಮಾಡರ್ನ್ ಅಜ್ಜಿಗಳಿಗೆ ತಿಳಿದೇ ಇಲ್ಲ! ಮಕ್ಕಳಿಗೆ ಬೇಕಾದದ್ದು ಗನ್, ಪಿಸ್ತೂಲು, ಬಂದೂಕುಗಳು ಸಿಡಿಯುವ ಥ್ರಿಲ್ಲರ್, ಕಾದಾಟ, ಹೊಡೆದಾಟ, ಸಸ್ಪೆನ್ಸ್ ಗಳೇ ಹೊರತು ಹಳೆಯ ಅಜ್ಜಿಕತೆಯಲ್ಲ!
ಎಲ್ಲವೂ ಹೊಸದಿರಬೇಕು! ಈಗಿನ ಚಲನಚಿತ್ರಗಳಲ್ಲೂ ಹೀರೋಗಳಿಗಿಂತ ಹೆಚ್ಚು ವಿಲನ್ ಗಳನ್ನು ಹೀರೋಗಳ ಹಾಗೆ ಬಿಂಬಿಸಲಾಗುತ್ತಿದೆ! ಕಾರಣ ಅಟ್ಟಹಾಸ ಮೆರೆಯುತ್ತಿದೆ ಇಂದು ಜಗದಲಿ! ಹಲವು ವಿಲನ್ ಗಳೇ ನಮ್ಮನ್ನಾಳುವ ನಾಯಕರುಗಳಾಗಿದ್ದಾರೆ! "ಬದುಕ ಬೇಕಾದರೆ ಇತರರನ್ನು ಸಾಯಿಸು" ಎನ್ನುವ ಮಂತ್ರದಿಂದ ಬದುಕುವ ಜನರನ್ನೇ ಹೀರೋಗಳಾಗಿ ಮಾಡಲಾಗುತ್ತಿದೆ! ಇಂಥ ಪರಿಸ್ಥಿತಿಯಲ್ಲಿ ಸಮಾಜದೊಡನೆ ಸ್ಪರ್ಧಿಸುತ್ತಾ ನಾವೂ ಬೆಳೆದು ನಮ್ಮ ಮಕ್ಕಳನ್ನು ಬೆಳೆಸುವ ಉದಾತ್ತ ಕರ್ತವ್ಯ, ಜವಾಬ್ದಾರಿ ಪೋಷಕರಾದ ನಮ್ಮೆಲ್ಲರ ಮೇಲಿದೆ!
ಶಾಲೆಯಿಂದ ಬಂದ ಮಗುವನ್ನು ಪಕ್ಕದ ಮನೆಗೂ ಕಳುಹಿಸಲು ಭಯ! ಹೊಸ ಹೊಸ ವಿದ್ಯಾಮಾನಗಳು ವಾರ್ತೆಗಳಾಗಿ ಹೊರಬರುತ್ತಿರುವ ಈಗಿನ ಕಾಲದಲ್ಲಿ! ಹಾಗಾಗಿ ನಾವು ನಮ್ಮ ಮಕ್ಕಳನ್ನು ಹೊರ ಜಗತ್ತಿನೊಂದಿಗೆ ಬೆರೆಯಲು ಬಿಡುತ್ತಿಲ್ಲ! ಕಾರಣ ಭಯ! ಆದರೆ ಆಗುತ್ತಿರುವುದು ಮುಂದೆ ನಾವೇ ಭಯಪಡಬೇಕಾದ್ದು! ಮನೆಯೊಳಗೆ ಒಬ್ಬನೇ ಇರುತ್ತಾನಲ್ಲ, ಅವನ ಸೇಫ್ಟಿಗೊಂದು ಟ್ಯಾಬ್ ಅಥವಾ ಮೊಬೈಲ್ ಫೋನ್ ಯಾ ಲ್ಯಾಪ್ ಟಾಪ್ ಇರಲಿ ಎಂದು, ಅವನು ಅದರಲ್ಲಿ ಏನಾದರೂ ಕಲಿಯಲಿ ಎಂಬ ಉತ್ತಮ ಉದ್ದೇಶದಿಂದ ನಾವೊಂದು ಗ್ಯಾಜೆಟ್ ಕೊಡಿಸಿ ಬಿಡುತ್ತೇವೆ!
ಒಮ್ಮೆ ಗ್ಯಾಜೆಟ್ , ಇಂಟಪ್ ನೆಟ್ ಲೋಕಕ್ಕೆ ಅಂಟಿಕೊಂಡರಾಯಿತು ಬಿಡಿ, ನೀವೇ ಹೊರಗೆ ಬರಲಾರಿರಿ! ಇನ್ನು ಉತ್ಸಾಹಿ ಮಕ್ಕಳೆಲ್ಲಿ ಬರಬಲ್ಲರು? ಹುಡುಕಾಟಕ್ಕೆ ಒಳ್ಳೆಯ ಹಾಗೂ ಕೆಟ್ಟ ಸ್ನೇಹಿತ ಯೂಟ್ಯೂಬ್! ಸದಾ ಬರುವ ಜಾಹೀರಾತಿಗೆ ಮಾರು ಹೋಗಿ, ಬದಿಯಲ್ಲಿ ಬಂದ ಹೊಸ ವಿಷಯದತ್ತ ಒಮ್ಮೆ ಒತ್ತಿ ನೋಡಿದ ಹದಿವಯಸ್ಸಿನ ಮಗುವೊಂದು ಅದರಲ್ಲೆ ಮೈಮರೆತು ತನ್ನ ಗೆಳೆಯರಿಗೂ ಅದನ್ನು ಹೇಳಿ ಈ ಲೋಕದಿಂದ ದೂರಾಗಿ ತನ್ನದೇ ಲೋಕದಲ್ಲಿ ಬದುಕಲು ಪ್ರಾರಂಭಿಸುತ್ತದೆ! ಮೊದ ಮೊದಲು ತಂದೆ ತಾಯಿ ತಮ್ಮ ಕೆಲಸದಲ್ಲೆ ನಿರತರಾದವರು ಸಮಯ ಸಾಲದೆ ಮಗುವಿನತ್ತ ಸುಳಿಯಲಾಗದಿದ್ದರೆ, ನಂತರದ ದಿನಗಳಲ್ಲಿ ಮಗುವಿಗೆ ತಂದೆ ತಾಯಿಯರ ಸಖ್ಯವೇ ತೊಂದರೆ ಅನ್ನಿಸಲು ಪ್ರಾರಂಭವಾಗಬಹುದು. ಅವನ ಕಲಿಕೆ ಸಾಗುವುದು ಅಂಥ ವಿಷಯದಲ್ಲೆ ಆಗಿರುತ್ತದೆ! ಮುಂದೆ ಆ ಮಗು ತನ್ನ ತಂದೆ, ತಾಯಿ, ಶಿಕ್ಷಕರು ಯಾರನ್ನೂ ಗೌರವಿಸದೆ, ಗುರುತಿಸುವ ಗೋಜಿಗೇ ಹೋಗದೆ ತನ್ನ ಪಾಡಿಗೆ ತನ್ನದೇ ಲೋಕದಲ್ಲಿ ತಾನಿರುತ್ತಾನೆ! ಗೆಳೆಯರೊಡನೆ ಕೆಲವರು ಸೇರಿದರೆ ಹಲವರು ಒಂಟಿಯಾಗಿಯೇ ಇರಲು ಆಸೆ ಪಡುತ್ತಾರೆ. ಅವರದೇ ಲೋಕದ ಸುಖದ ಅಮಲಿನಲ್ಲಿ ತೇಲುತ್ತಾ ತನ್ನ ಸುಖದ ಬದುಕು ಇದೇ ಎಂದು ಬದುಕ ತೊಡಗುತ್ತಾರೆ. ಗಮನಿಸದ ಪೋಷಕರು ಮುಂದಿನ ಓದಿಗೆ ಎಂದು ದೂರದ ಹಾಸ್ಟೆಲ್ ಗೆ ಹಾಕಿ ಬಿಟ್ಟರೆ ಮುಗಿಯಿತು ಕತೆ!
ಇನ್ನು ಕೆಲವು ಮನೆಗಳಲ್ವಿ ಪೋಷಕರ ವಿದ್ಯಾರ್ಹತೆ ಕಡಿಮೆ ಇರುತ್ತದೆ, ಅವರು ತಮ್ಮ ಕರೆಗಳಿಗೆ ಮಾತ್ರ ಮೊಬೈಲ್ ಬಳಸಿದರೆ ಇಂಟರ್ ನೆಟ್ ಮಕ್ಕಳಿಗಾಗಿ ಮೀಸಲು! ಏನೂ ತಿಳಿಯದ ಪೋಷಕರನ್ನು ಏಮಾರಿಸುವುದು ಸುಲಭ. ಅದರಲ್ಲಿ ಹುಡುಕಿ, ನೋಡಿ ಬರೆಯಲು ಶಾಲೆಯಲ್ಲಿ ಅಸೈನ್ ಮೆಂಟ್ ಕೊಟ್ಟಿರುವರು ಎಂದರೆ ಮುಗಿಯಿತು, ಕಲಿಕೆಯ ಬಗ್ಗೆ ಮುಂದೆ ತಡೆಯಲಾರರು ಪೋಷಕರು! 'ಮಕ್ಕಳು ಕಲಿಯಲಿ, ನಮ್ಮಂತಾಗುವುದು ಬೇಡ' ಎಂದು ಸುಮಿಮನಿರುತ್ತಾರೆ!
ಮತ್ತೆ ಕೆಲವು ಪೋಷಕರಿಗೆ ತಮ್ಮ ಮಕ್ಕಳ ಮೇಲೆ ವಿಪರೀತ ಅಭಿಮಾನ, ನಂಬಿಕೆ! 'ನನ್ನ ಮಗ ಈ ವಯಸ್ಸಿನಲ್ಲೆ ಎಲ್ಲವನ್ನು ಕಲಿತಿರುವನು' ಎಂದು ಇತರರೊಡನೆ ಕೊಚ್ಚಿಕೊಳ್ಳುವ ಹಂಬಲ! ಅದಕ್ಕೆ ಮಗನಿಗೆ/ ಮಗಳಿಗೆ ಸ್ವಾತಂತ್ರ್ಯ ಕೊಡಲಾಗಿರುತ್ತದೆ! ಅವರಾಗಲೇ ಎಲ್ಲವನ್ನೂ ಕಲಿತೂ ಅಗಿರುತ್ತದೆ! ತಮ್ಮ ಮಕ್ಕಳನ್ನು ಹತೋಟಿಯಲ್ಲಿಡುತಾ, ಅಗತ್ಯಕ್ಕೆ ತಕ್ಕ ಹಾಗೇ ಏನು ಬೇಕು ಅದನ್ನು ಮಾತ್ರ ಕೊಡುತ್ತಾ ಶಿಸ್ತಿನಲ್ಲಿ ಬೆಳೆಸುವ ಪೋಷಕರೂ ಇದ್ದಾರೆ. ಅತಿಯಾದ ಶಿಸ್ತಿಗೆ ಹೆದರುವಂತೆ ನಾಟಕವಾಡಿ ಹಿಂದಿನಿಂದ ದಾರಿತಪ್ಪುವ ಮಕ್ಕಳೂ ಇರುವರು.
ಏನೇ ಆದರೂ ವಿಪರೀತ ನಂಬಿಕೆ ಬೆಳೆಯುತ್ತಿರುವ ಮಕ್ಕಳ ಮೇಲೆ ಸಲ್ಲದು! ಅವರಿಗೆ ಪೋಷಕರ ಪ್ರೀತಿ ಹಾಗೂ ಗಮನ ಎರಡೂ ಇರಬೇಕು. ಪೋಷಕರು ಕುಡುಕರಾಗಿದ್ದರೆ ಮಕ್ಕಳು ಅವರ ಆ ವೀಕ್ ನೆಸನ್ನೆ ಬಳಸಿಕೊಂಡು
ತಂದೆ ತಾಯಿಯರನ್ನೆ ಆಳುವವರೂ ಇರುತ್ತಾರೆ! ಮಕ್ಕಳು ನಮ್ಮನ್ನು ಪ್ರತಿ ಹೆಜ್ಜೆಯಲ್ಲೂ ಗಮನಿಸಿ, ನಮ್ಮನ್ನರಿತು ಅವರ ಕಾರ್ಯಗಳನ್ನು, ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ! ತಾಯಿಗೇ ಥಳಿಸುವ ಮಕ್ಕಳೂ ಇದ್ದಾರೆ!
ಇಂಥ ಸಮಯದಲ್ಲಿ ನಮ್ಮೆಲ್ಲಾ ವೀಕ್ ನೆಸ್, ದುರಭ್ಯಾಸಗಳನ್ನು ದೂರವಿಟ್ಟು, ತಮ್ಮ ಬೆಳೆಯುತ್ತಿರುವ ಮಕ್ಕಳ ಮೇಲೆ ಗಮನವಿಟ್ಟು, ಪ್ರೀತಿ ಕೊಟ್ಟು (ಅತಿಯಾದರೆ ಅಮೃತವೂ ವಿಷ, ಅತಿ ಪ್ರೀತಿಯೂ ಅವರ ಜೀವನವನ್ನು ಹಾಳುಮಾಡಬಹುದು!) ಚೆನ್ನಾಗಿ, ಶಿಸ್ತಿನಿಂದ ಬೆಳೆಸಿದರೆ ತಮ್ಮ ಮಕ್ಕಳಿಗೆ ಪೋಷಕರು ಉತ್ತಮ ಪೋಷಕರಾಗಿ, ಅವರ ಜೀವನ ಉತ್ತಮ ರೀತಿಯಲ್ಲಿ ಕಟ್ಟುವುದರಲ್ಲಿ ಎರಡು ಮಾತಿಲ್ಲ. ನೀವೇನಂತೀರಿ?
@ಪ್ರೇಮ್@
ವಿಳಾಸ
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ, ದ.ಕ 574239
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ