ಮಂಗಳವಾರ, ಜನವರಿ 29, 2019

736. ಭಾವಗೀತೆ-5. ನೆನಪುಗಳಿಗೆ

ಭಾವಗೀತೆ

ಹೋಗಿ ನೆನಪುಗಳೆ ಹೋಗಿ
ನನ್ನೊಲವ ಬಳಿ ಹೋಗಿ
ನನ್ನ ಹಾಗೆ ಅವಳೆದೆಗೂ
ಕಚಗುಳಿಯ ಹಾಕಿ ತಣಿಸಿ!//

ಮೊದಲ ನಾಚಿಕೆಯ ತಿಳಿಸಿ
ಮೊದಲ ನೋಟವ ಅರಸಿ
ಮೊದಲ ನಗೆಯನು ನೆನೆಸಿ
ಮನದಿ ಪುಳಕವ ತರಿಸಿ...

ಬೇಸರದ ಛಾಯೆಯನು
ಬದುಕಿಂದ ದೂರ ಸರಿಸಿ
ನೋವಿನೆಳೆಗಳಲಿ ನಗುವ
ಎಡೆಬಿಡದೆ ಪೋಣಿಸಿ...

ಮುಖದ ಕಾಂತಿಯ ತರಿಸಿ
ಕಣ್ಣ ಕಿಡಿಯನು ಬೆಳಗಿ
ಮೌನಧಾರೆಯ ಮರೆಸಿ
ಖುಷಿಯ ಕ್ಷಣಗಳ ಬೆಳೆಸಿ...

@ಪ್ರೇಮ್@
30.1.2019

ಭಾವಗೀತೆ

@ಪ್ರೇಮ್@
30.1.2019

ಕವಯತ್ರಿ ಇಲ್ಲಿ ನೆನಪುಗಳ ಹಾರಿ ಬಿಟ್ಟಿದ್ದಾರೆ....ವಿರಹ ಭಾವದಿ ನೊಂದಿರುವ ಅವನೇ ಕವಿತೆಗೆ ನಾಯಕ...

ಹೊರಟು ಬಿಡಿ ನೆನಪುಗಳೇ..ಅವಳೆಲ್ಲೇ ಅಡಗಿದ್ದರೂ ಹುಡುಕಿ...ನಮ್ಮ ಮೊದಲಿನ ಸರಸ, ಸಮಾಗಮದ ಹಳೆಯ ಮಧುರ ನೆನಪುಗಳ ನನ್ನಲ್ಲಿ ಮತ್ತೆ ಮತ್ತೆ ನೆನಪಿಸಿ ರೋಮಾಂಚನ ಉಂಟುಮಾಡುವಿರಲ್ಲ.
ಓ ನೆನಪುಗಳೇ ಅವಳ ಮನವನ್ನೊಮ್ಮೆ ನೀವು ಆಕ್ರಮಿಸಿಕ್ಕೊಂಡು ಅವಳಿಗೆ ಕಚಗುಳಿ ಇಟ್ಟುಬಿಡಿ.....ಅವಳು ಮನಸಾರೆ ನಗಲಿ...

ಮೊದಲು ನಾಚಿಕೆ ಪಟ್ಟ ,ಸಂಕೋಚಪಟ್ಟ ಕ್ಷಣಗಳನ್ನು ನೆನಪಿಸಿ..
ಆ ಬಳಿಕ ಮೊದಲ ನಗುವಿನ ಸಂದರ್ಭವನ್ನು ನೆನಪಿಸಿ ಬಿಡಿ..

ವಿರಸದ ವಿದ್ಯಮಾನಗಳನ್ನಯ ವಿಂಗಡಿಸಿ ಸರಸವನ್ನು ಮಾತ್ರ ನೆನಪಿಸಿ....ನೋವಿನ ಭಾವಗಳಲ್ಲಿ ನಗುವನ್ನೋ ಪೋಣಿಸಿಡಿ...

ಒಟ್ಟಾರೆ ಅವಳು ನಗಬೇಕು, ಅವಳ ಮುಖದ ಕಾಂತಿ ಹೆಚ್ಚಬೇಕು..ಅವಳು ಮೌನ ಮುರಿದು ಮಾತಿಗಿಳಿಯಬೇಕು..ಖುಷಿಯ ಕ್ಷಣಗಳ ಹೊತ್ತು ಹೊರಟು ಬಿಡಿ ನೆನಪುಗಳೇ ಅನಳೂರಿಗೆ...

ಸೊಗಸಾದ ಭಾವಯಾನ...

ಕವಿಭಾವಕ್ಕೆ ಧಕ್ಕೆ ಆದಲ್ಲಿ ಕ್ಷಮಿಸಿ.

*ಶ್ಯಾಮ್ ಪ್ರಸಾದ್*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ