ಭಾನುವಾರ, ಫೆಬ್ರವರಿ 10, 2019

760. ಭಾವಗೀತೆ-15 ಮಿಡಿದಿದೆ ಮನ


ಮಿಡಿದಿದೆ ಮನ

ಗಂಡಾಗಲಿ ಎಂದು ಹರಕೆ ಹೊತ್ತಿದ್ದರು
ಅಪ್ಪನ ಕಡೆಯವರು ನಾ ಹುಟ್ಟುವ ಮೊದಲೇ..
ಅಮ್ಮನಿಗೆ ಹೆಣ್ಣು ಮಗುವಿನ ಆಸೆಯಿತ್ತು
ಹೆಣ್ಣಾಗಿ ಕಷ್ಟ ಅನುಭವಿಸಿದರೂ..

ದೇವರೇಕೋ ಮೋಸಮಾಡಿ ಬಿಟ್ಟ
ಹುಟ್ಟಿಸಿ ತಂದ ನನ್ನ ಭೂಮಿಗೆ
ಅಪ್ಪನಿಗೆ ಗಂಡಾಗಲಿಲ್ಲ, ಅಮ್ಮನಿಗೆ ಹೆಣ್ಣಾಗಲಿಲ್ಲ..
ದೈವೇಚ್ಛೆಯಂತೆ ಯಾವುದೂ ಅಲ್ಲದ ಲಿಂಗ ನಾನು..

ಎತ್ತಿ ಮುದ್ದಾಡಿದವರೆಲ್ಲ ಪಿಸಿಪಿಸಿ ಎಂದರು
ನೋಡಲು ಬಂದವರು ಸುದ್ದಿಯ
ಊರ ತುಂಬಾ ಬಿತ್ತರಿಸಿದರು..
ಶಾಲೆಯಲಿ ಸಿಗಲಿಲ್ಲ ಸೀಟು..

ಸೇರಿಸಲಿಲ್ಲ ಗೆಳೆಯರು ಆಟಕ್ಕೂ
ಕೆಲವೊಮ್ಮೆ ಛೀಕರಿಸುವಾಗ ಜನ
ಅರ್ಥವಾಗುತಿರಲಿಲ್ಲ ಏಕೆಂದು
ಹಲ ಕೋಪಗಳ ಅಮ್ಮ ನನ್ನ ಮೇಲೆ
ತೀರಿಸುತ್ತಿದ್ದುದು ಏಕೆಂದು ಈಗೀಗ ಅಲ್ಪ ಸ್ವಲ್ಪ ಗೊತ್ತಾಗುತಿದೆ...

ನನ್ನ ತಪ್ಪೇ..ನಾನೇನು ಮಾಡಲಿ..
ಹೆಣ್ಣೆಂದು ಹೇಳಲೇ..ಗಂಡೆನ್ನಲೇ..
ಹೆತ್ತ ತಪ್ಪಿಗೆ ಅಮ್ಮ ಗಂಡಿನುಡುಗೆ ತೊಡಿಸಿದಳು
ಬೆಳೆದು ಬಾಳುವ ಸಲುವಾಗಿ ನಾ ಹೆಣ್ಣುಡುಗೆಗೆ ಮೊರೆಹೋದೆ..
ಬದುಕುವ ಸಲುವಾಗಿ ಅಷ್ಟೆ!

ಹೀಗೊಂದು ತೃತೀಯ ಲಿಂಗಿಗಳ
ಸೃಷ್ಟಿಯಿಹುದು ಜಗದಲಿ
ನಾವೂ ನಿಮ್ಮಂತೆ ಮನುಜರು
ನಮಗೂ ನಿಮ್ಮಂತೆ ಭಾವನೆಗಳಿವೆ
ನಮ್ಮನ್ನೂ ನಿಮ್ಮಂತೆ ಕಾಣಿ, ಗೌರವಿಸಿ..
@ಪ್ರೇಮ್@
11.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ