ಭಾನುವಾರ, ಫೆಬ್ರವರಿ 24, 2019

791. ಮಹತ್ವ

ಮಹತ್ವ

ಕೊಡದಿಹ ಮನುಜ ಘಳಿಗೆಗೆ ಮಹತ್ವ
ಬಾಳುವ ಹೇಗೆ ಜಗದೊಳಗೆ?
ಕಾಯಕ ಮಾಡುತ ಬದುಕುವ ತಪಸ್ಸು,
ಸಮಯವ ಬಿಡುವುದೆ ಇಳೆಯೊಳಗೆ?? //

ಮಣ್ಣನು ತಿಂದರೂ ಮೋಹವ ಬಿಡದೆ
ರೋಷ ದ್ವೇಷದಿ ಬಾಳುವಗೆ,
ಸಸ್ಯದಿ ಪಡೆದ ಗಾಳಿಯ ಕುಡಿದು
ಅದನೆ ಕಡಿಯುವ ಧರೆಯೊಳಗೆ//

ವಂಚನೆ ಮೋಸವು ತನ್ನಯ ಸ್ವತ್ತು
ಇತರರಿಗಲ್ಲ ಅದು ಎಂದೂ
ಅವನಿವನೆಂದೊಡೆ ತಪ್ಪೇ ತಪ್ಪು
ಕೋರ್ಟಿನ ಮೆಟ್ಟಿಲು ತಲುಪುವವರೆಗೆ! //

ತಾನೇ ದೊಡ್ಡದು, ತನ್ನದೆ ಮೇಲು
ಎನ್ನುತ ಮೆರೆವನು ಅಲ್ಪಕ್ಷಣ
ಕೊನೆಗೊಂದು ದಿನ ಗಂಟು ಮೂಟೆಯ
ಇಲ್ಲೇ ಬಿಟ್ಟು ತೆರಳಲು ಇಹುದು//

ಹೋಗುತಿಹೆ ನಾನು ಪ್ರತಿ ಘಳಿಗೆಯಲೂ
ಸಾವಿನ ಹತ್ತಿರ ಕ್ಷಣ ಕ್ಷಣವೂ
ಕಷ್ಟ ದುಃಖಗಳ ಮೆಟ್ಟಿ ನಿಲ್ಲುತ
ಬಾಳಲು ಬೇಕು ಪ್ರತಿಕ್ಷಣವೂ..//

ವದನದಿ ನಗೆಯು, ಮನದಲಿ ಖುಷಿಯೂ
ಹೃದಯದಿ ಪ್ರೇಮ, ಕೈಯಲಿ ದಾನ
ಬಯಸದೆ ಬರುವುದು ಭಾಗ್ಯವು ತಾನೇ
ಇಷ್ಟನು ಮಾಡಿದ ನರ ಶ್ರೇಷ್ಠನ ಮನೆಗೆ...//
@ಪ್ರೇಮ್@
23.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ