ಸೋಮವಾರ, ಫೆಬ್ರವರಿ 25, 2019

811. ಒಂಟಿಯಲ್ಲ...

ಒಂಟಿಯಲ್ಲ!

ಕಳೆದು ಹೋಗಿತ್ತು ಮನದ ಕೀಲಿಕೈ
ತನ್ನವಳೆಂದು ನಿನ್ನೆಯವರೆಗಿದ್ದವಳು
ಇಂದು ಪರರವಳಾಗಿದ್ದಳು..!
ಒಂದು ಜವಾಬ್ದಾರಿ ಕಳಕೊಂಡ ಸಂತಸ!
ಮಗಳ ಹೊಸಿಲು ದಾಟಿಸಿದ ದುಃಖ!!

ಮನದ ಬಾಗಿಲು ತೆರೆಯಬೇಕಿತ್ತು!
ಮನೆಯ ಬಾಗಿಲೂ ಮುಚ್ಚಿತ್ತು!!
ಕೀಲಿಕೈ ಹುಡುಕ ಬೇಕಿತ್ತು!!

ಗಡಿಬಿಡಿ, ಒತ್ತಡ, ಕೆಲಸದ ಹೊರೆ
ಜತೆಗೆ ದೇಹ, ಮನಸಿಗಾದ ವಯಸ್ಸು!
ಹೆಣ್ಣು ಹೆತ್ತ ತಂದೆಯ ಪರಿತಾಪ!

ಒಂಟಿತನದ ಛಾಯೆ ಒಂದೆಡೆಗೆ,
ಜತೆಗಿದ್ದ ಮಗಳು ಪರರ ಸೊಸೆಯಾದಳು!
ತಾನಿರಬೇಕು ಹೇಗೆ ಏಕಾಂಗಿಯಾಗಿ!
ಆಲೋಚನೆಯಲೆ ಕೀಲಿಕೈ ಕಳೆದ್ಹೋಗಿತ್ತು!
ಮನದ ಕೀಲಿಕೈ ಮಗಳೊಡನೆ ಜಾರಿತ್ತು!!

ಹುಡುಕಿದರು, ಕೆದಕಿದರು, ತದಕಿದರು!
ಮನೆ ಮನದ ಹೊರಗೆಲ್ಲಾ!
ಸಿಗಲಾರದ ಕೀಲಿಕೈಯಲ್ಲಾ!
ಮನವು ತನ್ನೊಳಿಲ್ಲ,ಮೂಕ ಮನೆಮಾತ್ರ!
ಕುಳಿತರು ಸುಮ್ಮನೆ ಯೋಚಿಸುತ್ತ, ಒಂಟಿಯಾಗಿ!
ಬೀಗ ಒಡೆಯೋಣವೆಂದು
ಅಂದುಕೊಂಡು
ಅಂಗಡಿಯಿಂದ ಗರಗಸ ಕೇಳಿ
ಹಣಕಾಗಿ ಜೇಬಿಗೆ ಹಾಕಲು ಕೈ
ಒಳಗಿಂದ ಇಣುಕಿತು ಕೀಲಿಕೈ!
ಹೇಳಿದಂತಾಯ್ತು 'ನೀ ಒಂಟಿಯಲ್ಲ, ನಾನಿರುವೆ ಜತೆಯಾಗಿ!'
@ಪ್ರೇಮ್@
25.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ