ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-50
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-50
ನಿನ್ನೆ ಮೊನ್ನೆ ಪ್ರಾರಂಭವಾಗಿದೆ ಅನ್ನಿಸುವ ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ ಅಂಕಣ ಬರಹ ಐವತ್ತನೇ ವಾರಕ್ಕಡಿಯಿಟ್ಟು ಇ-ಪತ್ರಿಕೆಯಲ್ಲೂ ತನ್ನ ಅರ್ಧ ಸೆಂಚುರಿ ಬಾರಿಸಿದ್ದು ಖುಷಿ ತಂದ ವಿಚಾರವಾಗಿದೆ. ಓದುಗರಿಗೊಂದು ಸಲಾಂ. ನಿಮ್ಮ ಪ್ರೋತ್ಸಾಹ ನಮ್ಮ ಟಾನಿಕ್. ಬದಲಾವಣೆ ಏನಾದರೂ ಬಯಸುವಿರಾದರೆ ಖಂಡಿತಾ ಕಮೆಂಟ್ ನಲ್ಲಿ ತಿಳಿಸಿ ಎನ್ನುತ್ತಾ ಐವತ್ತನೇ ವಾರದ ಬರಹಕ್ಕೆ ಪಾದಾರ್ಪಣೆ ಮಾಡುತ್ತಿರುವೆ. ನಿಮ್ಮ ಆಶೀರ್ವಾದ, ಹಾರೈಕೆಗಳಿರಲಿ.
ಪ್ರಪಂಚದಲ್ಲಿ ಕೋಟಿ ಕೋಟಿ ಜೀವಿಗಳಿವೆ. ಮನುಷ್ಯ ಉತ್ತಮ ಜೀವಿಯೆಂದು ನಾವು ಹೇಳಿಕೊಳ್ಳುತ್ತೇವೆ! ಹಾಗೆಯೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ಬಿಟ್ಟು ಬದುಕಬೇಕೆಂದು ತಿಳಿದವರು, ಹಿರಿಯರು ಕರೆ ನೀಡಿರುವರು. ಅವುಗಳ ಬಿಟ್ಟರೆ ಮಾತ್ರ ಮಾನವ ದೈವತ್ವಕ್ಕೇರುವನು. ಅದನ್ನು ಪಾಲಿಸುವವರು ಪ್ರಪಂಚದಲ್ಲಿ ಶೇಕಡಾ ೧ಕ್ಕಿಂತಲೂ ಕಡಿಮೆ ಜನರು. ಹಾಗಾದರೆ ಮಾತು ಬಂದ ತಕ್ಷಣ ಮನುಜ ಮೇಲಾಗುವನೇ?
ಮನುಷ್ಯ ಮೇಲ್ಮಟ್ಟದ ಜೀವಿಯಾಗುವುದು ಪರೋಪಕಾರ, ಪರಹಿತ, ಕೃತಜ್ಞತೆ, ಸಹಕಾರ, ಹೊಂದಾಣಿಕೆ, ಸಹನೆ ಮೊದಲಾದ ಗುಣಗಳನ್ನು ಕಲಿತುಕೊಂಡಾಗಲೇ. ಈಗಂತೂ ತಿರುಗಾಡಲು ತಮ್ಮದೇ ಕಾರು, ಪುಟ್ಟ ಸಂಸಾರ, ಯಾರೊಂದಿಗೂ ಬೆರೆಯದ ಮನೋಭಾವನೆ ಇರುವಾಗ ಇತರರೊಡನೆ ಹೊಂದಾಣಿಕೆ, ಇತರರ ಕಷ್ಟಕ್ಕೆ ಸಹಾಯ, ಸ್ಪಂದನೆ ಕರಗಿ ನಾನು, ನನ್ನದು, ನನಗೆ ಎಂಬಂತಾಗಿದೆ! ಇದೇ ಬಾವಿಯೊಳಗಿನ ಕಪ್ಪೆಯ ತೆರದಿ. ಜೀವನ ಕೂಡಾ..ಮನೆಯಲ್ಲಿ ಸಮಯ ಕಳೆಯೋಲ್ಲ! ಅದಕ್ಕಾಗಿ ವೀಕೆಂಡ್ ನಲ್ಲೂ ಪ್ರವಾಸ! ಹಿಂದಿನ ಕಾಲದಲ್ಲಿ ಮನೆಮಂದಿಯೆಲ್ಲ ಸುತ್ತಲೂ ಕುಳಿತು ಕತೆ, ಒಗಟು,ಗಾದೆ, ಯಕ್ಷಗಾನ, ನಾಟಕ ಎಂದೆಲ್ಲ ಮಾಡುತ್ತಾ ಮನೆಯೆಂದರೆ ಸದಸ್ಯರಿಗೆ ಸ್ವರ್ಗವಾಗಿರುತ್ತಿತ್ತು. ಮಕ್ಕಳ ಆಟ, ಹಿರಿಯರ ಅನುಭವದ ನುಡಿಗಳು ಉದಾತ್ತರನ್ನಾಗಿ ಮಾಡುತ್ತಿದ್ದವು. ಈಗ ಮನೆಯಲ್ಲಿ ಹಿರಿಯರೂ ಇಲ್ಲ, ಖುಷಿಪಡಲು ಮಕ್ಕಳ ಗುಂಪೂ ಇಲ್ಲ!
ಈಗೇನಿದ್ದರೂ ಶೀತಲ ಸಮರ ಯುಗ! ಮತ್ತೊಂದೆಡೆ ವಾಗ್ಯುದ್ಧ! ಮಗದೊಂದೆಡೆ ಲಿಖಿತಯುದ್ಧ! ತನಗಾಗದವರ ಮೇಲೆ ಹರಿಹಾಯ್ದು ಜಗಳವಾಡುವುದು, ಅವರು ಮಾಡಿದ ಕಾರ್ಯವನ್ನೆಲ್ಲ ವಿರೋಧಿಸುವುದು, ಅವರನ್ನು ಹೊಗಳುವವರ ತೆಗಳುವುದು, ನಾವೇ ಮೇಲು ಎಂದು ತಾನೇ ತೋರಿಸಿಕೊಂಡು ಮೆರೆಯುವುದು, ತಮಗಾಗದವರ ಬಗ್ಗೆ ಬಾಯಿಗೆ ಬಂದ ಹಾಗೆ ಕೆಟ್ಟದಾಗಿ ಬರೆಯುವುದು, ಇತರರಲ್ಲಿ ಸದಾ ಹುಳುಕು ಹುಡುಕುವುದು, ಇತರರ ಮನಗಳನ್ನೂ ಕೆಡಿಸುವುದು, ಚಾಡಿ ಇಂದು ಸಾಮಾಜಿಕ ಪಿಡುಗುಗಳಾಗಿವೆ.
ಮನುಷ್ಯನ ಮನಸ್ಸು ಸಂಕುಚಿತಗೊಂಡಷ್ಟು ಕಾಲ ಈ ರೀತಿ ನಡೆಯುತ್ತಲೇ ಇರುತ್ತದೆ. ಅಧಿಕಾರಕ್ಕಾಗಿ, ಸೀಟಿಗಾಗಿ, ನೋಟಿಗಾಗಿ ಹೋರಾಟ! ಜೀವನ ನಡೆಸುವುದರಲಿ ಎಲ್ಲರೂ ಶ್ರೀಮಂತರೇ, ಬಡವರಾದುದು ಹೃದಯ ಸಿರಿವಂತಿಕೆ ಇಲ್ಲದ ಕಾರಣ!
ನನ್ನ ಮಟ್ಟಕ್ಕೆ ನಾನು ಯೋಚಿಸುವಂತೆ ಅವರವರ ತಿಳುವಳಿಕೆಯ ಮಟ್ಟಕ್ಕೆ ಅವರು ಯೋಚಿಸುವರು! ಸದಾ ಅಲ್ಪ ಬುದ್ಧಿಯ ಮನುಜ ವಿಶಾಲ ಮನೋಭಾವ ಹೊಂದಿರಲಾರ!
ನಾಗರ ಹಾವು ತನ್ನ ದ್ವೇಷವನ್ನು ಹನ್ನೆರಡು ವರುಷಗಳ ವರೆಗೆ ಸಾಧಿಸುತ್ತದೆ ಎಂದು ಹೇಳುತ್ತಾರೆ. ಮನುಜ ಅದಕ್ಕಿಂತಲೂ ಕೆಟ್ಟವ! ಆದರೆ ಅಲ್ಲೆಲ್ಲೋ ದೈವಾಂಶ ಗುಣಗಳ ಮನುಜರು ಅಲ್ಲೊಂದು, ಅಲ್ಲೊಂದು ಕಾಣಲಸಿಗುತ್ತಾರೆ!
ಸಹೃದಯ ಸದಾ ಹೃದಯಗಳನ್ನು ಜೋಡಿಸುವುದಲ್ಲದೆ ಬದುಕು ಸಂತಸವಾಗಿಡಲು ಸಹಕರಿಸುತ್ತದೆ, ರೋಗಗಳಿಂದ ದೂರವಿರುತ್ತದೆ. ಸಂತಸ, ನೆಮ್ಮದಿಯ ಜೀವನ ಕೊಡುತ್ತದೆ. ಅಂತಹ ಸಹೃದಯದ ಸುಂದರ ಬದುಕು ನಮ್ಮದಾಗಲಿ. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ