ಭಾನುವಾರ, ಜೂನ್ 9, 2019

1056. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-47

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-47

ಮನದ ಕದ ತಟ್ಟಿದಾಗ ಅರಿವಾಗುವುದು ನಮ್ಮ ಮನದೊಳಗೇ ಹುದುಗಿದ ಅದೆಷ್ಟು ಅರಿವುಗಳು, ಭಾವನೆಗಳು, ಅಂತರಂಗದ ಅಳಲುಗಳ ಸರಪಣಿ, ಸುಖ-ದು:ಖಗಳ ಸರಮಾಲೆ! ನಮ್ಮ ಮನಕೆ ಅಪಾರ ಶಕ್ತಿಯಿದೆ. ಬೇರೆ ಗ್ರಹಗಳ ಹುಡುಕಿದ, ಕಂಪ್ಯೂಟರ್ ನಲ್ಲೆ ಪ್ರಪಂಚ ನಿಭಾಯಿಸಬಲ್ಲ ಮನದ ವೀಕ್ ನೆಸ್ ಎಂದರೆ 'ಪ್ರೀತಿ' ಒಂದೇ!!
      ಪ್ರೀತಿಯೊಂದಿದ್ದರೆ ಮನುಷ್ಯ ಸುಖಿ, ತೃಪ್ತ! ಕೋಟಿಗಟ್ಟಲೆ ಹಣ ಕೊಳೆಯುತ್ತಿದ್ದರೂ ಪ್ರೀತಿಯಿಲ್ಲದೆ ಅವನದನ್ನು ಅನುಭವಿಸಲಾರ! ಮಾನವನ ಓಟವನ್ನು ತಡೆಹಿಡಿಯುವುದು ಮನದ ಪ್ರೀತಿ, ಗಾಳಿ,ಶಬ್ದಕ್ಕಿಂತಲೂ ವೇಗವಾಗಿ ಓಡುವುದೂ ಮನಸ್ಸೇ..!
     ಪ್ರಪಂಚದಿ ಇತರ ಜೀವಿಗಳಿಗಿಂತ ತಾನು ಉನ್ನತ ಜೀವಿಯೆಂದು ಬೆನ್ನು ತಟ್ಟಿಕೊಳ್ಳುವುದು ಮನುಜ ಮನಸ್ಸಿನಿಂದಲೇ! ತನ್ನವರಿಗೆ ಕೇಡು ಬಗೆವುದು, ಪರರ ನಂಬದಿರುವುದು, ಮೋಸ ಮಾಡಲೂ ಮನಸ್ಸೇ ಕಾರಣ. ಪ್ರೀತಿಯ ಹಾಗೆ ದ್ವೇಷ, ಮತ್ಸರ, ಕಾಮನೆ, ಕೋಪ ಎಲ್ಲಾ ಅರಿಷಡ್ವರ್ಗಗಳ ಮೂಲಬೇರು ಮನ. ಗುಣಾವಗುಣಗಳನ್ನೂ ಮನುಜನಲ್ಲಿ ಅಳತೆ ಮಾಡುವುದೂ ಅವನ ಮನಸ್ಸಿನಿಂದಲೇ. ಒಳ್ಳೆಯ ಮನಸ್ಸಿನಲ್ಲಿ ಅಲ್ಪ ದಾನ ಮಾಡಿದರೂ ಮತ್ತೊಂದು ಮನಕ್ಕದು ಇಷ್ಟವಾಗುತ್ತದೆ! ಅಲ್ಲದ ಒಲ್ಲದ ಮನಸ್ಸಿನಿಂದ ಹಾಲು- ತುಪ್ಪ  ಕೊಟ್ಟರೂ ಅದು ರುಚಿಸದು! ಇದಕ್ಕೆಲ್ಲ ಕಾರಣ ಮನಸ್ಸೆ!
      ಮನಸಾಗಲೂ, ಮುನಿಸು ಬರಲೂ, ಮನರಂಜನೆ ಪಡೆಯಲೂ, ಮೋಹಿಸಲೂ, ಮುಕ್ತಿ ಹೊಂದಲೂ, ಮೋಸ ಮಾಡಲೂ, ಮನದುಂಬಿ ನಗಲು, ಮೋಕ್ಷ ಪ್ರಾಪ್ತಿಗೂ, ಮಿಂಚಂತೆ ಓಡಲು, ಮನಗಳ ಜೋಡಿಸಲೂ, ಮನೆಯೊಡೆಯಲೂ ಕಾರಣ ಮನಸ್ಸೇ. ನಮ್ಮ ಮನಸ್ಸು ಒಳ್ಳೆಯದಾದೊಡೆ ಮೇಲೇರುತ್ತಾ ಹೋಗುತ್ತೇವೆ. ಮನ ಕೆಟ್ಟದಾದೊಡೆ ಕೆಳಗಿಳಿಯುತ್ತೇವೆ! ಸೋಲ್, ಮೈಂಡ್, ಇನ್ನರ್ ಪವರ್ ಅಂತಾನೂ ಕರೆಯಬಹುದು ಅದನ್ನು!
    ಮನೋಬಲ, ಮನಃಶಾಂತಿ, ಮನದ ಶಕ್ತಿ, ಮನೋಚಾಂಚಲ್ಯ, ಮನೋವೃತ್ತಿ, ಮನೋನಿಗ್ರಹ...ಎಲ್ಲವೂ ಮನಸ್ಸಿನ ಮೇಲೇ ಕೇಂದ್ರೀಕರಿಸಿವೆ! ಕಾಲ ಕೆಟ್ಟು ಹೋಗಿದೆ ಎಂದರೆ ಕಾಲ ಕೆಡಲಿಲ್ಲ, ಬದಲಾಗಿ ಮನುಷ್ಯನ ಮನಸ್ಸು ಕೆಟ್ಟಿದೆ!ಮನಸ್ಸು ವಿಶಾಲವಾಗಿರಬೇಕು, ಮನಸ್ಸು ಸಂಕುಚನಗೊಂಡರೆ ಕಾಲ ಕೆಟ್ಟ ಅನುಭವವಾಗುತ್ತದೆ. ಹೃದಯ ಮನಸ್ಸಿಗೆ ಭಾವನೆಗಳ ನೀಡಿ ಸಹಕರಿಸುತ್ತದೆ!
     ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದೆಂಬ ಗಾದೆಯಿದೆಯಲ್ಲವೇ? ಮನೋಬಲ ಇದ್ದ(ಬಂದ) ಕಾರಣ ಹನುಮಂತ ಸಾಗರ ಲಂಘಿಸಿದ, ರಾಮ ರಾವಣನೊಡನೆ ಯುದ್ಧಕ್ಕಿಳಿದ, ಪಾಂಡವರೈವರೇ ನೂರು ಕೌರವರ ಎದುರಿಸಿದರು! ಅಲ್ಲಿ ನಾಲಗೆಯ ಸತ್ಯವೂ ಸಹಕರಿಸಿತು.
    ದೈವೀ ಗುಣಗಳನ್ನು ಬೆಳೆಸಿಕೊಂಡಾಗ ಮನಸ್ಸಿನ ಶಕ್ತಿ ವೃದ್ಧಿಸುತ್ತದೆ, ಬಲ ಹೆಚ್ಚುತ್ತದೆ, ಉತ್ತಮ ಕಾರ್ಯದತ್ತ ಒಲವಾಗುತ್ತದೆ! ಇದಕ್ಕೆ ಹಿರಿಯರು ಯೋಗ, ಧ್ಯಾನ, ಮಂತ್ರಪಠನ, ಓದು, ಆಟೋಟ, ಭಜನೆ, ಪೂಜೆ ಮೊದಲಾದವುಗಳನ್ನು ಸೂಚಿಸಿರುವರು. ಮನಸ್ಸು ಮಲಿನಗೊಂಡಾಗ ಕೋಪ, ವೈಷಮ್ಯ ದ್ವೇಷ, ಅಹಂಕಾರ, ನಾನೇ ಎಂಬ ಅಹಂ, ಬೇರೆಯವರ ತುಳಿಯುವ ಭಾವ ಸೋ ಕಾಲ್ಡ್ "ವಿಲನ್"ನ ಗುಣಗಳು ಬೆಳೆಯುತ್ತವೆ! ನಮ್ಮನ್ನು ಕೆಡಿಸುವುದು ಬೇರಾರೂ ಅಲ್ಲ, ನಮ್ಮೊಡನಿರುವ ವಿಕೃತ ಮನಸುಗಳೇ. ಅವರ ಮಾತು, ಹಾವಭಾವ, ವರ್ತನೆ, ಸುಖ-ದು:ಖ, ನಯವಂಚನೆ,ಮೋಸ, ಗೆಳೆತನ, ಸಂತಸ ನಮ್ಮ ಮನೋಧರ್ಮವನ್ನು ನಿರ್ಧರಿಸುತ್ತವೆ!
ನಮ್ಮನ್ನು ನಾವು ಬೆಳೆಸಿಕೊಳ್ಳಲು ನಮ್ಮ ನಮ್ಮ ಮನಸ್ಸನ್ನು ಕೆಡಿಸಿಕೊಳ್ಳದೆ, ಹಾಳು ಮಾಡಿಕೊಳ್ಳದೆ,ಆರೋಗ್ಯವಂತನಾಗಿ ಇರಿಸಿಕೊಳ್ಳಲು ಪ್ರಯತ್ನಿಸೋಣ. ಅಲ್ಪರ ಮನದ ಸಂಗ ಬೇಡ. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ