ನಾವು ಒಳ್ಳೆಯವರಾದರೂ ನಮಗೇಕೆ ವೈರಿಗಳಿರುತ್ತಾರೆ?
ಹೌದು, ನಾವು ಕೆಟ್ಟವರಲ್ಲ, ನಾವು ಒಳ್ಳೆಯವರೇ. ನಾವು ಮಾಡುವುದು ಪರೋಪಕಾರ, ಸಹಿಷ್ಣುತೆ, ಪರರಿಗಾಗಿ ದಾನ, ಧರ್ಮ ಪಾಲನೆ, ಯಾರ ಮನ ನೋಯಿಸಲು ಇಚ್ಚಿಸೆವು, ನಾವಾಯಿತು ನಮ್ಮ ಕೆಲಸವಾಯಿತು. ಆದರೂ ಮನ ನೋಯಿಸುವವರು ಹಲವರಿಹರು. ಕಾರಣ ಇದ್ದೋ, ಇಲ್ಲದೆಯೋ ಹಲವಾರು ಕ್ಷಣಗಳಲ್ಲಿ ,ಹಲವಾರು ದಿನಗಳಲ್ಲಿ ಹಲವಾರು ಮನಗಳು ನಮ್ಮಲ್ಲಿ ದ್ವೇಷದ ಬೀಜ ಬಿತ್ತುತ್ತವೆ. ಅದು ಹೇಗೆ, ಏನು, ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಯಾರ ಬಳಿಯೂ ಇರುವುದಿಲ್ಲ. ಯಾರದ್ದೂ ತಪ್ಪಿರುವುದಿಲ್ಲ, ಒಬ್ಬರು ಮತ್ತೊಬ್ಬರ ಬಗ್ಗೆ ಹೀಯಾಳಿಸುತ್ತಾ, ತೆಗಳುತ್ತಾ ದಿನ ಕಳೆಯುತ್ತಿರುತ್ತಾರೆ.
ನೆರೆಮನೆಯಿಲ್ಲದೆ ಅರಮನೆಯಿಲ್ಲ ಎಂಬುದೊಂದು ಗಾದೆ. ಯಾವ ಮನೆಯಾದರೂ ನೆರೆಮನೆಯಿರಲೇಬೇಕು. ನಮ್ಮ ಹಲವಾರು ಜನರಿಗೆ ನೆರೆಮನೆಯವರ ಕಂಡರಾಗದು. ಪ್ರತಿದಿನ ಜಗಳ, ಪ್ರತಿ ವಸ್ತುವಿಗೂ ಜಗಳ. ಪ್ರತಿ ಜನರ ಮುಖ ನೋಡುವಾಗಲೂ ಊದಿಸಿಕೊಳ್ಳುವ ಸ್ವಭಾವ ಹೆಂಗಸರಿಗೇ ಜಾಸ್ತಿ. ಯಾಕೆ ನಮ್ಮ ಬದುಕು ಹೀಗೆ? ನಾವ್ಯಾಕೆ ಕೆಲವರ ಜೊತೆ ಮುಖ ಸಿಂಡರಿಸುತ್ತೇವೆ? ನಮಗ್ಯಾಕೆ ಅವರು ಮಾಡಿದ್ದೆಲ್ಲಾ ತಪ್ಪೆನಿಸುತ್ತೆ? ನಮ್ಮ ಗುಣವನ್ನೇ ನಾವು ಹಲವು ಸಲ ಮೆಲುಕು ಹಾಕಿದರೂ ನಮ್ಮನ್ನು ಹಲವೆಡೆ ನಾವು ಬಿಟ್ಟು ಕೊಡಲಾರೆವು. ನಮ್ಮ ಮೆದುಳು ಅವರನ್ನು ವೈರಸ್ ಎಂದು ಮೊದಲೇ ಪತ್ತೆಹಚ್ಚಿ, ಏನು ಮಾಡಿದರೂ ಅವರನ್ನು ನಮ್ಮ ಜೀವನದೊಳಗೆ ಬಿಟ್ಟುಕೊಳ್ಳಲಾರದು! ಹಾಗೆಯೇ ಊರಿಡೀ ಸುಳ್ಳ, ಕಳ್ಳ ಎಂದು ಹೇಳಿಸಿಕೊಂಡರೂ ಕೆಲವು ಜನರ ಇನ್ನೊಂದು ಮುಖ ತಿಳಿದ ನಾವು ಪರರ ವಿರೋಧದ ಹೊರತಾಗಿಯೂ ಅವರ ಪರ ವಹಿಸಲು ಹಿಂಜರಿಯಲಾರೆವು. ನಾವೇಕೆ ಹೀಗೆ?
ಕೆಲವೊಂದು ಅರ್ಥವಿರದ, ಉತ್ತರಗಳಿರದ ಪ್ರಶ್ನೆಗಳು. ಇಂದು ಬೇಡವೆಂದು ಬಿಟ್ಟಿರುವ ಕೆಲಸಗಳನ್ನು ನಾಳೆ ನಾವೇ ಇಷ್ಟಪಟ್ಟು ಮಾಡುವವರಾಗುತ್ತೇವೆ. ಇಂದು ಪ್ರೀತಿಸುವವರನ್ನು ಇನ್ನೊಂದು ಕ್ಷಣದಲ್ಲೆ ಪರಮ ಶತ್ರುವಿನಂತೆ ದ್ವೇಷಿಸಲಾರಂಭಿಸುತ್ತೇವೆ. ಪ್ರೇಮಿ, ಸ್ನೇಹಿತ/ಜೀವದ ಗೆಳತಿ ಅನಿಸಕೊಂಡವರ, ಬಿಟ್ಟಿರಲು ಸಾಧ್ಯವೇ ಇಲ್ಲ ಅಂದುಕೊಂಡವರು ನಮ್ಮನ್ನು ದೂರ ಮಾಡುತ್ತಾರೆ ಅಥವಾ ನಾವೇ ದೂರಾಗುತ್ತೇವೆ. ಭಾವನೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಾ ಇರುತ್ತವೆ. ಕೆಲವೊಮ್ಮೆ ಜೀವನವನ್ನು ಅತಿಯಾಗಿ ಪ್ರೀತಿಸಿದರೆ ಮಗದೊಮ್ಮೆ ಜೀವನವೇ ಬೇಡವೆನಿಸಿ ಬಿಡುತ್ತದೆ.
ಒಮ್ಮೆ ಕಲಿಯಲು ಪ್ರೇರೇಪಿಸುತ್ತದೆ ಮನಸ್ಸು, ಮತ್ತೊಮ್ಮೆ ಕಲಿಸಲು! ಒಮ್ಮೊಮ್ಮೆ ಹಲವರಿಗೆ ಸಜ್ಜೆಸ್ಟ್ ಮಾಡುವ ನಾವು ಮತ್ತೊಮ್ಮೆ ನಮಗೆ ಬೇಕಾದಾಗ ಅದನ್ನು ಮರೆತು, ಅದೇ ವಿಚಾರವನ್ನು ಬೇರೆಯವರಿಂದ ಮತ್ತೆ ಕೇಳಿ ತಿಳಿಯುತ್ತೇವೆ. ಮಗದೊಮ್ಮೆ ಏನೂ ಅರಿಯದ ಶೂನ್ಯರಾಗುತ್ತೇವೆ. ಒಮ್ಮೆ ಬ್ರಹ್ಮಾಂಡದಿ ನಾವೇ ಗ್ರೇಟ್ ಅನಿಸಿದರೆ ಮತ್ತೊಮ್ಮೆ ಹುಟ್ಟಿಸಿದ ದೇವರಿಗೆ ಹಿಡಿಶಾಪ ಹಾಕುತ್ತಿರುತ್ತೇವೆ. ನಾನು ಎಂದು ಮೆರೆದರೆ, ನಾವು ಎಂದು ಕಾಲಿಗೂ ಬೀಳುತ್ತೇವೆ. ಜೀವನದ ಮೂಲ, ಕಟುಸತ್ಯ, ಬದಲಾಗುವ ಭಾವ-ಭಾವನೆಗಳು ಇತರರಿಗೂ ಮುಜುಗರ, ಕಿರಿಕಿರಿಯೆನಿಸುವಷ್ಟು!
ನಾವು ಬದಲಾಗಬೇಕು, ಸರ್ವರಿಗೂ ಹಿತವರಾಗಬೇಕೆಂದು ನಮಗೆ ನಾವೇ ಅಂದುಕೊಂಡು, ಸಂಬಾಳಿಸಿಕೊಂಡು, ತಿದ್ದಿ ನಡೆಯುತ್ತಾ ಹೋಗುತ್ತಿದ್ದರೂ ಸಹ ಬೇಲಿಯ ಮುಳ್ಳು ತಾನಾಗೇ ಸೆರಗಿನ ತುದಿಗೆ ಸಿಕ್ಕಿ ನಮ್ಮನ್ನು ಎಳೆದಾಡಿಸುತ್ತಿರುತ್ತದೆ. ಸತ್ತ ಪ್ರಾಣಿಯ ತಿನ್ನಲು ಕಾಗೆ ಹದ್ದುಗಳು ಮುತ್ತಿಕ್ಕುವಂತೆ ಕಷ್ಟ, ದು:ಖಗಳು ನಮ್ಮನ್ನರಸಿ ಬಂದು ನಮ್ಮ ದೇಹ ಹಾಗೂ ಮನಸ್ಸಿನಲ್ಲೆ ವಾಸ್ತವ್ಯ ಹೂಡಿರುತ್ತವೆ. ಅದ್ಯಾಕೋ ನಮ್ಮನ್ನು ಬಿಟ್ಟು ಹೋಗುವುದೆಂದರೆ ಅವುಗಳಿಗಿಷ್ಟವಿಲ್ಲ. ಆ ನೋವು, ಹತಾಶೆ, ನಿರಾಸೆಗಳ ದಳ್ಳುರಿಯಲ್ಲಿ ನೊಂದು ಬೆಂದ ನಮ್ಮ ಮನ ಹಲವಾರು ದಿಸೆಯಲ್ಲಿ ಆಲೋಚಿಸಿ, ಆಲೋಚಿಸಿ ತಿರುಕನಂತೆ, ಮರ್ಕಟನಂತೆ ಯೋಚಿಸುತ್ತಿರುತ್ತದೆ.
ಯಾವುದೇ ಯೋಚನೆ ಬರಲಿ, ಯಾವುದೇ ಕೆಲಸವಾಗಲಿ, ಯಾರದೇ ಗೆಳೆತನ ಪ್ರೀತಿ ಸಿಗಲಿ, ಬಿಡಲಿ, ಯಾರು ಮುಖ ತಿರುಗಿಸಲಿ, ನಮ್ಮ ಆಶಯವೊಂದೇ. ನಮ್ಮಿಂದಾಗಿ ಇತರರು ಬೆಳೆಯಬೇಕು, ಪರರಿಗೆ ನಮ್ಮಿಂದ ಉಪಕಾರವಾಗಬೇಕೇ ಹೊರತು ಉಪದ್ರವವಾಗಬಾರದು. ಪರರು ನಮ್ಮಂತಾಗಬೇಕೆಂದು ಕನಸು ಕಾಣಬೇಕು, ನಮ್ಮ ಬುದ್ಧಿ ನೋಡಿ ಇತರರೂ ಹುಟ್ಟಿದರೆ ಅವರಂತ ಮಕ್ಕಳು ಹುಟ್ಟಲಿ, ಇದ್ದರೆ ಅಂತಹ ಬಂಧು/ಗೆಳೆಯನಿರಲಿ ಎಂದು ಹೇಳುವಂಥ ಗುಣವುಳ್ಳವರು ನಾವಾಗಬೇಕು. ನೀವೇನಂತೀರಿ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ