ಭಾನುವಾರ, ಆಗಸ್ಟ್ 4, 2019

1160. ಪ್ರೀತಿಯ ಲೇಖನಿಗೆ

ಪ್ರೀತಿಗೆ

ನನ್ನೊಲವ ಲೇಖನಿಯೇ ನೀನೇಕೆ ನಿಂತೆ?
ನನ್ನ ಹೃದಯದ ಪದವ ಗೀಚಲೇಕೆ ಮರೆತೆ?//

ನೀನಿಲ್ಲದೆ ನಾನಿಲ್ಲ, ಕರೆವೆ ನೆನೆದಾಗೆಲ್ಲ,
ಹೃದಯದ ಮಾತನ್ನು ಕೈಯಿಂದ ಮೂಡಿಸಿಲ್ಲ?
ಏಕೀ ತರದ ಕೋಪ ನನ್ನಯ ಮೇಲೆ?
ನನ್ನ ಮಿಡಿತವು ನೀನೇ, ನನ್ನ ತುಡಿತವು ನೀನೇ..//

ಬಾಯಾರಿದಾಗೆಲ್ಲ ಶಾಯಿ ಕುಡಿಸುವೆನಲ್ಲ?
ಆಗಾಗ ಮೈ ತೊಳೆದು ಒರೆಸಿಯೇ ಇಡುವೆನಲ್ಲ?
ನೀನೆನ್ನ ತಾಯಂತೆ,ಪ್ರೀತಿಯಿಂದ ಬರೆವೆಯಲ್ಲ!
ಇಂದೇಕೆ ಹೀಗಾದೆ? ನಿನ್ನ ನೋವ ಸಹಿಸೆನಲ್ಲ!//

ಮೌನದರಗಿಣಿಯೇ ಇಂದು ನನ್ನಲ್ಲಿ ಕೋಪವೇಕೆ?
ನನ್ನ ಸಂಗಾತಿಯೇ ಇಂದು ಒಲವಿಗೇ ಬರವೇಕೆ?
ನೀನಿಲ್ಲದಿರಲಾರೆ ಕವಿಯಾಗಿ ನಾನಿನ್ನು,
ಹೊಸ ಗೆಳತಿಯಾ ತರಲೇ ನಿನ್ನ ಬದಲಿಗೆ ಇನ್ನು?

ನಿನ್ನೊಡನೆ ಬೆಸೆದಿಹುದು ಅನುಬಂಧದಾ ಬೇರು,
ನನ್ನ ಕಾಯಕಕೆಲ್ಲಾ ನೀನೇ ನನ್ನ ತೇರು,
ನೀನು ಹೋದರೆ ಮುಂದೆ ನನ್ನ ಕವನದ ಸಾಲು,
ನೀನಿರದಿರೆ ಬಳಿಯು ಒಂಟಿ ನನ್ನೀ ಬಾಳು!//
@ಪ್ರೇಮ್@
15.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ