ಭಾನುವಾರ, ಆಗಸ್ಟ್ 18, 2019

1190. ಜನಮನಕೆ

ಹಾಯ್! ನಿಮ್ಮನ್ನು ಯಾರಾದ್ರೂ ಗೇಲಿ ಮಾಡುತ್ತಾರೆಯೇ..ಯಾರಾದ್ರೂ ನಿಮಗೆ ಅವ್ಯಾಚ್ಯ ಶಬ್ದಗಳಿಂದ ಬೈತಾರಾ? ನೀನೆನಕ್ಕೂ ಪ್ರಯೋಜನ ಇಲ್ಲಾಂತ ಹಂಗಿಸ್ತಾರಾ..ಹಾಗಾದ್ರೆ ಮುಂದೆ ಓದಿ....
          ನಮ್ಮ ಬಗ್ಗೆ ಹೆಚ್ಚು ತಿಳಿದವರು ನಾವೇ. ಇತರರಿಗೇನು ಗೊತ್ತು ನಾವೇನು ಅಂತ! ಇತರರು ನಮ್ಮ ಕಾಲೆಳೆಯುತ್ತಿದ್ದಾರೆಂದರೆ ಅವರು ನಮ್ಮ ಕಾಲ ಕೆಳಗಿದ್ದಾರೆಂದು ಅರ್ಥ. ಇತರರು ನಿಮ್ಮ ಹಿಂದೆ ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆಂದರೆ, ನೀವು ಅವರಿಗಿಂತ ಮುಂದಿದ್ದೀರೆಂದು ಅರ್ಥವಲ್ಲವೇ!
             ನಿಜ ಜೀವನವೇ ಬೇರೆ, ಬರಹವೇ ಬೇರೆ, ಕೆಲವೊಮ್ಮೆ ಮನದ ನೋವುಗಳು ಬರಹದಲ್ಲಿ ಕಾಣಬಹುದು. ನಮಗಾಗದವರನ್ನು ಬರಹದಲ್ಲಿ ಟೀಕಿಸಬಹುದು. ಹಾಗಂತ ಕೆಟ್ಟದು ಹೇಳಿದರು, ಯಾರೋ ಏನೋ ಅಂದರೆಂದು ನಮ್ಮ ಸಂತೋಷವನ್ನು ಅವರಿಗಾಗಿ ಹಾಳು ಮಾಡಿಕೊಳ್ಳಲಾದೀತೇ. ಯಾರು ಏನೇ ಹೇಳಿದರೂ ನಾನೇನು ಅಂತ ನನಗೆ ಗೊತ್ತು. ನನ್ನ ಒಳ್ಳೆಯ ದಾರಿಯಲ್ಲಿ ನಾನು ನಿತ್ಯ ಸಾಗುವೆ, ಇತರರ ಬಗೆಗೆ ತಲೆ ಕೆಡಿಸಿಕೊಳ್ಳಲಾರೆ, ನನ್ನ  ಜೀವನವನ್ನು ನಾನು ಹೇಗೆ ರೂಪಿಸಿಕೊಳ್ಳಬೇಕೆಂಬುದು ನನಗೆ ತಿಳಿದಿದೆ. ನನಗೆ ಸಂಬಂಧಿಸದ, ನನ್ನ ಏಳಿಗೆಯನ್ನು ಸಹಿಸದ, ನಾನು ಪ್ರೀತಿಸದ , ನನ್ನ ಬಗ್ಗೆ ತಿಳಿಯದ, ಇತರರು ಏನು ಮಾತಾಡಿಕೊಂಡರೆ ನನಗೇನು? ನಾಯಿ ಬೊಗಳುವುದರಿಂದ ನಕ್ಷತ್ರ ಉರುಳುವುದೇ?
        ನಾನು ಏನೆಂಬುದು ನನಗೆ ಮಾತ್ರ ಗೊತ್ತು, ಇತರರಿಗಲ್ಲ, ನನ್ನ ಮೇಲೆ ನನಗೆ ಪ್ರೀತಿಯಿದೆ, ಭರವಸೆಯಿದೆ, ಆಸೆಯಿದೆ! ನನ್ನನ್ನು ನಾನು ಇತರರಿಗಾಗಿ ಅಲ್ಲ, ನನಗಾಗಿ ಬದುಕಿಸಿಕೊಂಡಿದ್ದೇನೆ. ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಬೇಕಾದ ಶಕ್ತಿಯನ್ನು ನಾನು ಕಳೆದುಕೊಳ್ಳಬಾರದು. ಮಾನಸಿಕವಾಗಿ ಎಂದಿಗೂ ಕುಗ್ಗಬಾರದು. ನನ್ನ ದೃಢತೆ, ಶಕ್ತಿ ನಾನೇ ಹೆಚ್ಚಿಸಿಕೊಳ್ಳಬೇಕು. ನನ್ನನ್ನು ಈ ಪ್ರಪಂಚದ ಯಾವ ಶಕ್ತಿಯೂ ಕುಗ್ಗಿಸಲಾರದು. ನನ್ನ ಮನಸ್ಸನ್ನು ನಾನು ಸಂಬಂಧ ಇಲ್ಲದ ಇತರರಿಗಾಗಿ ಕುಗ್ಗಿಸಿಕೊಳ್ಳಲಾರೆ. ಇಂತಹ ದೃಢ ಮನಸ್ಸು ಬೇಕೇ ಹೊರತು, ಯಾರೋ ಅವರ ಮಾನಸಿಕ ಮಟ್ಟಕ್ಕೆ ಮಾತನಾಡಿದರೆಂದು ನಾವು ವಿಚಲಿತವಾಗುವುದೇ? 
        ಅವರವರು ಅವರವರ ಮಾನಸಿಕ ಮಟ್ಟಕ್ಕೆ ಸರಿಯಾಗಿ ಯೋಚಿಸುತ್ತಾರೆ. ಉದಾಹರಣೆಗೆ ದೇವರು ಪ್ರತ್ಯಕ್ಷನಾಗಿ ಎದುರು ಬಂದು ನಿನಗೇನು ಬೇಕೋ ಕೇಳಿದರೆ ಮಗುವೊಂದು ರಾಶಿ ಚಾಕಲೇಟ್ ಕೇಳಬಹುದು. ಒಬ್ಬ ಹಣ, ಐಶ್ವರ್ಯ ಕೇಳಿದರೆ ಮತ್ತೊಬ್ಬ ಪಕ್ಕದವನ ಧನ ಕರಗಲು ಆಶಯ ವ್ಯಕ್ತಪಡಿಸಬಹುದು. ಬುದ್ಧಿವಂತ ಆರೋಗ್ಯ, ಶಾಂತಿ, ನೆಮ್ಮದಿ ಕೇಳಬಹುದು. ಮತ್ತೋರ್ವ ಉತ್ತಮ ಸಮಾಜಕ್ಕಾಗಿ ಪ್ರಾರ್ಥಿಸಬಹುದು. ಹೀಗೆ ಮಾನವರಲ್ಲಿ ಭಿನ್ನಾಭಿಪ್ರಾಯ ಸದಾ ಇರುತ್ತದೆ. ಅದನ್ನು ಸ್ವೀಕರಿಸಿ, ತಿಳಿದು ಮುನ್ನಡೆಯ ಬೇಕು.
   ದಾರಿಯಲ್ಲಿ ನಡೆಯುವಾಗ ಕಲ್ಲು ಮುಳ್ಳುಗಳಿರೋದು ಸಹಜ. ಅವುಗಳನ್ನು ನಿವಾರಿಸಿಕೊಂಡು ಹೋಗಬೇಕೇ ಹೊರತು ನಡೆಯುವುದನ್ನೇ ನಿಲ್ಲಿಸುವುದೇ? 
    ನಮ್ಮ ಮನಸ್ಸಿಗೆ ಅಗಾಧ ಶಕ್ತಿಯಿದೆ. ನಾವು ಆಳವಾಗಿ ಯೋಚಿಸಿ, ದೃಢ ನಿರ್ಧಾರ ತಳೆದರೆ ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನೆನಪಿರಲಿ, ಬೇರೆಯವರು ಏನೋ ಹೇಳಿದರೆ ಅದು ಕುಗ್ಗಬಾರದು, ಹೊಗಳಿದರೆ ಹಿಗ್ಗಲೂ ಬಾರದು, ನಾವು ನಾವೇ. ಅರ್ಜುನನಂತೆ ನಮ್ಮ ಗುರಿ, ಛಲ ನಮ್ಮೊಡನಿದ್ದರೆ ಪ್ರಪಂಚದ ಯಾವ ವಸ್ತುವೂ, ಯಾವ ಜೀವಿಯೂ ನಮ್ಮನ್ನು ಅಲ್ಲಾಡಿಸಲೂ ಸಾಧ್ಯವಿಲ್ಲ.ಅಂತಹ ದೃಢ ನಿರ್ಧಾರ ಬದುಕಲ್ಲಿ ನಿಮ್ಮದಾಗಲಿ. ಏನಂತೀರಾ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ