ಭಾನುವಾರ, ಆಗಸ್ಟ್ 18, 2019

1191. ಸ್ವವಿಮರ್ಶೆ-ನಾನೇಕೆ ಬರೆಯುವೆ?

ನಾ ಬರೆಯುವೆ ನಿತ್ಯ..

ನಾನೇಕೆ ಬರೆಯುತ್ತೇನೆ? ಬಹಳ ಮನಸ್ಸಿಗೆ ನಾಟುವ ಪ್ರಶ್ನೆ. ಹಲವಾರು ಕಾರಣಗಳಿವೆ ನನ್ನ ಬರವಣಿಗೆಗೆ! ಸಿಲ್ಲಿ ಕಾರಣವೆಂದರೆ ನನಗೆ ಅಕ್ಷರ ಬರುತ್ತದೆ! ಸೀರಿಯಸ್ ಕಾರಣವೆಂದರೆ ಸಮಾಜಕ್ಕೆ ನಾನೇನೋ ಕೊಡಬೇಕೆಂಬ ತುಡಿತ! ಅದಷ್ಟೆ ಅಲ್ಲದೆ ಇನ್ನೂ ಹಲವಾರು ಕಾರಣಗಳಿಲ್ಲವೇ!? ಖಂಡಿತ ಇದೆ!
    ಕೆಲವೊಮ್ಮೆ ನಾನೇಕೆ ಬರೆಯುತ್ತೇನೆಂದು ನನ್ನನ್ನು ನಾನೇ ವಿಮರ್ಶಿಸಿಕೊಂಡರೆ ಗುಂಪಿನಲ್ಲಿ ನಾನೂ ಇತರರಂತೆ ಕೊಟ್ಟ ಪದಕ್ಕೆ ಚೆನ್ನಾಗಿ ಬರೆಯಬೇಕು, ಬರೆಯುವೆ! ಮತ್ತೊಂದು ಕಾರಣ. ನಾ ಬರೆಯುತ್ತಲೇ ಇರುವೆ. ಯಾರು ಓದಲಿ, ಬಿಡಲಿ, ಬರವಣಿಗೆ ನನ್ನ ಹವ್ಯಾಸ!
    ಮನಸ್ಸಿನಲ್ಲಿದ್ದುನನ್ನು ಹೊರಹಾಕಿದಾಗಲಷ್ಟೆ ಮನಸ್ಸು ಉಲ್ಲಾಸದಿಂದಿರಲು ಸಾಧ್ಯ! ಅದಕ್ಕೆ ಬರವಣಿಗೆ. ಬರವಣಿಗೆಯೊಂದು ಇಲ್ಲದೆ ಇರುತ್ತಿದ್ದರೆ ಹಲವಾರು ಕವಿಮನಗಳಿಗೆ ನಾನೆಲ್ಲಿ ಚಿರಪರಿಚಿತರಾಗುತ್ತಿದ್ದೆ? ಹಲವಾರು ಸಣ್ಣ ಕವಿಗಳ ದೊಡ್ಡ ಗುಣ, ಹಾಗೂ ಹಲವಾರು ದೊಡ್ಡ ಕವಿಗಳ ಸಣ್ಣಸಣ್ಣ ಗುಣಗಳನ್ನು ನಾ ಹೇಗೆ ತಿಳಿಯುತ್ತಿದ್ದೆ?
     ಅಷ್ಟೇ ಅಲ್ಲ, ಬರೆಯದೆ ಇರುತ್ತಿದ್ದರೆ ನಾ ಹೇಗೆ ಕವಿ ಕುಟುಂಬದ ಸದಸ್ಯಳಾಗಿರುತ್ತಿದ್ದೆ? ಬರವಣಿಗೆ ನನ್ನ ಮೆದುಳಿನ ಸೋಮಾರಿತನವ ಓಡಿಸಲು ಪ್ರತಿದಿನ ಮಸಾಜ್ ಮಾಡುತ್ತದೆ! ಚಂದನದಲ್ಲಿ ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ಬರುವ ಸಾಧಕರನ್ನು ನೋಡುವಾಗ ನಾನೇನೂ ಜೀವನದಲ್ಲಿ ಸಾಧಿಸಿಲ್ಲವಲ್ಲ ಎಂಬ ಭಾವನೆ ನನ್ನನ್ನು ಕಾಡುವುದಲ್ಲ, ಅದು ಹೆಚ್ಚು ಹೆಚ್ಚು ಬರೆಯಲು ನನ್ನ ಪ್ರೇರೇಪಿಸುತ್ತದೆ.
   ಬರವಣಿಗೆ ಮೆದುಳಿಗೆ ಮೇವಿನಂತೆ. ಓದಿದ ಹೊಸ ಹೊಸ ಪದಗಳ ಬಳಕೆ ಬರವಣಿಗೆಯಲ್ಲಾಗುತ್ತದೆ. ಶಾಲೆಯಲ್ಲಿ ಕಲಿಸುವುದು ಇಂಗ್ಲಿಷ್. ಸಾಹಿತ್ಯದ ಚೂರು ಕೃಷಿ ಇರದೆ ಇರುತ್ತಿದ್ದರೆ ಪ್ರಾಯಶಃ ಕನ್ನಡ ಬರವಣಿಗೆ ಉಪಯೋಗಕ್ಕೇ ಬರುತ್ತಿರಲಿಲ್ಲ! ಕನ್ನಡದಲ್ಲಿ ನಾನು ಬರೆಯಬೇಕೆಂದರೆ ಅಪಾರ ಕನ್ನಡದ ಜ್ಞಾನವಿರಬೇಕು. ಆ ಜ್ಞಾನವನ್ನು ಓದಿನಿಂದ ಪಡೆಯಬೇಕು. ಪಡೆದ ಜ್ಞಾನವು ಉಪಯೋಗವಾಗದೆ ಹೋದರೆ ಅದು ಮರೆತು ಹೋಗುತ್ತದೆ. ಮರೆಯದ ಜ್ಞಾನಕ್ಕಾಗಿ ಬರೆಯಬೇಕು!
     ಕನ್ನಡ ನೆಲದಲಿ ಹುಟ್ಟಿ, ಕನ್ನಡವನೆ ತಿಂದು, ತೇಗಿ, ಕನ್ನಡದ ಮಣ್ಣಿನ ವಾಸನೆಯುಂಡು, ಕನ್ನಡದ ಗಾಳಿ ಕುಡಿಯುತ್ತಾ ಬದುಕುವ ನಾವು ಕನ್ನಡದಲಿ ಸ್ವಲ್ಪವಾದರೂ ಕೃಷಿ ಮಾಡದಿದ್ದರೆ ಬದುಕಿದ್ದೂ ವ್ಯರ್ಥವಲ್ಲವೇ? ಅದಕ್ಕಾಗಿ ನಾ ಬರೆಯುವೆ. ನೀವೇನಂತೀರಿ?
@ಪ್ರೇಮ್@
18.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ