ಗಝಲ್
ಹಚ್ಚ ಹಸಿರಾಗಿ ಕುಣಿವ ಗಿಡಮರಗಳೆನ್ನ ಉಸಿರು!
ಸ್ವಚ್ಛ ಜಲ ಹೊತ್ತು ಓಡುವ ನದಿಗಳೆನ್ನ ಉಸಿರು!
ಪಶುಪಕ್ಷಿ ಜೀವಿಗಳ ಮೌನದ ಭಾಷೆ ಸುಮಧುರ!
ಅವುಗಳ ನಡುವಿನ ಮುಗ್ಧ ಪ್ರೀತಿಯೆನ್ನ ಉಸಿರು!
ಹದವಾಗಿ ಸಂಭ್ರಮಿಸುತಲಿ ಅರಳುವುದು ಹೂವು!
ಅರಳುತಿಹ ಮೊಗ್ಗಿನ ಸಿಹಿ ಸುಗಂಧವೆನ್ನ ಉಸಿರು!
ಹಸುಳೆ ಕಂದನು ಹಾಲು ಕುಡಿವ ಪರಿಯೆಂತು ಸೊಗಸು!
ಹಸು-ಕರುಗಳ ಮಿಲನದ ವೈಭೋಗವೆನ್ನ ಉಸಿರು.
ವಸುಧೆಯಲಿ ತಾಯಿ ಮಗುವಿನ ಅಪ್ಪುಗೆ ಶ್ರೇಷ್ಠ!
ಕಸುವು ಮಾಡುತ ಹಿತದಿ ಬದುಕುವವರೆನ್ನ ಉಸಿರು!
ವಸಂತನಾಗಮನಕೆ ಹಾಡುವ ಕೋಗಿಲೆಯ ಖುಷಿ
ಕಸದಂತಿದ್ದರು ನಿಸರ್ಗಸ್ನೇಹಿ ಹುಳಗಳೆನ್ನ ಉಸಿರು!
ಪರಹಿತವ ಬಯಸುವ ಮನುಜರು ಬಹಳವಿಹರು,
ಪ್ರೇಮದಿ ಬಾಳಬಂಡಿಯೆಳೆವ ಜೀವಿಗಳೆನ್ನ ಉಸಿರು!
@ಪ್ರೇಮ್@
26.08.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ