ಬುಧವಾರ, ಏಪ್ರಿಲ್ 15, 2020

1387. ವಿಮರ್ಶೆ-ಸುಧಾ ತೇಲ್ಕರ್ ರವರ ಗಝಲ್

*ಗಜ಼ಲ್*

ಹೊಂಬಣ್ಣದ ನವಿರು ರಶ್ಮಿಯೇ ಅರಿಶಿಣವಾಗಬೇಕು ಸಖೀ//
ಮುಂಜಾನೆ ರವಿ ಕಿತ್ತಲೆ ಬಣ್ಣದ ಮದರಂಗಿ ಹಚ್ಚಬೇಕು ಸಖೀ//

ನೀ ಮೀಯುವ ಜಲದಲಿ ಸುಮ ಸಂಕುಲದ ಘಮವನು ಚೆಲ್ಲುವೆ//
ಹುಣ್ಣಿಮೆ ಬೆಳದಿಂಗಳಿನ ರೇಶಿಮೆ ವಸ್ತ್ರವನು ನೇಯಿಸಬೇಕು ಸಖೀ//

ಆಕಾಶದ ಹಂದರದಿ ವಸುಧೆಯ ಹಸಿರು ಸಿರಿಯ ಮೆತ್ತೆಯಿರಲಿ//
ಹೊಳೆವ ಚುಕ್ಕಿಗಳೆಲ್ಲ ಅಕ್ಷತೆಯಾಗಿ ಆಶೀರ್ವದಿಸಬೇಕು ಸಖೀ//

ಮುಂಗಾರಿನ ಮುತ್ತಿನ ಹನಿ ಸಿಂಚನದ ಗಂಧವಿರುವುದು//
ಮಿಂಚಿನ ಬೆಳಕಿನಲಿ ಗುಡುಗು
ವಾದ್ಯವ ನುಡಿಸಬೇಕು ಸಖೀ//

ಸುಧೆಯ ಮೊಗದಲಿ ನಗುವಿನ ಆಭರಣವೊಂದೇ ಸಾಕು//
ಕವಿತೆಗಳ ಹೂಮಾಲೆ ಹಾಕಿ ನಾ ನಿನ್ನನು ವರಿಸಬೇಕು ಸಖೀ//


*ಅಮರ ಪ್ರೇಮಿಯ ಕನಸು*

*ಸುಧಾ ಎನ್. ತೇಲ್ಕರ್* ಅಮ್ಮನವರ ಗಝಲ್ ಒಂದನ್ನು ವಿಮರ್ಶೆಗಾಗಿ ಆಯ್ದುಕೊಂಡಿರುವೆ.

 ಗಝಲ್ ನನ್ನಿಷ್ಟದ ಕವನ ಪ್ರಕಾರ. ಅಂತೆಯೇ ಭಾವ ಪರವಶ ಗಝಲ್ ನನ್ನ ಮನನೆಚ್ಚಿತು. ಬಳಗದ ಉತ್ತಮ ಕವಿಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಸುಧಾ ಅಮ್ಮನವರ ಬರಹದ ಶೈಲಿಯೇ ಅದ್ಭುತ. ಅಂತಹ ಕವಿಯ ಪ್ರತಿ ಕವನವೂ ಓದುಗರಿಗೆ ರಸದೂಟ
 
ಪ್ರೇಮಿಯೊಬ್ಬ ತನ್ನ ಗೆಳತಿಗೆ ಬಯಸಿವ ಪ್ರೀತಿಯ ಪರಿಧಿ ಅಗಾಧ. ತನ್ನ ಸಖಿಗೆ ತಾನೇನೆಲ್ಲಾ ಮಾಡಬೇಕೆಂಬ ಕನಸು ಕಾಣುವವರಿಗೆ ಇದೊಂದು ಮಾದರಿ ಗಝಲ್. 

 ತಾನು ಮೆಚ್ಚಿದ ಹೆಣ್ಣಿಗೆ ತಾರೆಗಳನ್ನೇ ತಂದು ಅಕ್ಷತ್ ಹಾಕುವ ಪರಿ ಕವಿ ಭಾವದ ಮೇಲ್ಪಂಕ್ತಿಗೆ ಸಾಕ್ಷಿಯಾಗಿದೆ. ಆಕಾಶದ ಸೂರ್ಯ ರಶ್ಮಿಯ ಅರಶಿನ ಬಣ್ಣವನ್ನೇ ತನ್ನವಳಿಗೆ ಹಚ್ಚಬೇಕು.ಮುಂಜಾನೆ ರವಿಯ ಕಿತ್ತಳೆ ಬಣ್ಣವೇ ಅವಳ ಕೈಗೆ ಮೆಹಂದಿಯಾಗಬೇಕು. ಆಹಾ ಭವ್ಯ ಬದುಕನ್ನು ನೇಸರಕ್ಕೆ ಹೋಲಿಸಿದ ರೂಪಕ ಅಮೋಘ!

ಹುಣ್ಣಿಮೆ ಬೆಳದಿಂಗಲೇ ರೇಶ್ಮೆ ವಸ್ತ್ರವಾಗಿ, ಪ್ರಪಂಚದ ಪುಷ್ಪವೆಲ್ಲ ಅವಳ ಸ್ನಾನದ ನೀರಿನ ಸುಗಂಧಕ್ಕಾಗಿ ಬಳಕೆಯಾಗಬೇಕು! ರೂಪಕ
ಮನಸ್ಸಿಗೆ ಚಿತ್ರಕವನವನ್ನೇ ಕಟ್ಟಿಕೊಡುತ್ತದೆ!

ಬುವಿಯ ಹಸಿರು ಸಿರಿ ಪಲ್ಲಂಗವಾಗಿ ಆಗಸದಲ್ಲಿ ಮೆತ್ತನೆ ಮಲಗುವ ಕನಸು! ವಾವ್.. ಅದ್ಭುತ ಭಾವ!

ಮುಂಗಾರು ಮಳೆ ಹನಿಗಳು ಮುತ್ತುಗಳಾಗಿ ಅಮೃತ ಸಿಂಚನವಾಗಬೇಕು. ಅಲ್ಲಿ ಗುಡುಗು ಸಿಡಿಲುಗಳೇ ವಾದ್ಯಘೋಷಗಳು! ಇವು ನಮ್ಮ ಮನದಲ್ಲಿ ಒಂದು ಛಾಪೊತ್ತಿ ಕನಸು ಕಾಣುವಂತೆ ಮಾಡಲಾರವೇ?

"ಮೊಗದಲಿ ನಗುವೊಂದೇ ಸಾಕು!" ಇಷ್ಟೆಲ್ಲಾ ಮೇಲೇರಿದ ಗಝಲ್ ಕೊನೆಯಲಿ ಆಗಸದಿಂದ ಭೂಮಿಗಿಳಿದು ನೈಜತೆಯನ್ನು ಸಾರುತ್ತದೆ. ತನ್ನವಳ ಮೊಗದಲಿ ನಾನು ಬಯಸುವುದು ಕೇವಲ ನಗುವನ್ನು ಮಾತ್ರ! ಅಂದರೆ ತಾನು ಅವಳನ್ನು ಸಂತಸವಾಗಿ ಇರಿಸಬೇಕು! ಅದಕ್ಕಾಗಿ ನಾನು ಪ್ರಿಯೆಯನ್ನು ಹೇಗೆ ವರಿಸಬೇಕೆನ್ನುವಲ್ಲಿ ಒಳಗಿನ ಕವಿತ್ವ ಹೊರಗೆ ಬಂದಿದೆ! ಕವಿತೆಗಳ ಹಾರದಲಿ ನಾನವಳ ವರಿಸಬೇಕು! ಆಹಾ..ರೂಪಕವೇ! ಕವಿತೆಯನು ಆಶ್ವಾದಿಸಬಲ್ಲ ಮನಕ್ಕೆ ಬೇರೆ ಬೇಕೇ? 
    
   ವಾವ್, ಓದುಗನಿಗೊಂದು ಹಬ್ಬ ಈ ಗಝಲ್. ಪೂರ್ತಿ ಓದಿದ ಬಳಿಕ ಒಂದು ಸುಂದರ ಪ್ರಣಯದ ಸಿನೆಮಾ ನೋಡಿದ ಅನುಭವ ಕೊಡುವ ಗಝಲ್. I simply loved it!
@ಪ್ರೇಮ್@
15.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ