ದುರ್ಗದ ಬಂಡೆ
ಪ್ರತಿ ಕಲ್ಲುಗಳೂ ಮಾತನಾಡುತ್ತವೆ ಇಲ್ಲಿ..
ಚಿತ್ರದಂತಹ ಕಲ್ಲುಗಳಿರುವ ಕೋಟೆ ನಾಡಿನಲ್ಲಿ..
ಚಿತ್ತವಿಚಿತ್ತ ಸಂದೇಶ ನೀಡುವ ನಿಟ್ಟಿನಲಿ
ಜೊತೆಯಾಗೆ ಬಾಳಿರೆನುವ ಒಗ್ಗಟ್ಟಿನ ಮಾತಿನಲಿ//
ಆಕೃತಿ ವಿಕೃತಿ ಬಣ್ಣ ಆಕಾರ ಬೇರೆ ಬೇರೆಯದು
ಆದರೂ ನಾವು ಬಂಡೆ ಕಲ್ಲುಗಳೇ ಎಂಬ ಹೆಮ್ಮೆಯಿಹುದು!
ಕಬ್ಬಿಣದಿಂದಲೂ ಬೇಧಿಸಲಾರರು ನಮ್ಮನಾರೂ
ಕಬ್ಬಿಗರ ಕಣ್ಣಲಿ ಜೀವತಳೆದ ಬೊಂಬೆಗಳವು!
ಜಾತಿ ಮತ ಬೇಧದಲಿ ಸಾಯುತಿಹರು ಮಾನವರು
ಎಲ್ಲ ಜಾತಿಯ ಜನರೊಂದಾಗಿ ಮೂರ್ತಿಗಳ ಕೆತ್ತುವರು!
ಪೂಜಿಸುತ ದೇವರೆಂದು ಕೋಣೆಯೊಳು ಕೂಡಿ ಹಾಕುವರು!
ಮನುಜಗೆ ಬೇಕಾದ ಸ್ವಾತಂತ್ರ್ಯ ದೇವರಿಗೆ ಬೇಡವೇ?
ದೇವರೂ ಮನುಜನ ಕಪಟಗಳ ನೋಡುವುದು ಬೇಡವೇ!
ಬಂಡೆಗಳ ಸಂಭಾಷಣೆಯ ಕೇಳುತಲಿ ಮೈಮರೆ!
ತನ್ನವರ ಬಾಚಿ ತಬ್ಬಿ ಆನಂದದಿ ಮೈಮರೆ!
ಸಹಸ್ರಾರು ವರುಷಗಳ ಮಳೆ ಬಿಸಿಲ ಹೊಡೆತಕೂ ಬದಲಾಗಲಾರೆ!
ಹಲವಾರು ತಲೆಮಾರುಗಳ ಜನಕೆ ನೀಡಿದ ಸಂತಸವ ಮರೆಯಲಾರೆ!
ಬೆಳಗಿಸುತ ಭೂಮಿಯನು ತಾನಿರುವೆ ಬಳಸುತಲಿ
ಬೆಲೆ ಬಾಳುವ ಮೂರ್ತಿಗಳ ಹೃದಯದಲಿ ಹೊತ್ತು!
ಬಾಗಿ ನಮಿಸುವೆನು ಭೂಮಿಗೆ, ಕುಳಿತಿಹಳು ನಮ್ಮ ಹೊತ್ತು!
ಕಪ್ಪೆ, ಆನೆಯಂತೆ, ಲಿಂಗ-ಗರುಡನಂತೆ ಕಾಣುವ ಪರಿ ಚೆನ್ನ!
ನನ್ನಿರುವ ಗಮನಿಸಿ ಮನುಜ ಕೊಟ್ಟಿಹನು ಹೆಸರೆನಗೆ ಅಣ್ಣಾ..
ಮರೆಯದಿರು ಗೆಳೆತನವ,ಬೇಡ ಮುನಿಸದು
ನಗುತ ನಗಿಸುತಲಿರು ಹಾಯಾಗಿ ಎಂದೆಂದೂ
ಬಂಡೆಯಂತಿರು ಕಷ್ಟಕೆ ಕುಗ್ಗದೆ, ಸುಖದಿ ಹಿಗ್ಗದೆ
ಕಲಿ ಪಾಠವ ನೋಡಿ ನಮ್ಮನು, ಬದುಕು ಎದೆಗುಂದದೆ.
@ಪ್ರೇಮ್@
29.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ