ಅನುರಾಧಾ ಶಿವಪ್ರಕಾಶ್ ಅವರ ಭಾವದ ಹೂರಣ.
❤ಶೀರ್ಷಿಕೆ ಹೆಸರೇ ಅಂದ. ರೂಪಕದಿ ಮೇಳೈಸಿದೆ. ಹೂರಣವೆಂದರೇನೇ ಸಿಹಿ. ಕವನವೂ ಸವಿಯಾಗಿದೆ❤
ಮದರಂಗಿ ಚಿತ್ತಾರವ
ಬಿಡಿಸುವಾ ಬಾಲೆಯರೇ
ಭಾವ ಹೂರಣವನೆಲ್ಲಾ
ತುಂಬಿ ಬಿಡುವಿರಾ ನೀವು
❤ ಇದೊಂದು ಸನ್ನಿವೇಶವನ್ನು ಕಣ್ಣಿಗೆ ಕಟ್ಟಿ ಕೊಡುತ್ತದೆ. ಮದುವೆಯ ಹಿಂದಿನ ರಾತ್ರಿ ಹಲವಾರು ಬಾಲೆಯರು ಸೇರಿ ಮರುದಿನದ ಮದುಮಗಳ ಕೈ ಕಾಲಿಗೆ ಮದರಂಗಿ ಹಾಕುವ ಚೆಲುವಿನ ನೋಟ. ಅಣಕಿಸುತ್ತಾ, ನಗುತ್ತಾ ತಮ್ಮ ಭಾವಗಳ ಚಿತ್ತಾರ ಬಿಡಿಸುವ ಸುಂದರ ದೃಶ್ಯ ಕಣ್ಣ ಮುಂದೆ ಹಾದು ಹೋಗುವಂತೆ ಮಾಡುವ ಸುಂದರ ಸಾಲುಗಳು..❤
ಅಂದದ ಉಡುಗೆಯಲಿ
ಕಂಗೊಳಿಸುವ ನೀರೆಯರೇ
ಬಣ್ಣದ ಕನಸುಗಳೆಲ್ಲಾ
ತುಂಬಿಹುದೇ ನಿಮ್ಮೊಳಗೆ
❤ಹುಡುಗಿಯರೆಂದರೇನೇ ಬಣ್ಣ ಬಣ್ಣದ ಚಿಟ್ಟೆಯರಂತೆ. ಬಣ್ಣದ ಲೋಕವೆಲ್ಲಾ ಅವರದ್ದೇ. ಬಟ್ಟೆಗಳು, ಚಪ್ಪಲಿ, ಬ್ಯಾಗು, ಕಿವಿಯೋಲೆ, ತಲೆಗೆ ಹಾಕುವ ಕ್ಲಿಪ್, ಹೇರ್ ಬ್ಯಾಂಡ್, ಹ್ಯಾಟ್, ನೆಕ್ಲೆಸ್, ಬಳೆ, ಸರ, ಸೊಂಟ ಪಟ್ಟಿ, ಉಂಗುರ, ಕಾಲ್ಗೆಜ್ಜೆ, ಬಿಂದಿ ಎಲ್ಲವೂ ಬಣ್ಣಬಣ್ಣದ್ದೇ ಬೇಕಲ್ಲವೇ ಅವರಿಗೆ? ಹೀಗಿರುವಾಗ ಬಣ್ಣ ಬಣ್ಣದ ಕನಸುಗಳಿಗೆ ಬರವೇ?
ಕೊನೆಯ ಸಾಲಿನ ಕೊನೆಗೆ ಪ್ರಶ್ನಾರ್ಥಕ ಚಿಹ್ನೆ ಇದ್ದಿದ್ದರೆ ಚೆನ್ನಾಗಿತ್ತೇನೋ ಅನಿಸಿತು. ಸರಳ ಸುಂದರ ಸಾಲುಗಳು.❤
ಸಹಬಾಳ್ವೆಯ ದ್ಯೋತಕವು
ನಿಮ್ಮ ಈ ರಂಗಿನಾಟ
ಒಬ್ಬರಿಗೊಬ್ಬರು ಕನಸ
ತುಂಬುವ ಪರಿ ಎನಿತು ಚಂದ
❤ಹುಡುಗಿಯೆಂದರೆ ಸಂಬಂಧಗಳ ಜೋಡಿಸುವವಳು. ಎರಡು ಕುಟುಂಬಗಳ ಕೊಂಡಿ ಆಕೆ. ಹಲವಾರು ಹುಡುಗಿಯರು, ಮಹಿಳೆಯರು ಸೇರಿದರೆಂದರೆ ಮುಗಿಯಿತು! ಅಲ್ಲಿ ನಗು, ಹರಟೆ, ವಾದ-ವಿವಾದ, ಗಲಾಟೆ, ಸಂತಸ ಎಲ್ಲವೂ ಇದ್ದದ್ದೇ. ಅದೇ ಬದುಕು. ಅಲ್ಲಿ ಕನಸು, ಸಹಬಾಳ್ವೆಗೆ ಬರವೇ? ಇಲ್ಲೂ ಕೊನೆಗೊಂದು ಪ್ರಶ್ನಾರ್ಥಕ ಇಲ್ಲವೇ ಭಾವಸೂಚಕ ಚಿಹ್ನೆ ಬೇಕಿತ್ತೆನಿಸಿತು.❤
ಗರಿಗೆದರುವ ಕನಸುಗಳು
ಅಚ್ಚೊತ್ತಿಹುದು ಚಿತ್ರದಲಿ
ಭಾವಗಳು ಎರಕ ಹೊಯ್ದಿಹುದು
ಅಂಗೈಯಗಲದ ಲೋಕದಲಿ
❤ಮದರಂಗಿಯ ಕಲೆಯೇ ಅಂದ. ಭಾವನೆಯು ಚಿತ್ರವಾಗಿ ಅಂಗೈಯೆಂಬ ಲೋಕದಲಿ ನೆಲೆವೂರುತ್ತದೆ! ರೂಪಕ ಖುಷಿಯಾಯ್ತು. ಮದರಂಗಿ ಬಿಡಿಸಿಕೊಂಡ ನೀರೆಯ ಖುಷಿ ಕವನದ ಕೊನೆಯಲಿ ಕಂಡಿತು. ಮದರಂಗಿ ಕೆಂಪಾಯಿತು. ಸೂಪರ್ ಕವನ ಮೇಡಮ್.❤
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ