ವಿಮರ್ಶೆ
"ಕರವನು ಪಿಡಿಯದೆ ಇಹನೇನು?" ಎನ್ .ಬಿ. ಹಿಳ್ಳೆಯವರ ಕವನ ನಾನು ಆಯ್ದುಕೊಂಡದ್ದು.
ಮೊದಲಿಗೆ ನಾನು ಯಾಕೆ ಇದೇ ಕವನವನ್ನು ಆಯ್ದುಕೊಂಡೆನೆಂಬುದಕ್ಕೆ ಎರಡು ಮಾತು. ಕೊರೋನಾದಿಂದಾಗಿ ಲೋಕಕ್ಕೆ ಲೋಕವೇ ಲಾಕ್ ಡೌನ್ ಆಗಿದೆ. ಅಂತೆಯೇ ನಾನೂ ಲಾಕ್ ಡೌನ್. ನನ್ನ ಮನಸ್ಸಿಗೆ ಸಾಂತ್ವನ ಕೊಟ್ಟು ನನ್ನನ್ನು ಮಾನಸಿಕವಾಗಿ ಸದೃಢಗೊಳಿಸಿ, ನನ್ನಲ್ಲಿ ಶಕ್ತಿ ತುಂಬಿದ ಕವನವಿದು. ನಾನು ನಾರಾಯಣ ಭಟ್ರ ಕವನಗಳ ಅಭಿಮಾನಿ ಕೂಡಾ. ಅವರನ್ನು ನೋಡಿಲ್ಲ, ಸಾಮಾಜಿಕ ಜಾಲ ತಾಣಧಲಿ ಅವರ ಕವಿತೆಗಳನ್ನೋದಿ ಖುಷಿ ಪಡುವವರಲ್ಲಿ ನಾನೂ ಒಬ್ಬಳು.
ಕವಿತೆಯ ವಿಚಾರಕ್ಕೆ ಬಂದರೆ ಇದೊಂದು ಉತ್ತಮ ಭಾವಗೀತೆ, ಭಕ್ತಿಗೀತೆ ಹಾಗೂ ಪ್ರಾರ್ಥನಾ ಗೀತೆ. ಶರ ಷಟ್ಪದಿಯಲ್ಲಿ ರಚಿತವಾದ ಪದಪದಗಳಲ್ಲೂ ಸಂತಸ ಕೊಡುವ ಹಾಡುಗಾರರು ಸುಲಭವಾಗಿ ತಾವೇ ಸ್ವರ ಸಂಯೋಜನೆ ಮಾಡಿ ಸಂತಸಪಟ್ಟು ಹಾಡಬಹುದಾದ ಗೀತೆ.
ಇದನ್ನೋದುವಾಗ ನನಗೆ ದಾಸರ 'ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಿನ ಗುಳ್ಳೆ… " ಈ ಹಾಡೊಮ್ಮೆ, ಮಗದೊಮ್ಮೆ ಎನ್ ಎಸ್. ಲಕ್ಷ್ಮಿ ನಾರಾಯಣ ಭಟ್ಟರ "ಯಾರು ಜೀವವೇ ಯಾರು ಬಂದವರೂ…" ಕವನಗಳು ನೆನಪಾದವು. "ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿಹಲು…." ಕನಕದಾಸರೂ ನೆನಪಾದರು. ಸರಳ ಸಾಲುಗಳಲಿ ಓದಿಸಿಕೊಂಡು ಹೋಗುವ, ಸುಶ್ರಾವ್ಯ ಕಂಠವಾಗಬಹುದಾದ ರೂಪಕವಿದು.
ಮನದಣಿಯೆ ಓದಿ ಭಟ್ಟರ ಕಾವ್ಯ ಕಟ್ಟುವ ಕಲೆಗೆ ಶರಣಾದೆ. ಭಯ ಹೋಗಿ ನೆಮ್ಮದಿ, ಸಾಂತ್ವನ, ನಂಬಿಕೆ ಬೆಳೆಸಿದ ಕವನವಿದು. ಕವನದಲಿ ಭಾಷಾ ಚಿಹ್ನೆಗಳು ಟೈಪಾಗದಿದ್ದುದು ಬೇಸರ ತರಿಸಿತು. ಮುಂದಿನ ಜನಾಂಗ ಅವುಗಳನ್ನೆಲ್ಲ ಮರೆತೇ ಬಿಡುವುದೇನೋ ಎಂಬ ಭಯ, ಭಾಷಾ ಶಿಕ್ಷಕಿಯಾಗಿ ಕಾಡುತ್ತಿದೆ ನನ್ನ. ನಾವೆಷ್ಟು ಭಾಷಾ ಚಿಹ್ನೆಗಳ ಕಡೆಗಣಿಸುತಿರುವೆವು ಎಂಬುದಕ್ಕೂ ಈ ಕವನ ಉತ್ತರದಂತಿದೆ. ಬೇಕೋ, ಬೇಡವೋ ಜಿಜ್ಞಾಸೆಯಲ್ಲೇ ನಾವಿದ್ದೇವೆ. ಕೆಲವರಂತೂ ಕವನದಲಿ ಬೇಡವೆಂದೇ ವಾದಿಸಿ ಅದನ್ನೆಲ್ಲ ತೊರೆದಾಗಿದೆ. ಕಾಲಕ್ಕೆ ತಕ್ಕನಾಗಿ ನಾವೂ ಹೊಂದಿಕೊಂಡು ಹೋಗಬೇಕಾಗಿದೆ ಅಲ್ಲವೇ.
ಅದೇನೇ ಇರಲಿ , ಕವನದ ಪದ ಬಳಕೆ, ಪ್ರಾಸಗಳು, ಅರ್ಥವತ್ತಾದ ರಚನೆ ನನ್ನನ್ನು ಸೆಳೆಯಿತು. "ಕವನ ಎಂದರೆ ಹೀಗಿರಬೇಕು" ಎಂಬ ಭಾವನೆ ಮೂಡಿತು.
ಸರ್, ಇಂತಹ ನೂರಾರು ಕವನಗಳು ನಿಮ್ಮ ಲೇಖನಿಯಿಂದ ಹೊರಬರಲಿ,ನಮ್ಮ ಮನಸ್ಸು, ಕಣ್ಣು, ಕಿವಿಗೆ ಆನಂದ, ಶಕ್ತಿ ನೀಡಲಿ ಎಂಬ ಶುಭ ಹಾರೈಕೆಗಳೊಂದಿಗೆ,
ಧನ್ಯವಾದಗಳು.
@ಪ್ರೇಮ್@
12.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ