ಗುರುವಾರ, ಏಪ್ರಿಲ್ 16, 2020

1399. ಹೊಳೆಯಲಿ ಹೈದರ ಬಾಳು

ಹೊಳೆಯಲಿ ಹೈದರ ಹೊಸಬಾಳು

ಹೊಳಪಾಗಿ ಹೊಳೆಯೆ ಹೊಸ ತರದ ಮನಕೆ
ಹೊಳೆ ನೀರು ಸಾಕೆ ತಿಕ್ಕುವ ಕಾರ್ಯಕೆ?
ಹೊಳಪಿಲ್ಲವೆಂದು ಹೊಳೆದೊಡೆ ಬದಲಾಗಬೇಕಲ್ಲ
ಹುಡುಕುತ್ತ ಹೋಗು ಹೆಣವಾಗೋ ವರೆಗೆ!

ಹುಡುಗಿ ಹುಡುಗನು ಹೇಗೇ ಕಾಣುತ ಇರಲಿ
ಹಾಳಾಗ ಬಾರದು ಹಾಲಿನಂಥ ಹಣತೆ!
ಹಳದಿ ಮೆತ್ತಿದ ಮೇಲೂ ಹಲವಾರು ವರುಷ
ಹೃನ್ಮನದಿ ಜೊತೆಯಾಗಿ ಹರುಷದಲಿ ಬಾಳುತ್ತಾ
ಹರನ ಪಾದಕ್ಕೆ ಹರುಷದಿ ಹಣೆ ಹಚ್ಚಬೇಕು..

ಹೋದೆನೆಂದೆನುತ ಹೆದರಿ ಹೈರಾಣಾಗದೆಯೇ
ಹೆಸರು ಮಾಡುತ್ತಾ ಬದುಕೋದು ಹೇಗೆಂದು ನೋಡು
ಹೊಳೆಯೋ ವಸ್ತುವೆಲ್ಲಾ ಚಿನ್ನಾಂತ ತಿಳಿಬೇಡ
ಹೊಂಚ್ಹಾಕಿ ಸಂಚು ಮಾಡಿ ಬದುಕಲು ಬೇಡ..

ಹೊಡೆದಾಟ ಆದ್ರೂನೂ ನೇರ ನುಡಿಯಿರಲಿ
ಹೊಂಬಾಳೆ ಬೆಳೆಯಂಗೆ ನಳನಳಿಸುತಲಿರೆ ಬಾಳು
ಹೊಂದಾಣಿಕೆಗೆ ಭಯವೆಲ್ಲಿ ಮನೆ ಮನದಿ
ಹೋರಾಟವೇಕೆ ಹೊಡೆದಾಟವೇಕೆ ಹೆತ್ತವರೊಡನೆ?
ಹೆತ್ತು ಹೊತ್ತು ಸಾಕಿ ಸಲಹಿದ ಮಾತಾಪಿತರೆ
ಹೆಚ್ಚೆಂದು ಬಗೆಯ ಬೇಕು ಹಂಗಿರದೆ!

ಹಠವು ಬೇಕು ಸಾಧಿಸುವ ಕಾರ್ಯದಲಿ
ಹಯದಂತೆ ಓಡುತಲಿ ಹಲವು ದಿನ ಕಳೆದು
ಹದದ ಬದುಕಲಿ ಹಗುರವು ಬರದಿರಲಿ
ಹೋಳಿ ಹಬ್ಬವು ಹರಿದಾಡಲಿ ದಿನವೆಲ್ಲ!

ಹನಿಹನಿಯ ಸಮಯದಲೂ ಹರಸಲಿ ಹರಿಹರ ಬಂದು
ಹಸನಾಗಿ ತೋಟದಲಿ ಹಸಿಹಸಿಯ ಬೆಳೆ ಬರಲಿ
ಹಸಿವು ಬಾಯಾರಿಕೆಯಿಂದ ಹೆದರದೆ ಬದುಕುತ್ತಾ
ಹೊಸಬರಿಗೆ ಹೊಸ ಕಾಯಕ ಹೊಂದಿಸುವಂತಿರಲಿ!

ಹೋದಲ್ಲೆಲ್ಲಾ  ಹೊಸ ಚಿಗುರು ಹಸನಾಗಿ  ಮೊಳೆಯಲಿ
ಹೋರಿಯಂತೆ ಮನವು ಹೋರಾಟಕೆ ನುಗ್ಗದಿರಲಿ
ಹೀಯಾಳಿಸುವ ನಾಲಗೆಯು ಹರಿಹಾಯದಿರಲಿ
ಹೊಸ ಬಾಳು ಹಿತ ಮಾತಿಗೆ ಹೆಸರಾಗಿ ಬರಲಿ..

ಹಿಗ್ಗುತಲಿ ಹಾಳಾಗದೆ ಹಾಡುತಲಿ ಬಾಳುತ್ತ
ಹಂಗಿರದ ಬಾಳು ಹೋಳಾಗದೆ   ಹುಲುಸಾಗಲಿ
ಹರ್ಷಿಸಲಿ ಮನವು ಹೋರಾಟ ಮರೆಯಲಿ
ಹೊಂಗನಸು ಹೊಸೆಯುತಲಿ ಹೆಸರಾಗು ಹೊಲದಿ.
@ಪ್ರೇಮ್@
09.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ