ಸೋಮವಾರ, ನವೆಂಬರ್ 5, 2018

565. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-20

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-20

ಪಟಾಕಿಗಳು ಹಣ,ಮೈ-ಮನ, ಬದುಕು ಸುಡದಿರಲಿ..

ದೀಪಾವಳಿ ದೀಪಗಳ ಹಬ್ಬ ಬಂತು. ಸರ್ವರಿಗೂ ಶುಭಾಶಯಗಳು ಹಾಗೂ ಸರ್ವರ ಬಾಳಲ್ಲೂ ಬೆಳಗು ತುಂಬಿರಲಿ ಎಂಬ ಹಾರೈಕೆ. ಜೊತೆಗೆ ಅಂಕಣ ಬರಹ ಇಪ್ಪತ್ತನೇ ವಾರಕ್ಕೆ ಅಡಿಯಿಟ್ಟ ಸಂತಸ. ಅದರೊಂದಿಗೆ ದಿನಾಂಕ ೪.೧೧.೨0೧೮ ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಹಲವಾರು ಕವಿಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ಕವಿಗಳನ್ನು ಬೇಟಿಯಾದ ಸಂತಸ ಇನ್ನೊಂದೆಡೆ. ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡಿನಲ್ಲಿ ೫.೧೧.೨೦೨೮ರಂದು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇವರು  ನಡೆಸಿ ಕೊಟ್ಟ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸಿದ ಸುಸಂಧರ್ಭದ ಖುಷಿ, ಹಾಗೆಯೇ ೬.೧೧.೨೦೧೮ರಂದು ಕನ್ನಡ ಭವನ ಅಂಬಟಡ್ಕ ಸುಳ್ಯ ಇಲ್ಲಿ ನಡೆಯುವ ಶಿಕ್ಷಕ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆನಂದ, ಈ ಬಾರಿಯ ದೀಪಾವಳಿ ಇನ್ನಷ್ಟು ಬೆಳಗುವಂತೆ ಮಾಡಿವೆ.
    ದೀಪಾವಳಿ ಎಂದರೆ ಮಕ್ಕಳನ್ನೂ ಸಂತಸಪಡಿಸ ಬೇಕಲ್ಲವೇ..ನಾವು ದುಡಿಯುವುದು, ಇಷ್ಟೆಲ್ಲಾ ಕಷ್ಟ ಪಡುವುದು ಯಾರಿಗಾಗಿ ಅಲ್ಲವೇ..? ಅದಕ್ಕಾಗಿ ಮಕ್ಕಳು ಕೇಳಿದ ಪಟಾಕಿ ತೆಗೆದುಕೊಟ್ಟು ಅವರ ಬಾಳನ್ನು ಬೆಳಗಿಸುವ ಬದಲಾಗಿ ನಂದಿಸುವ ಕಾರ್ಯವನ್ನು ನಾವೇ ಮಾಡುತ್ತಿರುವುದು ಖೇದಕರ ವಿಚಾರ. ಇದರೊಂದಿಗೆ ನಾವು ಪರಿಸರವನ್ನೂ , ಗಾಳಿಯನ್ನೂ ಮಾಲಿನ್ಯ ಮಾಡುವುದೇ ಅಲ್ಲದೆ , ಮಣ್ಣು ಹಾಳಾಗುವುದರೊಂದಿಗೆ, ಕಣ್ಣಿಗೂ ಸಮಸ್ಯೆ, ಆರೋಗ್ಯಕ್ಕೂ ತೊಂದರೆ. ಅದರ ಬದಲಾಗಿ ದೀಪಗಳನ್ನು ಹಚ್ಚಿದರೆ ಅದನ್ನು ಗಮನಿಸುತ್ತಿದ್ದರೆ ಸಾಕು. ಮನೆಯಲ್ಲೇ ಲಕ್ಷ ದೀಪೋತ್ಸವದ ಸಂಭ್ರಮ ಅನುಭವಿಸಬಹುದು!
    ಹಾಗೂ ಪಟಾಕಿ ಒಡೆಯಲೇ ಬೇಕು,ಶಬ್ದ ಮನೆಯೆದುರು ಬರಲೇ ಬೇಕು ಎಂಬ ಅಭಿಪ್ರಾಯ ಇದ್ದಲ್ಲಿ ದಯವಿಟ್ಟು ಹಿರಿಯರ ಸಮ್ಮುಖವಿರಲಿ. ಟುಸ್ ಎನ್ನುವ ಪಟಾಕಿಗಳು ಹಲ ಸಮಯ ಬಿಟ್ಟು ಡಂ ಎನ್ನುವ ಸಾಧ್ಯತೆ ಇದೆ. ಅದನ್ನು ಅದರ ಬಳಿ ಹೋಗಿ ಊದುವುದು, ಜಾರಿಸುವುದು ಹೀಗೆ ಮಾಡಿದರೆ ಕೈ ಹಾಗೂ ಕಣ್ಣಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚು.
  ಚಿಕ್ಕ ಮಕ್ಕಳಿರುವಲ್ಲಿ ದೀಪ ಹಚ್ಚಿಡುವಾಗಲೂ ಜಾಗ್ರತೆ ವಹಿಸಬೇಕು, ಅವರು ದೀಪಕ್ಕೆ ಕೈ ಹಾಕಬಹುದು, ಬಟ್ಟೆ ಸುಡಬಹುದು, ಎಣ್ಣೆ ಚೆಲ್ಲಿ ಬೆಂಕಿ ತಗುಲಬಹುದು.
  ಪ್ರತಿಯೊಂದು ಕಾರ್ಯದಲ್ಲಿ ಮುನ್ನೆಚ್ಚರಿಕೆ ಅತಿ ಅಗತ್ಯ. ಫೋಟೋ, ಸೆಲ್ಫಿ ತೆಗೆಯುವ ಸಂಧರ್ಭದಲ್ಲಿ ಮೊಬೈಲಿಗೆ ಬೆಂಕಿ ತಗಲಬಹುದು. ಕೈಯಲ್ಲೆ ಒಡೆಯುವ ಪಟಾಕಿಗಳಿಂದ ಮುಖ, ಕಣ್ಣು, ಕೈ-ಕಾಲುಗಳು, ಕಿವಿ,ಮೂಗಿನ ರಕ್ಷಣೆ ಅಗತ್ಯ.
   ನಮ್ಮ ಆನಂದ ನಮ್ಮ ಜೀವನಕ್ಕೆ ಅಪಾಯ ಆಗದಂತೆ ನಾವೇ ನೋಡಿಕೊಳ್ಳಬೇಕಾಗಿದೆ. ಹಿರಿಯರೂ, ಕಿರಿಯರೂ, ಮಕ್ಕಳೂ ತಮ್ಮ ಸಂತಸದ ಜೊತೆಜೊತೆಗೆ ತಮ್ಮ ಕಾಳಜಿಯನ್ನೂ ಇರಿಸಿಕೊಳ್ಳಬೇಕಿದೆ.
   ಈ ಸಲದ ದೀಪಾವಳಿ ಆನಂದವಾಗಿರಲಿ. ಯಾರಿಗೂ ಯಾವುದೇ ತೊಂದರೆ ಬರದಿರಲಿ, ಇತರರಿಗೆ ನಮ್ಮಿಂದ ತೊಂದರೆಯಾಗದಿರಲಿ, ನಮ್ಮ ಪರಿಸರಕ್ಕೂ ಹಾನಿಯಾಗದಿರಲಿ, ಮನೆ ಮನ ಬೆಳಗಲಿ, ಅಂಧಕಾರ ತೊಲಗಲಿ. ಎಲ್ಲರಿಗೂ ಶುಭವಾಗಲಿ..ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ