ಮರೆಯಲಾರದ ಮಹಾನುಭವ
ಮನದ ಆಗಸದ ದಿಗಂತದಂಚಿನಲೆಲ್ಲೋ ಮರೆಯಲಾಗದ ಹಲವಾರು ಘಟನೆಗಳ ರಾಶಿಯೊಂದು ಸಮುದ್ರದ ಆನೆ ಗಾತ್ರದ ಬಂಡೆಯ ಮೇಲೆ ಹತ್ತಿ ನೆಗೆಯುವ ಅಲೆರಾಶಿಯ ನೊರೆಯಂತೆ ಹೆಪ್ಪುಗಟ್ಟಿ ದೃಢವಾಗಿ ಕುಳಿತಿರುತ್ತದೆ. ಯಾರನ್ನೋ ನೋಡಿ, ಮಾತನಾಡಿ,ಗೆಳೆತನವಾಗಿ ಜೀವನ ಬದಲಾದ ಪರಿ, ಮತ್ಯಾರನ್ನೋ ಕಳೆದುಕೊಂಡು ಬದುಕಿದ್ದು ಸತ್ತಂತೆ ಜೀವನ ಸಾಗಿಸಿದ ಬೇಸರ, ಪ್ರೀತಿ ಪಾತ್ರರನ್ನು ಪಡೆದು ಬಾಳಿದ ಸಂತಸ, ಹತ್ತಿಪ್ಪತ್ತು ವರುಷಗಳ ಬಳಿಕ ಮತ್ತೆ ಭೇಟಿಯಾದ ಖುಷಿ, ದೂರದೂರಿಗೆ ಪಯಣಿಸಿದ ಸಂತಸ, ಜೀವನದಲ್ಲಿ ತಿರುವು ಪಡೆದ ಕ್ಷಣ, ಪ್ರಶಸ್ತಿ ಗಳಿಸಿದ ಹಿರಿಮೆ ಇತ್ಯಾದಿ.
ನಾನೂ ಅಂತಹ ಹಲವಾರು ಮರೆಯಲಾರದ ಜೀವನದ ಘಟನೆಗಳನ್ನು ಮನದ ತುಂಬ ಮೂಟೆಕಟ್ಟಿ ಹೊತ್ತೊಯ್ಯುತ್ತಿರುವೆ. ಇಂದು ಅದನ್ನು ನಿಮ್ಮ ಮುಂದೆ ಬಿಚ್ಚಿಡುವ ಅವಕಾಶ ಒದಗಿ ಬಂದಿದೆ. ಸಂಬಂಧಿಕರೆಲ್ಲರೂ ನೆಂಟರ ಮನೆಗೆಂದು ಆಗಾಗ ದೂರದ ಮುಂಬೈಗೆ ಹೋಗಿ ಬರುತ್ತಿದ್ದುದನ್ನು ಬಾಲ್ಯದಿಂದಲೂ ನೋಡುತ್ತಿದ್ದ ನನಗೆ ಮುಂಬೈ ಮಹಾನಗರಿ ಎಂದರೆ ಏನೋ ಕಾತರ, ಚಲನಚಿತ್ರಗಳಲ್ಲಿ ಅಲ್ಲಿನ ಅಂಡರ್ ವರ್ಲ್ಡ್ ಗಳ ಬಗ್ಗೆ ತಿಳಿದು ಆತಂಕ, ಮಹಾನಗರಿಯೆಂದು ಬಿತ್ತರಿಸಿ ಪ್ರಸಾರ ಮಾಡುವ ಸುದ್ಧಿ ಚಾನೆಲ್ ಗಳಲ್ಲಿ ನೋಡಿ ಕುತೂಹಲ...
ಮದುವೆಗೆ, ಸೀಮಂತಕ್ಕೆ, ನಾಮಕರಣಕ್ಕೆಂದು ಮುಂಬಯಿಗೆ ಹೋಗಿ ಬರುವ ನೆಂಟರನ್ನು ಕಂಡರೆ ಹೊಟ್ಟೆ ಉರಿದು ಹೋಗುತ್ತಿತ್ತು. ಛೆ, ನನಗಿಂತಹ ಛಾನ್ಸ್ ಸಿಗ್ತಾ ಇಲ್ವಲ್ಲಾ ಅಂತ!
ಎವ್ರಿ ಡಾಗ್ ಹ್ಯಾಸ್ ಹಿಸ್ ಓನ್ ಡೇ ಅಂತ ಆಂಗ್ಲರಲ್ಲೊಂದು ಮಾತಿದೆ. ಅಂತೆಯೇ ಕನ್ನಡದಲ್ಲಿ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತಾರೆ. ಹಾಗೆಯೇ ನನಗೂ ಒಂದು ಕಾಲ ಬರಬಹುದೇನೋ ಎಂಬ ನಂಬಿಕೆ ದೂರದಲ್ಲೆಲ್ಲೋ ಮನೆಮಾಡಿ, ಕಾಣದ ದೇವರನ್ನು ನೆನೆದು ಕುಳಿತಿತ್ತು. ಅದು ಸುಳ್ಳಾಗಲಿಲ್ಲ. ನಮ್ಮ ಶಾಲಾ ಶೈಕ್ಷಣಿಕ ಪ್ರವಾಸ ಪ್ರತಿ ವರುಷದಂತೆ ೨೦೧೬ರಲ್ಲಿ ಮುಂಬೈ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು! ಯಾವ ಊರನ್ನು ನೋಡಬೇಕೆಂಬ ಕುತೂಹಲವಿತ್ತೋ ಅದೇ ಊರಿನ ಇಂಚಿಂಚನ್ನೂ ಎರಡು ದಿನಗಳ ಕಾಲ ಸುತ್ತುವ ಸದಾವಕಾಶ. ತರಗತಿ ಕೋಣೆಯಲ್ಲಿ ಭೂಪಟದಲ್ಲಿ ನೋಡಿದ, ಪುಸ್ತಕದಲ್ಲಿ ಓದಿದ ಮುಂಬೈಯಲ್ಲಿ ಓಡಾಡುವ ಭಾಗ್ಯ! ಇಂದಿನ ದಿನದ ಜೀವನ ಶೈಲಿಯಲ್ಲಿ ಓ.. ಅದೇನು ಮಹಾ... ಎಂದು ಅನೇಕರು ಹೇಳಬಹುದು.. ಆದರೆ ಚಿಮಿಣಿ ದೀಪದಲ್ಲಿ, ಝೋಪಡಿಯ ಮೂಲೆಯಲ್ಲಿ ಓದಿ ಪದವಿ ಪಡೆದ ನಮಗೆ ಅದು ಕನಸಿನ ಮಾತೇ ಸರಿ!
ಅದೇನೇ ಇರಲಿ, ಹೂವಿನ ಜೊತೆಗೆ ದಾರಕ್ಕೂ ದೇವರ ಪಾದ ಸೇರುವ ಅವಕಾಶ ಸಿಕ್ಕಂತೆ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ... ಅಂತೂ ಕನಸಿನ ನಗರಿ ಮುಂಬೈಯಲ್ಲಿ ಎರಡುದಿನ ಸುತ್ತಿದ್ದಾಯ್ತು. ಮಹಾನಗರಿಯ ಸ್ಥಳಗಳ ಬೇಟಿಯೂ ಆಯ್ತು. ಏನೋ ನೋಡಲು ಇನ್ನೂ ಬಹಳ ವರುಷಗಳೇ ಬೇಕು ಅಂದುಕೊಂಡದ್ದನ್ನು ಸುತ್ತಿದ್ದೂ ಆಯ್ತು.
ಅಚಾನಕ್ ಮತ್ತೊಂದು ತಿರುವು ಬಂತು ಜೀವನದಲ್ಲಿ ವರುಷದ ಬಳಿಕ. ಅದು ಸಿಸಿಆರ್ ಟಿ ಕಡೆಯಿಂದ. ಸಾಂಸ್ಕೃತಿಕ ಸಮನ್ವಯ ತಂಡ! ಶಿಕ್ಷಕರ ತಂಡವು ಉತ್ತರಾಕಾಂಡದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸಬೇಕಿತ್ತು! ಆ ತಂಡದಲ್ಲಿ ನಾನೂ ಇದ್ದೆ. ಇದಂತೂ ನಂಬಲಸಾಧ್ಯವಾದ ಸತ್ಯವಾಗಿತ್ತು ನನ್ನ ಪಾಲಿಗೆ! ಭೂಪಟದಲ್ಲಿ ಮಾತ್ರ ನೋಡಿದ ರಾಜ್ಯಗಳ ನೈಜ ದರ್ಶನ! ಅದೂ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಒಬ್ಬಳಾಗಿ! ಹಲವಾರು ಜನರಿಂದ ವಿಶ್ ಗಳು ನನ್ನನ್ನು ಮೇಲಕ್ಕೇರಿಸಿತ್ತು!
ಹೌದು, ಉತ್ತರಾಕಾಂಡದಲ್ಲಿ ನಮ್ಮ ಜಾನಪದ ಕಲೆಗಳ ಸಣ್ಣ ಮಟ್ಟಿನ ಅನಾವರಣದ ಬಳಿಕ ಸಾಂಸ್ಕೃತಿಕ ವಿನಿಮಯ! ಅಲ್ಲಿನ ಜನರ ಪ್ರೀತಿ, ಸಂಸ್ಕೃತಿ... ನಮ್ಮ ಭಾರತದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿತು. ಪ್ರೀತಿಗೆ ಯಾವುದೇ ವೇಷ,ಭಾಷೆ, ರಾಜ್ಯಗಳೆಂಬ ಬೇಧವಿಲ್ಲ. ನಾವೆಲ್ಲರೂ ಒಂದೇ..
ನೋಡದ ಉತ್ತರಾಕಾಂಡ, ರಾಜಧಾನಿ ದೆಹಲಿ ನೋಡಿದ್ದಾಯ್ತು. ತಾಜ್ ಮಹಲ್ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡದ್ದೂ ಆಯ್ತು! ದೆಹಲಿಯನ್ನು ಆಳಿದ ದೊರೆಗಳ ಕೋಟೆಗಳನ್ನು, ಕಟ್ಟಡಗಳ ದರ್ಶನವೂ ಆಯ್ತು! ಕುತುಬ್ ಮಿನಾರನ್ನು ಕಣ್ಣಲ್ಲಿ ತುಂಬಿಕೊಂಡದ್ದೂ ಆಯ್ತು!
ಅಂತೂ ಕನಸಲ್ಲೂ ಕಾಣದ ಉತ್ತರ ಭಾರತದ ದರ್ಶನ ನನ್ನ ಮನದಲ್ಲಿ ಮರೆಯಲಾರದ ಘಟನೆಯಾಗಿ ಹೃದಯದಲ್ಲಿ ಸಿಮೆಂಟಿನೊಡನೆ ಬೆರೆತ ಮರಳಿನಂತೆ ಅಚ್ಚಳಿಯದೆ ಉಳಿದುಬಿಟ್ಟಿದೆ. ನಮ್ಮ ಯೋಜನೆ ಏನೇ ಇದ್ದರೂ ಮೇಲೆ ಕುಳಿತವ ನಮಗಾಗಿ ಏನೋ ಯೋಜನೆಗಳನ್ನು ನಮಗೆ ಅರಿವಾಗದಂತೆ ರೂಪಿಸುತ್ತಲೇ ಇರುತ್ತಾನೆ ಮತ್ತು ನಾವಂದುಕೊಳ್ಳದೇ ಅದನ್ನು ನಮ್ಮತ್ತ ದೂಡಿರುತ್ತಾನೆ! Every dog has his own day.. ಸಾರ್ಥಕ ಜೀವನ!
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ