ಆದರ್ಶಕ್ಕೆ ಆದರ್ಶರಾದ ಗುರುಗಳು..
ಜೀವನದಲ್ಲೊಂದು ಆದರ್ಶವಿದ್ದು ಬದುಕಿದೊಡೆ ಮಾತ್ರ ಜೀವನ ಪಾವನವಾಗುವುದಂತೆ. ಅಂತೆಯೇ ಒಂದಕ್ಷರವನ್ನೂ ಓದಲು ಬರೆಯಲು ಬಾರದ ತಂದೆ ತಾಯಿಯರಿಗೆ ಜನಿಸಿದ ನನಗೆ ಮನೆಯಲ್ಲಿ ಓದಿನ ವಾತಾವರಣ ಮಕ್ಕಳಲ್ಲಿ ಹಿರಿಯಳಾದ ನಾನೇ ಸೃಷ್ಠಿಸಬೇಕಿತ್ತು. ಏನು ಓದಬೇಕು, ಎಂತು ಓದಬೇಕೆಂಬ ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ತಲೆಯಲ್ಲಿದ್ದುದು ಒಂದೇ.."ನಾನು ತುಂಬಾ ಓದಬೇಕು." ಆ ತುಂಬಾ ಓದಬೇಕು ಎನ್ನುವ ಕಾನ್ಸೆಪ್ಟ್ ಬಂದದ್ದು ತುಂಬಾ ತಿಳಿದು ಕೊಂಡು ಅದನ್ನು ನಮಗೆ ಧಾರೆಯೆರೆಯುತ್ತಿದ್ದ ಶಿಕ್ಷಕರ ಕಂಡು! ಕೃಷ್ಣ ಮೂರ್ತಿ ರಾವ್ ರವರು ನನ್ನ ಬಾಲ್ಯದ ಶಿಕ್ಷಕರು. ನಾನಿಂದು ಇಂಗ್ಲಿಷ್ ಶಿಕ್ಷಕಿಯಾಗಲು ಪ್ರೇರಣೆ ಅವರೇ. ಹಾಗೆಯೇ ಎರಡನೇ ತರಗತಿಯಲ್ಲೆ ಕುವೆಂಪುರವರ ಗೀತೆಗಳನ್ನು ಅವರು ಹಾಡಿಸುತ್ತಿದ್ದುದು, ನಮ್ಮ ಹಾಡನ್ನು ರೆಕಾರ್ಡ್ ಮಾಡಿ ನಮಗೇ ಕೇಳಿಸುತ್ತಿದ್ದುದು ಆಗ ನಮಗೆ ಅವರೇನೋ ಹೊಸದನ್ನು ಮಾಡುತ್ತಿರುವರೆಂಬ ಅಚ್ಚರಿಯನ್ನು ಉಂಟುಮಾಡುತ್ತಿತ್ತು. ಆ ಖುಷಿಯಂತೂ ಮರೆಯಲಸಾಧ್ಯ.
ಒಂದೇ ಪದಕ್ಕೆ ಅವರದೇ ಆದ ಸಾಹಿತ್ಯವನ್ನು ಸೇರಿಸಿ, ನಮ್ಮ ಹೆಸರನ್ನೂ ಅದರಲ್ಲಿ ಸೇರಿಸಿ ಹಾಡಿದಾಗ ನಮಗೇನೋ ಹೇಳ ತೀರದ ಆನಂದ! ಅದೇ ನನ್ನ ಬರವಣಿಗೆಗೆ ಮೂಲವೋ ಏನೋ..
ಮೂರು ವರುಷದಲ್ಲಿ ಕಲಿತದ್ದು ನೂರು ವರುಷದ ವರೆಗೆ ಎಂಬಂತೆ ಅವರು ಆರನೇ ವಯಸ್ಸಿನಲ್ಲಿ ಕಲಿಸಿದ ಅಪಾರ ಜ್ಞಾನ ಈಗಲೂ ಮರೆತಿಲ್ಲ!
ಅನಂತರ ಜೀವನದಲ್ಲಿ ಹಲವಾರು ಗುರುಗಳು ಬಂದರು, ತಮ್ಮದೇ ಛಾಪೊತ್ತಿದರು ಜೀವನದಲ್ಲಿ! ಪ್ರಾಥಮಿಕ ಶಾಲಾ ಕನ್ನಡ ಅಧ್ಯಾಪಕರಾಗಿ ಬಂದ ಜ್ಞಾನೇಂದ್ರ ಸರ್ ಕನ್ನಡವನ್ನು ನನಗೆ ರಸವತ್ತಾಗಿ ಕುಡಿಸಿಬಿಟ್ಟರು! ಆದರೆ ಆಂಗ್ಲ ಭಾಷೆಯ ಮೋಹ ಬಹಳವಿತ್ತು! ಪ್ರೌಢಶಾಲಾ ಕನ್ನಡ ಅಧ್ಯಾಪಕರಾಗಿದ್ದ ಸಿ.ಬಿ. ಮಹೇಶ್ವರಪ್ಪ ಸರ್ ರವರು ಕನ್ನಡ ವ್ಯಾಕರಣವನ್ನು ಅರೆದು ಕುಡಿಸಿ ಬಿಟ್ಟರು. ಅಲ್ಲಿ ಬೇಂದ್ರೆಯವರ ಕವನದ ಬಗೆಗೆ ಆಸಕ್ತಿ ಮೂಡಿಸಿದರು!
ಶಾಲೆಯ ಗ್ರಂಥಾಲಯದ ಪುಸ್ತಕಗಳು ನನ್ನ ಆಪ್ತ ಮಿತ್ರರಾದರು. ಪದವಿಪೂರ್ವ ತರಗತಿಯಲ್ಲಿ ನನ್ನ ಪುಣ್ಯವೋ ಎಂಬಂತೆ ಕನ್ನಡಕ್ಕೆ ಖ್ಯಾತ ಕವಿ ಅಮೃತ ಸೋಮೇಶ್ವರರ ಮಗನಾದ ಚೇತನ್ ಸೋಮೇಶ್ವರ್ ಸರ್ ಸಿಕ್ಕಿದಬಿಟ್ಟರು. ಕನ್ನಡ ನಾಟಕಗಳ ಅಭಿನಯಾತ್ಮಕ ಬೋಧನೆ ನನ್ನ ಮನದಾಳದಲ್ಲಿ ಅಚ್ಚೊತ್ತಿ ಬಿಟ್ಟಿತ್ತು! ವಿಜ್ಞಾನ ವಿಷಯ ಓದುತ್ತಿದ್ದರೂ ಗ್ರಂಥಾಲಯದ ಕನ್ನಡ ಕವಿಗಳ ಪುಸ್ತಕಗಳು ಕೈಸೇರ ತೊಡಗಿದವು. ಬರವಣಿಗೆ ಸನಿಹವಾಯಿತು. ನನ್ನೆಲ್ಲಾ ಗುರುಗಳಿಗೂ ನಾ ಅಭಾರಿ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ