ಚಕಾರದ ಚಲನೆ
ಚರಣ ಚರಿತ್ರೆಯ ಪಾಡಿ ಪೊಗಳಲಾರೆ
ಚಪಲ ಚಂದಿರ ಬೀಸುವ ಚಾಮರ
ಚಲಿಸಿ ಬೆಳಕನು ಕಳಿಸಿ ಬಿಡುವನು
ಚಳಿಯಲು ಸೆಕೆಯಲು ಚಲನ ಚರಿತೆಯು
ಚಟ್ಟದ ವರೆಗಿನ ಚಾರಣ ನಮ್ಮದು
ಚಾಚೂ ತಪ್ಪದೆ ಮುಗಿಸಲೆ ಬೇಕು..
ಚೆಲ್ಲಿ ಕಂಪನು ಬದುಕುವ ನಾವು
ಚರಕದಂತೆ ತಿರುಗುತಲಿದ್ದು ಪರರಿಗಾದರೆ ಹಿತವು..
ಚಟಚಟ ಮಳೆಯನು ನಂಬಿಹ ಜನರು
ಚಳಿ ಗಾಳಿಯೆನ್ನದೆ ದುಡಿಯುತಲಿಹರು .
ಚಕ್ಕುಲಿ ತಿನ್ನುವ ಹಾಗಿನ ಬಾಳುವೆ
ಚಕ್ಕನೆ ಮುಗಿಯದು ಗೋಳಿನ ಗೊಡವೆ..
ಚಾದರ ಹೊದ್ದು ಮಲಗಿದರಾಗದು
ಚೋರರ ಕಾಟದಿ ತಪ್ಪಿಸ ಬೇಕು
ಚೈತನ್ಯದ ಚಿಲುಮೆಯು ನಾವಾಗಬೇಕು
ಚಂದಿರನಂದದಿ ತಂಪಿದ್ದರೆ ಸಾಕು..
ಚೌಕಟ್ಟಿನಲ್ಲಿ ಪ್ರತಿಕ್ಷಣ ತೆವಳು
ಚೌಕವ ಸುತ್ತುತ ಪ್ರತಿದಿನ ಕವಲು..
ಚಿಟ್ಟೆಯ ಅಂದದಿ ನಗುತಿದ್ದರೆ ಅಂದ
ಚಪಲತೆ ತೊರೆದ ಬದುಕದು ಅಂದ..
ಚಕ್ಕನೆ ಬಂದು ಚಕ್ಕನೆ ಹೋಗುವ
ಚಿತ್ತ ಚಾಂಚಲ್ಯದ ಬಾಳ್ವೆಗೆ ಶರಣು
ಚಕ್ರದ ಹಾಗೆ ನಿತ್ಯ ತಿರುಗುತಲಿಹೆವು
ಚಲನಶೀಲವೂ ಚರಾಚರಗಳೆಲ್ಲವು..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ