ಬುದ್ಧಿ ಮಾತು..
ಪುತ್ರನೆಂದು ಕ್ಷಮಿಸಿ ರಕ್ಷಿಸಿ ಸಲಹುತಿಹುವೆ
ನೀ ಎನ್ನ ಎದೆ ಮೇಲೆ ನಲಿಯುತಿರುವೆ...
ಹಡೆದ ತಾಯಿಗೆ ಮಗನಾಗಿ ಏನ ಕೊಟ್ಟಿರುವೆ,
ಕಸ, ಪ್ಲಾಸ್ಟಿಕಿನ ರಾಶಿ, ಕರಗಲಾರದ ರಾಸಾಯನಿಕಗಳಿವೆ...
ಮಾನವ ನಿನ್ನೂಟಕೆ ರಾಶಿ ಹೊನ್ನು ಸಾಲದಾಗಿದೆ,
ನಿನ್ನ ಧನದಾಹಕೆ ನನ್ನೊಡಲು ಪೂರ್ತಿ ಬರಿದಾಗಿದೆ..
ತಾಯಿಯಾದರೂ ನಾ ನಿನ್ನನೇ ಬೇಡುವ ಕಾಲ ಬಂದಿದೆ..
ದಯೆತೋರು ನನ್ನ ಮೇಲೆ ಮುಂದಿನ ಜನಾಂಗಕ್ಕೆ ನಾ ಉಳಿಯಬೇಕಿದೆ...
ಮೆತ್ತನೆಯ ಹಾಸಿಗೆಯಂಥ ಎಲೆ ಉದುರಿಸಿ ಬೆಳೆವ
ಮರಗಳು ಕಡಿಕಡಿದು ತುಂಡರಿಸಿ, ತಿಂದು ತೇಗಿ ನಾಶವಾಗಿವೆ..
ಎಳೆ ಬಿಸಿಲ ಹೀರಿ ಬೆಳಕಲಿ ಒಳ್ಳೆ ಗಾಳಿ ಕೊಡುವ
ಕಲ್ಪ ವೃಕ್ಷಗಳು ನಿನ್ನ ಹೀನ ಕಾರ್ಯಕೆ ಬಲಿಯಾಗಿವೆ...
ಬಿಸಿಲ ಝಲವೇರಿ, ಅಕಾಲಿಕ ಮಳೆಯು ಸುರಿಸುರಿದು,
ಕೀಟನಾಶಕಗಳ ಸಿಂಪಡಿಸಿ ಭೂಮಿ ಸತ್ವ ಕಳೆದುಕೊಂಡಿದೆ!
ಮಣ್ಣಿನೊಳಗೆ ಟೈರ ರಾಶಿ, ಫೈಬರ್ ಎಂಬ ಪಿಶಾಚಿ,
ಅಬಲೆ ನಾನು, ಹೇಗೆ ತಾನೆ ಸಹಿಸಿ ಬಾಳ ಬೇಕಿದೆ ?
ನಿನ್ನ ಕಾರ್ಯ ಹೆಚ್ಚುತಲಿ ಗಾಳಿ ಕಳೆದುಕೊಳ್ಳುವೆ..
ನೀರು ಸಿಗದೆ ಆಹಾರವಿರದೆ ನೊಂದು ಬೆಂದು ಹೋಗುವೆ
ತಾಯಿ ನಾನು ನನ್ನ ಕ್ಷಮೆಗೂ ಎಲ್ಲೆ ಇಹುದು ತಿಳಿದುಕೋ.
ಮಿಥ್ಯ ಮರೆತು ಸತ್ಯದಿಂದ ಬದುಕುವುದ ಕಲಿತುಕೋ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ