ಮಂಗಳವಾರ, ಜನವರಿ 1, 2019

259 ಸಣ್ಣಕತೆ-ಗೆಳೆತನ-1

ಸಣ್ಣ ಕತೆ

ಗೆಳೆತನಕ್ಕೇನು ಬೇಕು!

ಪರೀಕ್ಷೆಯ ಸಮಯ ಹತ್ತಿರವಾಗುತ್ತಿತ್ತು! ಎಲ್ಲರೂ ಎಡೆಬಿಡದೆ ಓದುತ್ತಿದ್ದರೆ  ಆಶಾ ಅವಳ ಗೆಳತಿ ಆಯಿಷಾಳಿಗಾಗಿ ಕಾಯುತ್ತಿದ್ದಳು! ಬರಲೇ ಇಲ್ಲ ಆಯಿಷಾ! ಆಶಾಗೆ ಟೆನ್ಶನ್ ಹೆಚ್ಚಾಯ್ತು! ಕೊಠಡಿಗೆ ಹೋಗಲು ಗಂಟೆ ಬಾರಿಸಿತು ಆ ಸಮಯಕ್ಕೆ ಬಂದ ಯಾರೋ 'ಆಯಿಷಾ ಕೈಗೆ ಗಾಜು ತಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರಂತೆ'ಎಂಬ ವಿಷಯ ತಿಳಿಸಿದರು! ಆಶಾ ತಬ್ಬಿಬ್ಬಾದಳು! ಜೀವದ ಗೆಳತಿಗೆ ಪರೀಕ್ಷೆ ಬರೆಯಲಾಗದು!
ಯೋಚನೆ ಮಾಡುತ್ತಾ ಕೂರಲು ಸಮಯವೇ ಇರಲಿಲ್ಲ! ಕೊಠಡಿಯೊಳಗೆ ನುಗ್ಗಿದಳು! ಅದಾಗಲೇ ಎಲ್ಲರ ಕೈಗೆ ಪೇಪರ್ ಸಿಕ್ಕಿ ಆಗಿತ್ತು! ಓದಿದ್ದೆಲ್ಲಾ ಮರೆತು ಹೋಗಿ ಆಯಿಷಾಳ ಮುದ್ದು ಮುಖವೇ ಕಣ್ಮುಂದೆ ಬರತೊಡಗಿತು! ಕಣ್ಣೀರು ತನಗರಿವಿಲ್ಲದೆಯೇ ಹರಿದು ಪೇಪರನ್ನು ತೋಯಿಸುತ್ತಿತ್ತು!
  ಪ್ರಶ್ನೆಗಳನ್ನು ಒದ್ದೆ ಕಣ್ಣುಗಳಲ್ಲೇ ಓದುತ್ತಾ ತನಗೆ ತಿಳಿದ ಉತ್ತರವನ್ನೆಲ್ಲ ಒಂದೇ ಸಮ ಗೀಚಿದಳು ಆಶಾ ತನ್ನ ಗೆಳತಿಯ ಮುಖವನ್ನೆ ಮನದಲ್ಲಿರಿಸಿದ್ದಳು! ಆಂತರ್ಯದಲ್ಲಿ ಅವಳ ನೋವನ್ನು ತಾನು ಅನುಭವಿಸುತ್ತಿದ್ದಳು! ಹೇಗಿರುವಳೋ, ಎಷ್ಟು ನೋವು ಅನುಭವಿಸುತ್ತಿರುವಳೋ, ಅವಳಿಗೇನಾಗುವುದೋ ಎಂಬ ಭಯದಿಂದ ಕೃಷ್ಣ,ರಾಮ,ಅಲ್ಲಾ,ಯೇಸು ಹೀಗೆ ನೆನಪಿಗೆ ಬಂದ ಎಲ್ಲಾ ದೇವರಲ್ಲೂ ಅವಳಿಗಾಗಿ ಪ್ರಾರ್ಥಿಸತೊಡಗಿದಳು!
  ಎಲ್ಲಾ ಯೋಚನೆಗಳ ಭರದಲ್ಲಿ ಮೂರು ಗಂಟೆ ಕಳೆದು ಹೋದುದೇ ತಿಳಿಯಲಿಲ್ಲ! ಗಂಟೆ ಬಾರಿಸಿತು, ಪೇಪರ್ ಕಟ್ಟಿರೆಂಬ ಸಂದೇಶ ಬಂತು! ಆಗ ಅರಿವಾಯಿತು! ಟೆನ್ಶನ್ನಲ್ಲಿ ಬರೆದ ಪುಟಗಳೆಲ್ಲ ಹಿಂದು ಮುಂದಾಗಿದ್ದವು! ಒಂದನೇ ಪುಟದ ಅರ್ಧ ಉತ್ತರ ಮೂರನೇ ಪುಟಕ್ಕೆ ಜಂಪ್ ಮಾಡಿತ್ತು! ಮೂರನೇ ಪುಟದ ಬಳಿಕ ಎರಡನೇ ಪುಟದ ಪ್ರಶ್ನೆಗಳಿಗೆ ಉತ್ತರವಿತ್ತು! ನಾಲ್ಕನೇ ಪುಟ ಖಾಲಿಯಾಗೇ ಉಳಿದು ಐದನೇ ಪುಟದಲ್ಲಿ ಮುಂದುವರೆಸಲಾಗಿತ್ತು!
ಯಾವಾಗಲೂ ತರಗತಿಯಲ್ಲಿ ಮೊದಲಿಗಳಾಗಿ ಪ್ರತಿ ಪ್ರಶ್ನೆಗೂ ಸರಿಯಾಗಿ ಚಾಚೂ ತಪ್ಪದೆ ಉತ್ತರಗಳನ್ನು ಬರೆಯುತ್ತಿದ್ದ ತಾನೇಕೆ ಹೀಗಾದೆ ಎಂದು ಯೋಚಿಸುತ್ತಿರುವಾಗಲೇ ಕೊಠಡಿ ಮೇಲ್ವಿಚಾರಕರು ಬಂದು ಉತ್ತರ ಪತ್ರಿಕೆ ಪಡೆದುಕೊಂಡು ಹೋದರು. "ಪರೀಕ್ಷೆ ಪೇಪರ್ ಏನಾದರಾಗಲಿ ದೇವರೇ, ಇನ್ನೊಮ್ಮೆ ಬರೆಯಬಹುದು ಆದರೆ ಆಯಿಷನಿಗೇನೂ ಆಗದಿರಲಿ " ಎಂದುಕೊಂಡು ಗೇಟಿನವರೆಗೆ ಓಡಿ ಹೋಗಿ ಬಂದ ಆಟೋ ಹಿಡಿದು ಆಸ್ಪತ್ರೆಯತ್ತ ಹೋದಳು ಆಶಾ. ಬೆಡ್ ಮೇಲೆ ನಗುತ್ತಾ ಮಲಗಿದ್ದ ಆಯಿಷಾಳ ಮುದ್ದು ಮುಖ ಕಂಡು ದು:ಖದ ಕಟ್ಟೆಯೊಡೆದ ಆಶಾಳನ್ನು ಆಯೀಷಾಳೇ ಸಮಾಧಾನಪಡಿಸಬೇಕಾಯ್ತು! "ಗಾಬರಿಯಾಗುವಂಥದ್ದು ಏನೂ ಆಗಿಲ್ವೇ,ಒಂದೆರಡು ದಿನ ಸರಿಯಾಗ್ಬಹ್ದು, ಬ್ಯಾಂಡೇಜ್ ನಲವತ್ತು ದಿನ ಆದ್ಮೇಲೆ ತೆಗೀತಾರಂತೆ" ಎಂದು ಧೈರ್ಯದಿಂದ ಹೇಳುತ್ತಿದ್ದ ಆಯಿಷಾಳ ಮುಖವನ್ನೇ ಕಕ್ಕಾಬಿಕ್ಕಿಯಾಗಿ ತದೇಕ ಚಿತ್ತದಿಂದ 'ಈ ಹುಡುಗಿಗೆಷ್ಟು ಧೈರ್ಯ?' ಎಂಬಂತೆ ನೋಡುತ್ತಾ ಕುಳಿತು ತನ್ನನ್ನೆ ತಾನು ಗೆಳತಿಗಾಗಿ ಮರೆತಿದ್ದಳು ಆಶಾ!
"ಗೆಳೆತನವೇ ಹಾಗಲ್ಲವೇ? ಅದಕ್ಕಿರುವ ಶಕ್ತಿ ಇನ್ಯಾವ ಸಂಬಂಧಕ್ಕಿದೆ?" ಎಂದರು ಅವಳನ್ನು ಹುಡುಕಿಕೊಂಡು ಬಂದ ಅವಳಮ್ಮ ಅನ್ನಪೂರ್ಣ ಆಯಿಷಾಳ ಅಮ್ಮ ಖದೀಜಾರೊಂದಿಗೆ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ