ಬರಹ-ಮಕ್ಕಳ ಕೈಗೆ ಮೊಬೈಲ್-ಪೋಷಕರೇನು ಮಾಡಬೇಕು?
ತಮ್ಮ ಕೆಲಸದಲ್ಲಿ ನಾವು ಮುಳುಗಿರುತ್ತೇವೆ,ನಾವು ಯಾವಾಗಲೂ ಬ್ಯುಸಿ. ಅದರಲ್ಲೂ ಮಕ್ಕಳ ಅಮ್ಮಂದಿರು! ಹೊರಗಿನ ಕೆಲಸವೂ ಹಾಗೂ ಮನೆಯೊಳಗಿನ ಕೆಲಸದಲ್ಲೂ ಸಮಯ ಸಿಗುವುದು ಅತ್ಯಲ್ಪ. ಮನೆಯಲ್ಲಿ ಸಿಗುವ ಅತ್ಯಲ್ಪ ಸಮಯದಲ್ಲಿ ನಮ್ಮ ಕೆಲಸ ಬೇಗ ಮುಗಿಯಬೇಕಾದರೆ ನಮ್ಮ ಮಕ್ಕಳು ಸುಮ್ಮನಿರಬೇಕು. ಮಕ್ಕಳನ್ನು ಸುಲಭವಾಗಿ ಸುಮ್ಮನೆ ಕುಳಿತುಕೊಳ್ಳಿಸುವ ವಿಧಾನವೆಂದರೆ 'ಏನಾದರೂ ನೋಡುತ್ತಾ ಸುಮ್ಮನೆ ಕುಳಿತು ನನ್ನನ್ನು ಕೆಲಸ ಮಾಡ್ಲಿಕ್ಕೆ ಬಿಡ್ಲಿ' ಅಂತ ಅವನ ಕೈಗೆ ಮೊಬೈಲ್ ಕೊಟ್ಟು ಬಿಡುವುದು! ಕೆಲವು ಹಠಮಾರಿ ಮಕ್ಕಳನ್ನು ತಡೆಯಲಾಗದೆ ಪೋಷಕರನ್ನು ಅವರೇ ಜಗ್ಗಿಸಿ ಮೊಬೈಲ್ ಗಿಟ್ಟಿಸಿಕೊಳ್ಳುತ್ತಾರೆ! ಇನ್ನು ಕೆಲವು ಪೋಷಕರಿಗೆ 'ನಾವೇ ಶ್ರೀಮಂತರು ಈ ಊರಿನಲ್ಲಿ' ಎಂದು ಊರಲ್ಲೆಲ್ಲಾ ತೋರಿಸಿಕೊಳ್ಳುವ ಕ್ರೇಜ್! ಅದಕ್ಕೆ ಮಗ ಮೂರನೆ ತರಗತಿಗೆ ಬರುವಾಗಲೇ 'ಅವನಿಗೆ ಆಟ ಆಡಲಿಕ್ಕಿರಲಿ,ನಾವೇನೂ ಅವನಿಗೆ ಕಡಿಮೆ ಮಾಡಲ್ಲ' ಅಂತ ಒಂದು ಟ್ಯಾಬ್ ತಂದುಕೊಟ್ಟಾಯ್ತು!
ಇದೆಲ್ಲಾ ನಾವು ಗೊತ್ತಿದ್ದು ಮಾಡುವ ತಪ್ಪುಗಳು! ಯೂಟ್ಯೂಬ್ ನೋಡದ ಮಕ್ಕಳೇ ಇಲ್ಲ ಎನ್ನಬೇಕು! ಮಗು ಆರು ತಿಂಗಳಿರುವಾಗಲೇ ಊಟ ಮಾಡಿಸಲು ಯೂಟ್ಯೂಬ್ ನಲ್ಲಿ ರೈಮ್ಸ್ ಹಾಕಿ ತೋರಿಸಿಕೊಂಡು ತಿನ್ನಿಸುವ ಅಭ್ಯಾಸ ತಂದೆ-ತಾಯಿ ಇಬ್ಬರೂ ಬೆಳೆಸಿರುತ್ತಾರೆ. ನಂತರ ಆ ಮಗು ಯೂಟ್ಯೂಬ್ ನಲ್ಲಿ ಎಕ್ಸ್ ಪರ್ಟ್ ಆಗಿಬಿಡ್ತಾನೆ!
ಬದಿಯಲ್ಲಿ ಆಗಾಗ ಜಾಹೀರಾತು ಬರುತ್ತಿರುತ್ತದೆ, ನೀವೆಲ್ಲಾ ಗಮನಿಸಿರಬಹುದು! ಮಕ್ಕಳಿಗೇನು ಗೊತ್ತು ಯಾವುದು ನೋಡಬೇಕು, ಮತ್ಯಾವುದನ್ನು ನೋಡಬಾರದೆಂದು? ಎಲ್ಲಾದಕ್ಕೂ ಓಕೆ ಒತ್ತಿಕೊಂಡು ಹೋಗುತ್ತಿರುತ್ತಾರೆ. ನೀವು ಹದಿನೆಂಟು ವರುಷಕ್ಕಿಂತ ಮೇಲಿನವರಾ ಎಂಬ ಒಂದು ಪ್ರಶ್ನೆ ಬರುತ್ತದೆ. ಅದಕ್ಕೂ ಓದದೆ ಓಕೆ ಎಂದು ಉತ್ತರ ಆಗಲೇ ಕೊಟ್ಟಾಗಿ ಬಿಟ್ಟಿರುತ್ತದೆ. ತದನಂತರದ ಮಾರಕ-ಬಾದಕಗಳಿಗೆ ಯಾರು ಹೊಣೆ ದೇವರಿಗೇ ಗೊತ್ತು. ಮಗ ಓದುವುದಿಲ್ಲ, ಮಗಳು ಸರಿಯಾಗಿ ಮಾತನಾಡುವುದಿಲ್ಲ, ಬದಲಾಗಿದ್ದಾರೆ, ಏಕೋ ಏನೋ ಗೊತ್ತಿಲ್ಲ ಎಂದು ಕೆಲವು ಪೋಷಕರು ನೂಲು ಕಟ್ಟಿಸಲು, ಇನ್ನು ಕೆಲವರು ದೃಷ್ಟಿ ತೆಗೆಸಲು, ಮತ್ತೆ ಕೆಲವರು ಡಾಕ್ಟರ್, ಟೀಚರ್, ಸೈಕಿಯಾಟ್ರಿಸ್ಟ್ ಬಳಿ ಕರೆದುಕೊಂಡು ಹೋದರೆ ಭಯಂಕರ ಎನಿಸಿಕೊಂಡವರು ಹಿಡಿದಿರುವ ಭೂತ ಬಿಡಿಸಲೂ ಹೋಗುವವರಿದ್ದಾರೆ!
ಮಕ್ಕಳ ಹೆಜ್ಜೆ ಹೆಜ್ಜೆಗಳನ್ನೂ ಗಮನಿಸಿ ಅವರನ್ನು ನಡೆಸಿಕೊಂಡು ಹೋಗಬೇಕಾದುದು ಪೋಷಕರ ಕರ್ತವ್ಯ ಹಾಗೂ ಜವಾಬ್ದಾರಿ. ಮನೆ ಒಳಗೂ ಹೊರಗೂ ದುಡಿಯುವ ವಿಭಕ್ತ ಕುಟುಂಬದ ಪೋಷಕರಿಗದು ಚಾಲೆಂಜ್. ಹೀಗಿರುವಾಗ ಅದನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಹೇಗೆ ಜೀವನ ಕಟ್ಟಿ ಕೊಡುವಿರಾ ಪೋಷಕರಾದ ನೀವು ನಾವೆಲ್ಲ ಉತ್ತರಿಸಿಕೊಳ್ಳ ಬೇಕಾದ ನೇರ ಪ್ರಶ್ನೆ. ನೀವೇನಂತೀರಿ?
-ಪ್ರೇಮ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ ದ.ಕ 574239
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ