ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಧ್ವನಿಸುವಲ್ಲಿ ದೇವಾಲಯಗಳ ಪಾತ್ರ
ಭಾರತ ದೇಶದ ಪ್ರತಿಯೊಂದು ಗ್ರಾಮದಲ್ಲೂ ಕೂಡ ಅದಕ್ಕೆ ಅದರದ್ದೇ ಆದ ಇತಿಹಾಸವಿದೆ. ಆ ಇತಿಹಾಸಕ್ಕೆ ಪೂರಕವಾದಂತೆ ಅದು ಯಾರು ಹೇಳಿದರೋ ತಿಳಿಯದು ದೇವರುಗಳು ಅವರಾಗೇ ಹೆಸರಿಟ್ಟುಕೊಂಡು ಬಂದರೋ ಅಥವಾ ಜನರೇ ಹೆಸರಿಟ್ಟು ದೇವರಿಗೆ ಗುಡಿ ಕಟ್ಟಿ ಪೂಜೆ ಮಾಡಿದರೋ... ಆದರೆ ಒಂದೊಂದು ಊರಿನ ಐತಿಹ್ಯವೂ ಗಣನೀಯ, ಅದರ ಕತೆ ಕೇಳುವುದೇ ರಸಾನುಭವ!
ಭಾರತದಲ್ಲಿ ಹಲವಾರು ಶಿವಾಲಯಗಳಿವೆ. ಹೆಚ್ಚಿನವು ಲಿಂಗ ಪೂಜೆಗೇ ಸೀಮಿತವಾದದ್ದು! ಅಲ್ಲೆಲ್ಲೂ ಶಿವನ ಪ್ರತಿಮೆಗಳಿಲ್ಲ, ಬದಲಾಗಿ ಶಿವ ಲಿಂಗರೂಪಿ, ಲಿಂಗೈಕ್ಯ. ಅದಕ್ಕಾಗೇ ಲಿಂಗಾಯಿತರು ಶಿವರೂಪಿ ಲಿಂಗವನ್ನು ತಮ್ಮ ದೇಹದಲ್ಲಿ ಧರಿಸಿಕೊಳ್ಳುತ್ತಾರೆ. ಶಿವ ಸದಾ ತಮ್ಮೊಡನೆ ಇರಲೆಂದು! ಅದೇನೇ ಇರಲಿ, ಒಂದೇ ಲಿಂಗವಿರುವ ಶಿವಾಲಯಗಳ ಸಂಖ್ಯೆ ಅಧಿಕ. ಅದರಲ್ಲೂ ನಮ್ಮ ಐವರ್ನಾಡು ಊರಿನ ಹೆಸರೇ ಸೂಚಿಸುವಂತೆ ಪಂಚ ಲಿಂಗಗಳ ಪೂಜೆ ನಡೆಯುವ ಪಂಚಲಿಂಗೇಶ್ವರನ ಸನ್ನಿಧಿ! ಊರಿನವರಿಗೆ ಹೆಮ್ಮೆ ಅನ್ನಿಸಬೇಕು ಏಕೆ ಗೊತ್ತಾ? ಕೋಟಿ ಲಿಂಗ, ಸಹಸ್ರ ಲಿಂಗ ದೇವಾಲಯಗಳ ಬಳಿಕ ಶಿವನ ಆಲಯ ಪಂಚಲಿಂಗ! ಇಲ್ಲಿಗೆ ಬರುವ ಭಕ್ತರು ಒಮ್ಮೆಗೆ ಐದು ಲಿಂಗಗಳ ದರ್ಶನ ಪಡೆಯುವರು!
ಇದಿಷ್ಟು ದೇವರ ಬಗೆಗಾದರೆ ಊರಿನ ದೆೇವಾಲಯಗಳ ಪರಂಪರೆಯ ಬಗೆಗೆ. ಪಕ್ಕದ ಊರಾದ ಬೆಳ್ಳಾರೆ, ಪಂಜ ಗಳಲ್ಲೂ ಶಿವಾಲಯಗಳಿವೆ. ಅವುಗಳಿಗೂ ಅವುಗಳದೇ ಆದ ಪರಂಪರೆ ಇದೆ. ಪಂಚಲಿಂಗೇಶ್ವರನ ಕುರಿತ ಹಲವಾರು ಕತೆಗಳೂ ಊರಿನ ಹಿರಿಯರಿಗೆ ತಿಳಿದಿರಬಹುದು. ಈ ಊರಿನಲ್ಲಿ ಸರಿಯಾದ ಪೂಜೆ ನಡೆಯದೇ ಹೋದಾಗ ಪಂಚಲಿಂಗೇಶ್ವರನು ಐವರ್ನಾಡನ್ನು ಬಿಟ್ಟು ಧರ್ಮಸ್ಥಳಕ್ಕೆ ಓಡಿ ಹೋಗಿ ಅಲ್ಲೆ ನೆಲೆಸುವೆನೆಂದಾಗ, ಊರ ಹಿರಿಯರು ಸರಿಯಾದ ಕ್ರಮದಲ್ಲಿ ಪೂಜಾ ವಿಧಾನವನ್ನು ಕಲಿತ ಭಟ್ಟರನ್ನು ಪೂಜೆಗೆ ನೇಮಕಗೊಳಿಸಿದಾಗ ದೇವರು ಇಲ್ಲೇ ಉಳಿದುಕೊಂಡರಂತೆ! ಇದೊಂದು ಪುರಾಣದ ಕಟ್ಟುಕತೆ ಇರಬಹುದು, ಆದರೆ ದೇವಾಲಯದಲ್ಲಿ ದೇವರಿದ್ದು, ಊರನ್ನು ಪೊರೆಯುವರೆಂಬ ನಂಬಿಕೆ ಯಾವತ್ತೂ ಇದೆ. ಯಾವುದೇ ಊರಿನ ಪರಂಪರೆಯ ಬಗ್ಗೆ ತಿಳಿಯಬೇಕಾದರೆ ಆ ಊರಿನ ದೇವಾಲಯಕ್ಕೆ ಭೇಟಿ ಕೊಡಬೇಕಂತೆ. ಊರಿನ ಪರಂಪರೆಯನ್ನು ಪ್ರತಿಬಿಂಬಿಸುವ ತಾಣ ಅದಾಗಿದೆ.
ಮುಂದೆ ಸಂಸ್ಕೃತಿಯ ಬಗ್ಗೆ. ಪ್ರತಿಯೊಂದು ಊರಿನ ಜನರಿಗೂ ಅವರದೇ ಶೈಲಿಯ ಭಾಷೆ, ನಡೆ-ನುಡಿ, ಬಟ್ಟೆ-ಬರೆ, ವೇಷ-ಭೂಷಣಗಳು ಇರುತ್ತವೆ, ಇವು ಜಿಲ್ಲೆಗೋ, ತಾಲೂಕಿಗೋ, ರಾಜ್ಜಕ್ಕೂ, ದೇಶಕ್ಕೂ ಬದಲಾಗುತ್ತಿರುತ್ತವೆ, ಧರ್ಮಗಳಿಗೂ, ಜಾತಿಗಳಿಗೂ ಬದಲಾವಣೆ ಇರುತ್ತದೆ. ಭಾರತೀಯ ನಾರಿಯರೆಲ್ಲರೂ ಪೂಜೆ, ಕಾರ್ಯಕ್ರಮ ಎಂದಾಗ ಸೀರೆಯನ್ನು ಇಷ್ಟಪಡುವುದು ರಕ್ತಗತವಾಗಿ ಬಂದ ಈ ಮಣ್ಣಿನ ಗುಣವಲ್ಲವೇ? ಭಾರತೀಯಳಾಗಿ ಹುಟ್ಟಿದ ಮಹಿಳೆಗದು ತನ್ನ ಸಂಸ್ಕೃತಿಯ ಪ್ರತೀಕದ ಹೆಗ್ಗುರುತು!
ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತುದಿಯಲಿರುವ ಸುಳ್ಯ ತಾಲೂಕು ಕೊಡಗು, ಹಾಸನ ಜಿಲ್ಲೆಗಳ ಹಾಗೂ ಕೇರಳ ರಾಜ್ಯದ ಗಡಿಯನ್ನೂ ಹೊಂದಿದೆ. ಹಾಗಾಗಿ ಇಲ್ಲಿ ಅರೆಭಾಷೆ, ಕನ್ನಡ, ತುಳು, ಕೊಂಕಣಿ, ಮಲಯಾಳಂ, ತಮಿಳು, ಭಾಷೆಗಳನ್ನಾಡುವ ಜನರಿಂದ ಸಮ್ಮಿಳಿತವಾಗಿದೆ. ಇಂದಿರಾಗಾಧಿಯವರ ಆಡಳಿತ ಕಾಲದಲ್ಲಿ ಇಲ್ಲಿನ ರಬ್ಬರ್ ಮರದ ಹಾಲು ತೆಗೆಯುವ ಟ್ಯಾಪಿಂಗ್ ಕೆಲಸಕ್ಕೆ ಕರೆಸಿಕೊಂಡ ಶ್ರೀಲಂಕಾದ ಮೂಲ ನಿವಾಸಿಗಳಾದ ತಮಿಳರನ್ನು ನಾವಿಲ್ಲಿ ಕಾಣಬಹುದು. ಅವರ ನಂತರದ ಸಂತತಿಯವರು ಇಲ್ಲೇ ಹುಟ್ಟಿ ಬೆಳೆದವರಾದುದರಿಂದ ಅವರೆಲ್ಲ ಇಲ್ಲಿಯವರೇ ಆಗಿರುವರು. ಇದು ಸಂಸ್ಕೃತಿಯ ಹರಡುವಿಕೆ. ಇಲ್ಲಿ ಸಂಸ್ಕೃತಿ ಹಂಚಿ ಹೋಗಿದೆ. ಬೇರೆ ಬೇರೆ ಊರುಗಳಿಂದ ಹೊಟ್ಟೆ ಪಾಡಿಗಾಗಿ ಅಲೆದಾಡುತ್ತಾ ಬಂದ ಜನರಿಗೆ ಈ ಊರು ಕೈಹಿಡಿದು ಅನ್ನವನ್ನಿತ್ತು ಪೊರೆದಿದೆ. ಹಾಗಾಗಿ ಇಲ್ಲಿ ಸಾಂಸ್ಕೃತಿಕವಾಗಿ ಹೇಳಬೇಕೆಂದರೆ ವಿವಿಧತೆಯಲ್ಲಿ ಏಕತೆಯ ಗೂಡಾಗಿಹುದು. ಭಕ್ತರ ಪಾಲಿಗೆ ಶಿವನೊಬ್ಬನೇ ಅಲ್ಲವೇ? ವೇಷ ಬೇರೆ, ಭಾಷೆ ಬೇರೆಯಾದರೂ ಈಶನೊಬ್ಬನೇ ದೇವರಾದಾಗ ಭಕ್ತಿಯ ಸೇವೆಯೊಂದೇ ಮುಖ್ಯವಾಗುತ್ತದೆ.
ಅಲ್ಲಿ ಹಲವಾರು ಜನ ಒಟ್ಟಾಗುತ್ತಾರೆ, ಗುಂಪುಗೂಡುತ್ತಾರೆ, ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ, ತಮ್ಮ ತಮ್ಮ ಕೆಲಸ-ಕಾರ್ಯ, ರಾಜಕೀಯ ವಿಚಾರಗಳ ಬಗೆಗೆ ಮಾತುಕತೆ ನಡೆಯುತ್ತದೆ. ನಾಟಕ, ಯಕ್ಷಗಾನ, ನೃತ್ಯಗಳೊಡನೆ ಒಟ್ಟಾಗಿ ಮನರಂಜನೆ ಪಡೆಯುತ್ತಾರೆ. ನಾವೆಲ್ಲರೂ ಒಂದೇ ಎಂಬ ಭಾವನೆ ಜಾತ್ರೆಗಳಿಂದ ಬರುತ್ತದೆ. ಅಲ್ಲಿ ಜಾತ್ರೆ ಯಾವ ದೇವರದೇ ಇರಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರೆನ್ನದೆ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಬರುತ್ತಾರೆ. ವ್ಯಾಪಾರ-ವ್ಯವಹಾರಕ್ಕೆ ಯಾವುದೇ ಜಾತಿ ಮತ ಬೇಧಗಳಿಲ್ಲ, ಕೇವಲ ಹೊಟ್ಟೆಪಾಡು, ಬದುಕಿನ ದಾರಿ, ಅಷ್ಟೆ!
ಹೀಗೆ ಜನರಿಂದ ಮೇಳೈಸುತ ಜನ ಬೇಧ- ಭಾವ ಮರೆತು, ಒಟ್ಟಾಗಿ ದೇವಾಲಯಗಳಲ್ಲಿ ಒಂದುಗೂಡಿ, ಮನರಂಜನೆ ಪಡೆದು, ಆಗುಹೋಗುಗಳನ್ನು ಚರ್ಚಿಸಿ, ಕುಶಲೋಪರಿ ವಿಚಾರಿಸಿ, ಒಬ್ಬರ ಕಷ್ಟವನ್ನು ಮತ್ತೊಬ್ಬರೊಡನೆ ಹಂಚಿಕೊಂಡು, ತಮ್ಮ ಪರಂಪರೆ, ಸಂಸ್ಕೃತಿ ಹಬ್ಬಿಸಿ, ಎಲ್ಲರೂ ಕಲೆತು, ಬೆಳೆದು ಒಟ್ಟಾಗುವ ಜಾಗ ಈ ಮಠ ಮಂದಿರಗಳೆಂದರೆ ತಪ್ಪಾಗದು. ಹಿರಿಯರ ಆಶಯದಂತೆ ಜನರೆಲ್ಲ ಒಟ್ಟಾಗಿ ನೇಮ, ಪೂಜೆ, ಕೋಲ, ಗದ್ದಲ, ಗೌಜಿ, ಜಾತ್ರೆ ಅಂತ ಆಗಾಗ ಮನರಂಜನೆಯೊಂದಿಗೆ ಪರಸ್ಪರ ಒಟ್ಟಾಗಲು ಕೂಡಾ ಇದು ಸಹಾಯಕ. ಭಗವದ್ಗೀತೆಯ ಸಾರವೂ ಅದೇ ಅಲ್ಲವೇ? ಸರ್ವೇ ಜನ: ಸುಖಿನೋ ಭವಂತುಃ ಅಲ್ಲವೇ? ನೀವೇನಂತೀರಿ?
ಪ್ರೇಮ್
ಸಹ ಶಿಕ್ಷಕರು
ಸ.ಪ.ಪೂ.ಕಾಲೇಜು, ಐವರ್ನಾಡು
ಸುಳ್ಯ, ದ.ಕ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ