ಗುರುವಾರ, ಮಾರ್ಚ್ 7, 2019

835. ಮನದಾಸೆ ಫಲಿಸಿತು

ಮನದಾಸೆ ಫಲಿಸಿತು!

"ಮಧುರ! ಆಹಾ ಪೋಷಕರು ನನಗಿಟ್ಟ ಹೆಸರು ಅದೆಷ್ಟು ಸುಮಧುರ! ಆದರೆ ಆ ಮಧುರ ಬಾಳುವೆ ನನಗೆ ದಕ್ಕಲೇ ಇಲ್ಲ..." ಎನ್ನುತ್ತಾ ಕುಳಿತ ಮಧುರಳ ನೆನಪು ಹಿಂದಕ್ಕೆ ಜಾರಿತು.
"ಹೌದು, ಬಾಲ್ಯದಿಂದಲೂ ನನ್ನ ಕನಸು ನನ್ನ ಹುಟ್ಟುಹಬ್ಬವನ್ನು ಫಿಲ್ಮ್ ನಲ್ಲಿ ತೋರಿಸುವಂತೆ ಕೇಕ್ ಕಟ್ ಮಾಡ್ತಾ ಆಚರಿಸಬೇಕು, ನನಗದು ಸಾಧ್ಯವಾಗಲೇ ಇಲ್ಲ, ಇಪ್ಪತ್ತೇಳು ವರುಷಗಳ ಕನಸು! ಅಮ್ಮನ ಮನೇಲಿ ಹೇಗೂ ಅದು ಈಡೇರಲಿಲ್ಲ, ಗಂಡನ ಮನೇಲಿ ಆದ್ರೂ ಈಡೇರಬಹುದೆಂಬ ನಂಬಿಕೆಯಿಂದ ಬಲಗಾಲಿಟ್ಟು ಈ ಮನೆಗೆ ಬಂದೆ, ಗಂಡನೋ ತನ್ನ ವ್ಯಾಪಾರದಲ್ಲಿ ಮಗ್ನ. ಅತ್ತೆ , ಅವರಿಗೇನೂ ತಿಳಿಯದು! ಮೈದುನ, ಕುಡುಕ! ತನ್ನ ಕುಟುಂಬವನ್ನು ಚೆನ್ನಾಗಿ ನೋಡಿದರೆ ಸಾಕು!
   ನಾದಿನಿ? ತನ್ನ ಫೋನಾಯಿತು, ಸಾಮಾಜಿಕ ಜಾಲ ತಾಣಗಳಾಯ್ತು, ತಾನಾಯ್ತು! ಇನ್ನು ಯಾರಲ್ಲಿ ಕೇಳುವುದು? ಯಾರನ್ನು ಕಾಯುವುದು? ನಿರಾಸೆಯಿಂದ ನನ್ನ ಮಗನ ಜನನವಾದ ಬಳಿಕ ನನ್ನ ಕನಸನ್ನು ಅವನ ಮೂಲಕ ಮರೆತೆ.
ಹೌದು, ಮಾರ್ಚ್ ಹತ್ತು! ಮತ್ತೆ ಬಂತು! ಅದೇನೋ ಪುಳಕ! ಆದರೂ ಆಚರಿಸುವವರಾರು? ಬೇಸರದ ಕಿರಣವೊಂದು ನುಸುಳಿದೆ!
ಈಗೇನೋ ಮುಖಪುಟದ ಮುಖಪರಿಚಯವೇ ಇಲ್ಲದ ಸ್ನೇಹಿತರು ಕಳಿಸುವ ಶುಭಾಶಯಕ್ಕೇ ಖುಷಿಪಟ್ಟು ಸಂತಸಪಡುವುದಾಗಿದೆ!
  
"ಮಧುರ" ಯಾರೋ ಕರೆದಂತಾಯ್ತು. ತಿರುಗಿ ನೋಡಿದರೆ ಯಾರೂ ಇರಲಿಲ್ಲ! ನನ್ನ ಮನವೇ ಕರೆಯಿತೇನೋ..ಯಾರೋ ಮಿಸ್ಡ್ ಕಾಲ್ ಕೊಟ್ಟಿದ್ದರು.!!

"ಮಧುರ ಪಿಸು ಮಾತಿಗೆ..."ಸಿನೆಮಾ ಹಾಡನ್ನು ಹಾಡಿ ನನ್ನ ಮೊಬೈಲ್ ನನ್ನನ್ನು ಮತ್ತೆ  ಕರೆಯಿತು. ಪ್ರೀತಿಯನ್ನೆ ತನ್ನಲ್ಲಿ ತುಂಬಿಕೊಂಡ ಗೆಳತಿ ಪ್ರೀತಿ ಕರೆ ಮಾಡಿದ್ದಳು! 'ಓಹೋ, ನನಗೆ ಶುಭಾಶಯ ಕೋರುವಳೇನೋ, ಇವಳಾದರೂ ನೆನಪಿಟ್ಟು ಕರೆ ಮಾಡಿದಳಲ್ಲಾ" ಎಂಬ ಖುಷಿಯಿಂದ ಫೋನೆತ್ತಿ ಹಲೋ ಅಂದರೆ ಅತ್ತ ಕಡೆಯಿಂದ ಭಾರೀ ಟೆನ್ಶನ್ ನಲ್ಲಿದ್ದ ಪ್ರೀತಿ ಸಂಜೆ ಮನೆಗೊಮ್ಮೆ ಬಾ, ಅರ್ಜೆಂಟ್ ಫಾರ್ಮ್ ಒಂದಕ್ಕೆ ನಿನ್ನ ಸಹಿ ಬೇಕಿದೆ, ಇಂದೇ ಕೊನೆ ದಿನಾಂಕ, ತಪ್ಪಿಸಬೇಡ' ಎಂದು ಫೋನಿಟ್ಟಾಗ ನಗಬೇಕೋ, ಅಳಬೇಕೋ ತಿಳಿಯಲಿಲ್ಲ ನನಗೆ.
  
    ಬೇಸರದಿ ಪ್ರೀತಿಯ ಮನೆ ಕಡೆ ಸಂಜೆ ಕಾಲಿಟ್ಟೆ. ಮನೆಯೇನೋ ತೆರೆದಿತ್ತು. ಕತ್ತಲಾದರೂ ದೀಪ ಉರಿಸಿಲ್ಲ ಯಾಕೋ ಅಂದುಕೊಂಡೆ. ನಿಧಾನವಾಗಿ ಒಳಗಡಿಯಿಟ್ಟೆ. ಗೆಳತಿಯೊಂದಿಗೆ ಸಲುಗೆಯಿತ್ತು! ಒಳಗೆ ನಾನು ಹೆಜ್ಜೆ ಇಟ್ಟಿದ್ದೇ ಸಾವಿರ ವೋಲ್ಟ್ ಗಳ ಬಲ್ಬ್ ಒಮ್ಮೆಲೆ ಉರಿದಷ್ಟು ಬೆಳಕು ಬಂತು. ಆ ಕತ್ತಲೆಯಲ್ಲೆ ಎಲ್ಲರೂ ಕುಳಿತು ನನ್ನಾಗಮನಕ್ಕಾಗಿ ಕಾದಂತಿತ್ತು! ನನಗೆ ಅತ್ಯಾಶ್ಚರ್ಯ! ಪ್ರೀತಿ ಬಂದು ನನ್ನ ಕೈ ಹಿಡಿದು "ನಿನಗೆ ಸರ್ಪ್ರೈಸಾಗಿ ನಿನ್ನ ಬರ್ತ್ಡೇ ಪಾರ್ಟಿ ನಾವು ಅರೇಂಜ್ ಮಾಡಿದ್ದೇವೆ. ಕೇಕ್ ರೆಡಿಯಾಗಿ ಟೇಬಲ್ ಮೇಲೆ ಕುಳಿತು ನಿನಗಾಗಿ ಕಾಯ್ತಿದೆ ಲೇಟಾಯ್ತು, ಎಲ್ರೂ ಕಾಯ್ತಿದ್ದಾರೆ ಬಾ" ಎಂದು ನನ್ನ ಕೈ ಹಿಡಿದು ಕರೆದೊಯ್ದು ನನ್ನ ಕೈಲಿ ಕೇಕ್ ಕತ್ತರಿಸಿ, ಫೋಟೋ ತೆಗೆದು ಸಂಭ್ರಮದಿಂದ ಆಚರಿಸಿದಾಗ ಕನಸು ನನಸಾದ ಖುಷಿಯ ಜೊತೆ ಗೆಳತಿಯ ಸರ್ಪ್ರೈಸ್ ಗಿಫ್ಟ್ ಬಂದಾಗ ಸಂತಸ ಇಮ್ಮಡಿಸಿ, 'ದೇವರು ದೊಡ್ಡವನು' ಅನ್ನಿಸಿತು.!
@ಪ್ರೇಮ್@
07.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ