ಸೋಮವಾರ, ಮಾರ್ಚ್ 25, 2019

878. ಗಝಲ್-73

ಗಝಲ್-73

ಮೊದಲ ಮಳೆಯ ದಪ್ಪ ಹನಿಗಳೊಳಗೆ ನೆನಪಾಗುವೆ ನೀನು...
ರಪ್ಪೆಂದು ಮೇಲಿಂದ ಎರೆದಾಗ ನೀ ಬಳಿ ಬಂದಂತೆ ಖುಷಿಪಡುವೆ ನಾನು!!

ಸುರ್ರನೆ ಸುರಿಯುವ ಶಬ್ದಕೆ ನೆಗೆದು ಕುಣಿಯುವ ಮನಸ್ಸು!
ಬರ್ರನೆ ಬಿದ್ದು, ಹಿತವಾದ ಪರಿಮಳಕೆ ಉದಾಹರಣೆಯಾಗುವೆ ನೀನು!

ಬುವಿಗೆ ಮಾತ್ರವಲ್ಲ, ಹೃದಯಕ್ಕೂ ತಂಪಾಯಿತು..
ಗಿಡ ಮರಗಳೂ ಕುಣಿದಂತೆ! ನೀನೇ ಆಗಮಿಸಿದಂತೆ ಮೈಮರೆಯುವೆ ನಾನು!!

ಹನಿಯ ತಂಪಿನ ಸ್ಪರ್ಶ ತಂದಿತೆನಗೆ ಹರ್ಷ!
ಎದೆಗೆ ತಾಕಿದಂತೆ ಆದ ಅನುಭವವೆ ನೀನು!!

ಛಿಲ್ಲೆನುವ ತಂಪು ತಂಪಿನ ಮಧುರತೆಯ ಗಾನ!
ಮುತ್ತಿನ ಮತ್ತಿನಲಿ ಬೆರೆತು ಒಂದಾಗುವೆ ನೀನು!!

ಧರೆಗೆ ಬಿದ್ದ ಸುವರ್ಣಗಳು ಚಿಮ್ಮಿದ ಪುಳಕ...
ಚಳಕದಿ ನೀ ನನ್ನೆದುರು ನಿಂತಂತೆ ಭ್ರಮಿಸುವೆ ನಾನು!

ಪ್ರೀತಿಯಿಂದ ಕಾದ ಬುವಿಗೆ ಮಳೆಹನಿ ಉದುರಿತು!
ಪ್ರೇಮ ತುಂಬಿದ ಹೃದಯಕ್ಕೆ ನೆನಪ ಕಚಗುಳಿಯಿಡುವೆ ನೀನು!!

@ಪ್ರೇಮ್@
24.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ