ಭಾನುವಾರ, ಮಾರ್ಚ್ 10, 2019

841. ವಿಮರ್ಶೆ-ಚಿಮಣಿ ದೀಪದ ಸ್ವಗತ-ಜೆಸ್ಸಿ ಪಿ ವಿ

ಚಿಮಿಣಿ ದೀಪದ ಸ್ವಗತ

ಚಿಮಿಣಿ ದೀಪದ ಸ್ವಗತ -ಈ ಪುಸ್ತಕ ನಮ್ಮ ಮನಸ ತಟ್ಟುವ, ಸುಲಲಿತ, ಸರಾಗವಾಗಿ ನಮ್ಮನ್ನು ಓದಿಸಿಕೊಂಡು ಹೋಗುವ ಸರಳ, ಸುಂದರ, ಅನುಭವ ಕಥನ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆಯ ಮಾತುಗಳಿಲ್ಲ. ಜಾತಿ ಬೇಧಗಳ ಕೋಟೆಯಿಲ್ಲ, ಪಕ್ಷಪಾತವಿಲ್ಲ, ಮೇಲು ಕೀಳಿಲ್ಲದ ಒಂದು ಸುಂದರ ಪಯಣ.
   ಶಿಕ್ಷಕಿ ಲೇಖಕಿ ಜೆಸ್ಸಿ ಮೇಡಂರವರು  ತನ್ನ ಹಿಂದಿನ ಬದುಕಿಗೂ, ಇಂದಿನ ಬದುಕಿಗೂ ವ್ಯತ್ಯಾಸವರಿತು ಒಂದನ್ನೊಂದು ಹೋಲಿಸಿ ಬರೆದ ಲೇಖನಗಳ ನೈಜ ಅನುಭವದ ಸರಮಾಲೆ.

  ಸುಳ್ಯದಿಂದ ಬೇಲೂರಿಗೆ ಒಬ್ಬಳೇ ಹೊರಟಿದ್ದೆ. ಬಸ್ಸಿನಲ್ಲಿ ಜತೆಗಾರನಾದದ್ದು ಚಿಮಣಿ ದೀಪ. ಅದೆಷ್ಟು ಪ್ರಿಯವಾಯ್ತೆಂದರೆ ಸಕಲೇಶಪುರ ತಲುಪುವಾಗಲೇ ಓದಿ ಮುಗಿಸಿ ನನ್ನ ಬಾಲ್ಯಕ್ಕೆ ಜಾರಿದ ನಾನು ಪುಟ್ಟ ಹುಡುಗಿಯಾಗಿಬಿಟ್ಟಿದ್ದೆ. ನನಗನಿಸಿದ್ದು ಜೆಸ್ಸಿ ಮೇಡಂರವರ ಬಾಲ್ಯದ ಕನಸುಗಳು, ಜೀವನ, ಅನುಭವಗಳು ಎಷ್ಟು ಹಚ್ಚ ಹಸಿರಾಗಿ ಉಳಿದಿವೆ! ಬಹುಶಃ ಆ ಕಾಲದ ಹಳ್ಳಿಯಲ್ಲಿ ಬೆಳೆದು ಬಾಲ್ಯ ಕಳೆದ ನಮ್ಮೆಲ್ಲರಲ್ಲೂ ಆ ಅನುಭವಗಳಿವೆ. ಅವರು ಚರ್ಚಿಗೆ ಹೋದರೆ, ನಾವೆಲ್ಲ ದೇವಸ್ಥಾನಗಳಿಗೆ ಹೋಗುತ್ತಿದ್ದೆವು, ಅಷ್ಟೆ ವ್ಯತ್ಯಾಸ ಬಿಟ್ಟರೆ, ಉಳಿದ ಯಾವುದೇ ಅನುಭವಗಳಲ್ಲಿ ಭಿನ್ನತೆಯಿಲ್ಲ!
  ವಾವ್..ಸರಳ ಸುಂದರ ನಿರೂಪಣಾ ಶೈಲಿ ಮನೆಯಲ್ಲಿ ಮಾಡುವ ಶರಬತ್ ನ್ನು ನೆನಪಿಸಿತು. ಖಾಲಿ ಲಿಂಬೆ,ನೀರು , ಚೂರು ಉಪ್ಪು,ಸಕ್ಕರೆ ಹಾಕಿದ ಯಾವುದೇ ರಾಸಾಯನಿಕಗಳಿಲ್ಲದ ಶರಬತ್ ಅದೆಷ್ಟು ರುಚಿ! ಅದೆಷ್ಟು ಪ್ರಿಯ, ಆರೋಗ್ಯಕ್ಕೂ ಉತ್ತಮ. ಎಲ್ಲಾ ಪ್ರಾಯದವರಿಗೂ ಸರಿ. ಅಂತೆಯೇ ಈ ಲೇಖನಮಾಲೆ,!
ಈ ಪುಸ್ತಕ ಓದಿದ ಮೇಲೆ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಳಿಯ ಕಾರ್ಕಳ ತಾಲೂಕಿನ ಮೂಲೆಯ, ಬೆಟ್ಟದ ಬದಿಯ ಸಣ್ಣ ಹಳ್ಳಿ ಈದು, ನಕ್ಸಲರು ಏನೇ ಕೆಟ್ಟದು ಮಾಡಿದರೂ ಊರಿನ ಹೆಸರು ಅವರಿಂದಾಗಿ ಪ್ರಸಿದ್ಧ! ಹಾಗೆಯೇ ಕಂಬಳದಲ್ಲೂ ಈದು, ಮಕ್ಕಿಲ ಕೇಳದವರಿಲ್ಲ! ಸಂಸ್ಕೃತಿಯ ಬೀಡಾದ ಈ ಹಳ್ಳಿಯಲ್ಲಿ ಕಳೆದ ನನ್ನ ಬಾಲ್ಯದ ದಿನಗಳ ಬಗ್ಗೆಯೂ ಬರೆಯುವ ಮನಸಾಗಿದೆ. ನನ್ನ ಪುಸ್ತಕಕ್ಕೆ ಜೆಸ್ಸಿ ಮೇಡಂ ಅವರೇ ಮುನ್ನುಡಿಯ ಹರಿಕಾರರಾಗಲಿದ್ದಾರೆ. ನಿಮ್ಮಿಂದ, ನಿಮ್ಮ ಬರಹಗಳಿಂದ ಪ್ರಭಾವಿತಗೊಂಡ ಪರಿಯಿದು! ಚಿಮಿಣಿ ದೀಪದ ನಿಮ್ಮ ಕೃತಿಗಿದೋ ಸಲಾಂ. ಉತ್ತಮ ಬರಹಗಾರರ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲಾ ಅರ್ಹತೆಗಳು ನಿಮ್ಮಲ್ಲಿವೆ. ಪುಸ್ತಕದ ಸಂಖ್ಯೆ ಐದರಿಂದ ಐನೂರಾಗಲೆಂಬ ಹಾರೈಕೆಗಳೊಂದಿಗೆ
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ