ಸೋಮವಾರ, ಮಾರ್ಚ್ 25, 2019

880. ಗಝಲ್-74

ಗಝಲ್-74

ತಾಳ್ಮೆಗೆ ಪ್ರತೀಕವಾದ ಇಳೆ ನಾನು ಬಾಯಾರಿಹೆನು ಬಾರೋ  ವರುಣ...
ಬೇಸಿಗೆಯ ಸುಡು ಬಿಸಿಲ ಕಡು ಬೇಗೆ ತಾಳಲಾರೆನು ಬಾರೋ ವರುಣ..

ರೊಟ್ಟಿಯಂದದಿ ಒಣಗಿಹುದು ಹೊಲದ ಮಣ್ಣು ನೀ ಬಾರದೆ,
ಪಟಪಟನೆ ಸುರಿದು ಧರೆಯೊಡಲನು ಉರಿಯಿಂದುಳಿಸು, ಸೈರಿಸಲಾರೆನು, ಬಾರೋ  ವರುಣ..

ತಂಪೆರೆಸೆನ್ನ ಒಡಲ ದಾಹವನು ತಕ್ಷಣವೇ ಸುರಿಸುರಿದು,
ಬರುವೆಯೆಂದು ಬೆರಗುಗಣ್ಣಿಂದ ಕಾಯುತಲಿಹೆನು, ಬಾರೋ ವರುಣ!

ಬಿದಿರಿನಂದದಿ ಒಣಗಿಹವು ಗಿಡ ಮರಗಳೆನ್ನ ತಾಪ ತಡೆಯಲಾರದೆ!
ಎದೆಯುರಿಯ ಸಹಿಸಲಾರೆನು, ಬಾರೋ ವರುಣ!

ರಾವಣ ಸೀತೆಯನೆಳೆಯಲು ಬಂದಂತೆ ರವಿ ಬಂದಿಹನು ಕೋಪದಲಿ!
ಸಾವಿತ್ರಿ ಯಮನ ಬೇಡಿದಂತೆ ಬೇಡುತಿಹೆನು, ಬಾರೋ ವರುಣ!!

ನಳಪಾಕವ ತಯಾರಿಸೆ ಅಡಿಗೆ ಮನೆಯಲಿ ತರಕಾರಿ ಬೆಂದಂತಾಗಿಹೆನು!
ಬತ್ತಿಹೋದ ಪನ್ನೀರ ಮತ್ತೆ ತರಿಸಲು ಅಂಗಲಾಚುತಿಹೆನು, ಬಾರೋ ವರುಣ..

ಪ್ರೀತಿಯಲಿ ಕಾಯಬೇಕಾಗಿದೆ ಕೋಟಿ ಕೋಟಿಜೀವಿಗಳ..
ಪ್ರೇಮದಿ ಕರುಣೆಯ ತೋರಲು ಕರೆಯುತಿಹೆನು! ಬಾರೋ ವರುಣ !!
@ಪ್ರೇಮ್@
25.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ