ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-18
ನವರಾತ್ರಿ ವೈಭವ ಮುಗಿದದ್ದಾಯ್ತು. ಹಬ್ಬ ಮುಗಿದ ಬಳಿಕ ಮನೆಯಲ್ಲಿ ತೊಳೆಯುವ ಕೆಲಸವಾದರೆ ದೇವಾಲಯಗಳಲ್ಲಿ ಗುಡಿಸುವ ಕೆಲಸ. ನಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತೇವೆ. ಅವರು ಸುಮ್ಮನೆ ಕುಳಿತುಕೊಳ್ಳಲಾರರು. ಐಸ್ ಕ್ರೀಮ್, ಕೋಲ್ಡ್ ಡ್ರಿಂಕ್ಸ್, ಬಿಸ್ಕೆಟ್ಸ್, ಚಾಕ್ ಲೇಟ್ಸ್ ಬೇಕು ಅವರಿಗೆ ಆಗಾಗ. ಹಟಕ್ಕೆ ಬಿದ್ದೋ ತಡೆಯಲಾಗದೆಯೋ, ಇರಲಿ ಮಕ್ಕಳಲ್ವಾ ಎಂದೋ, ಪ್ರೀತಿಯಿಂದಲೋ ಕೊಡಿಸಿ ಬಿಡುತ್ತೇವೆ, ಅವರು ತಿಂದು ಉಳಿದ ಸಿಪ್ಪೆ, ಕವರು, ಐಸ್ ಕ್ರೀಮ್ ಕಪ್ ಗಳನ್ನು ಬಿಸಾಕದೆ ಬ್ಯಾಗ್ನಲ್ಲಿ ಹಾಕಿ ಮನೆಗೆ ತೆಗೆದುಕೊಂಡು ಹೋಗಲಾದೀತೇ.. ಎರಡೆರಡು ಕೈಲೊಂದು, ಮಡಿಲಲ್ಲೊಂದು ಮಗುವನ್ನಿಟ್ಟುಕೊಂಡು ದೇವಸ್ಥಾನಕ್ಕೆ ಬರುವುದೇ ಹೆಚ್ಚು! ಇನ್ನು ಡಸ್ಟ್ ಬಿನ್ ಎಲ್ಲಿದೆ ಎಂದು ಆ ಮಕ್ಕಳನ್ನೆಳೆದುಕೊಂಡು ಹುಡುಕಿ ಹಾಕಲು ಸಾಧ್ಯವೇ..?
"ಮೂರು ವರುಷದಲ್ಲಿ ಕಲಿತದ್ದು ನೂರು ವರುಷದವರೆಗೆ" ಎನ್ನುವ ಗಾದೆಯಿದೆ. ಹಲವಾರು ಅಮ್ಮಂದಿರನ್ನು, ಶಿಕ್ಷಕರನ್ನು, ಡಿಗ್ರಿ, ಡಬಲ್ ಡಿಗ್ರಿ ಆದ ತಾಯಂದಿರನ್ನು ಗಮನಿಸಿದ್ದೇನೆ, ತಿಂಡಿ, ಚಾಕ್ಲೇಟ್, ಬಿಸ್ಕೆಟ್ ತೆಗೆದು ಕೊಡುತ್ತಾರೆ ತಮ್ಮ ಮಕ್ಕಳಿಗೆ.. ಅನಂತರದ ಜವಾಬ್ದಾರಿಯನ್ನು ಮರೆತು ಬಿಡುತ್ತಾರೆ! ಇನ್ನು ಕೆಲವು ತಾಯಂದಿರು ತಾವೇ ಚಾಕಲೇಟಿನ ಪೇಪರ್ ಬಿಚ್ಚಿ ಸುಂದರ ಪರಿಸರವನ್ನು ಕಸದ ಡಬ್ಬಿಯಂತೆ ಉಪಯೋಗಿಸಿ ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ಕಸವನ್ನು ಬಿಸಾಡಿ ಬಿಡುತ್ತಾರೆ! ನೂಲಿನಂತೆ ಸೀರೆ..ಮಕ್ಕಳು ದೊಡ್ಡವರನ್ನು ನೋಡಿಯೇ ಕಲಿಯುತ್ತಾರೆ! ಕಸವನ್ನು ಕಸದ ಬುಟ್ಟಿಗೇ ಹಾಕಬೇಕು ಕಂಡ ಕಂಡಲ್ಲಿ ಬಿಸಾಕಬಾರದು ಎಂದು ಎರಡನೇ ವರ್ಷದಿಂದಲೇ ಎಲ್ಲಾ ತಾಯಂದಿರೂ ತಮ್ಮ ತಮ್ಮ ಮಕ್ಕಳಿಗೆ ಹೇಳಿಕೊಟ್ಟು ತಾವೂ ಅದನ್ನು ಪಾಲಿಸಿದರೆ ಸಾಕು, ಭಾರತ ಸ್ವಚ್ಛ ಭಾರತವಾಗಿ ಬದಲಾಗುತ್ತದೆ! ಅದಕ್ಕೆ ಅಭಿಯಾನ ಬೇಕಿಲ್ಲ! ಇಂದಿನ ತಾಯಂದಿರಿಗೆ ಪುರುಸೊತ್ತಿಲ್ಲ ಅದನ್ನೆಲ್ಲ ತಮ್ಮ ಮಕ್ಕಳಿಗೆ ಕಲಿಸಲು! ಏಕೆಂದರೆ ಎಷ್ಟೋ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುವುದು ಅಜ್ಜಿ-ಅಜ್ಜನ ಜೊತೆಗೆ! ಅವರ ಮುದ್ದು ಹೆಚ್ಚಾಗಿ ಬುದ್ಧಿ ಮಾತೆಲ್ಲ ಮೂಲೆ ಸೇರಿರುತ್ತವೆ! ಇನ್ನು ಕೆಲವು ಮಕ್ಕಳು ನೆಂಟರಿಷ್ಟರ ಜೊತೆಗೆ... ಅವರು ಟೆಕ್ನಾಲಜಿ ಯುಗ ನೋಡಿ! ತಮ್ಮ ಮೊಬೈಲುಗಳಲ್ಲಿ ಬ್ಯುಸಿ.. ಮಕ್ಕಳನ್ನು ಗಮನಿಸುವುದು ಹೇಗೆ! ತಾನು, ತನ್ನ ಮನೆ ಬದಲಾಗದೆ ವಠಾರ, ಊರು ಬದಲಾಗದು, ಊರು ಬದಲಾಗದೆ ರಾಜ್ಯ, ದೇಶ ಬದಲಾಗದು. ಬದಲಾವಣೆ ತನ್ನಿಂದ, ನನ್ನಿಂದಲೇ ಪ್ರಾರಂಭವಾಗಬೇಕು, ಸ್ವಚ್ಛತೆ ಕೂಡಾ.. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ