ಮಂಗಳವಾರ, ಅಕ್ಟೋಬರ್ 30, 2018

553.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-19

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-19

ನಾನೊಬ್ಬನೇ..ನನಗಾರೂ ಇಲ್ಲ, ನನ್ನ ಕಷ್ಟಗಳನ್ನು ಹಂಚಿಕೊಂಡು ನಿರಾಳವಾಗಿದ್ದು, ಅವಳೇ ನನ್ನ ಜೀವ ಎಂದುಕೊಂಡು ನನ್ನಿಡೀ ಬಾಳನ್ನು ಅವಳೊಂದಿಗೇ ಹಂಚಿಕೊಳ್ಳಬೇಕೆಂದು ಸಂತಸದಿ ಬದುಕಿದ್ದ ನನ್ನ ಬಾಳಲ್ಲಿ ವಿಧಿ ಬಿರುಗಾಳಿ ಎಬ್ಬಿಸಿ ಬಿಟ್ಟಿತಲ್ಲ.. ನನಗೆ ಬದುಕೇ ಬೇಡವೆನಿಸಿದೆ, ಪೂರ್ತಿ ಒಂಟಿ, ನಾನು ಸಾಯಬೇಕು.ಇಲ್ಲವೇ ಕುಡಿದು ಕುಡಿದು ಅವಳ ಮರೆಯಬೇಕು, ಹುಡುಗಿಯರೆಲ್ಲ ಕೆಟ್ಟವರು, ಯಾರನ್ನೂ ನಂಬಲೇ ಬಾರದು. ಇಡೀ ಕುಲವನ್ನೆ ಸಾಯಿಸಿ ಬಿಡಬೇಕು. ನಮ್ಮ ಜೀವನವನ್ನು ಆಟವಾಡುವ ಮೈದಾನ ಎಣಿಸಿಕೊಂಡಿದ್ದಾರಾ ಇವರು..? ಎಂದೆಲ್ಲ ಯೋಚನೆಗಳಾದಾಗ ಒಂದೇ ದೃಢ ನಿರ್ಧಾರ ತೆಗೆದುಕೊಳ್ಳುವ ಬದಲು ಯೋಚಿಸಿ, ಅವರ ಸ್ಥಾನದಲ್ಲೂ ತಾನೊಮ್ಮೆ ನಿಂತು ನೋಡಿದಾಗ ಸತ್ಯ ತಿಳಿಯುತ್ತದೆ.
  ಪ್ರತ್ಯಕ್ಷ ನೋಡಿದರೂ ಪರಾಂಬರಿಸಿ ನೋಡು ಎಂಬ ಒಂದು ಗಾದೆಯೇ  ಹೇಳುತ್ತದೆ... ಮತ್ತೊಮ್ಮೆ ನೋಡಲು! ಹೇಳಿದ್ದು, ನೋಡಿದ್ದು ಎರಡೂ ಸುಳ್ಳಾಗಬಹುದು. ಆದರೆ ನಮ್ಮ ಬುದ್ಧಿ ನಮ್ಮ ಕೈಯಲ್ಲೇ ಇರಬೇಕು. ನಮ್ಮ ಜೀವನ ನಮ್ಮದು ಅದನ್ನು ಬೇರೊಬ್ಬನ ಅಥವಾ ಬೇರೊಬ್ಬಳ ಕೈಗೆ ಆಳಲು ಕೊಡಬಾರದು. ನಾವೇ ರೂಪಿಸಿಕೊಂಡು ನಾವೇ ಆಳಬೇಕು ಅದನ್ನು. ಒಬ್ಬರಲ್ಲದಿದ್ದರೆ ಪ್ರಪಂಚದಲ್ಲಿ ಮತ್ತೊಬ್ಬರು ಸಂಗಾತಿಯಾಗಿ ಸಿಗುತ್ತಾರೆ. ಪ್ರಪಂಚದಲ್ಲಿ ಯಾವೊಂದು ವಸ್ತುವೂ, ಯಾವ ವ್ಯಕ್ತಿಯೂ ಶಾಶ್ವತವಲ್ಲ. ಬದುಕನ್ನು ಅದು ಬಂದಂತೆ ಸ್ವೀಕರಿಸಬೇಕು. ಬದಲಾಗಿ ಬದುಕಿಗೆ ಹೆದರಿ ಸಾಯುವುದಲ್ಲ.
   ಕಷ್ಟ ಸುಖಗಳನ್ನೆದುರಿಸಿ, ಮೆಟ್ಟಿ ನಿಂತು ಸಾವಿಗಂಜದೆ ಬದುಕಿ ತೋರಿಸಿದವನೇ ನಿಜವಾದ ಮನುಜ. ಸಾಯುವವನು ಹೇಡಿ. ಮನೆ, ಧನ ಎಲ್ಲ ಸುಟ್ಟು ಹೋದರೂ  ಧೈರ್ಯವಂತನು ಮತ್ತೆ ಕಟ್ಟಿ ಬದುಕುವುದಿಲ್ಲವೇ... ಮಳೆ ಬರದೆ ಬೆಳೆ ಸುಟ್ಟು ಹೋಗಿ ಸಾಲದ ಹೊರೆ ಹೊತ್ತ ರೈತರು ಅನೇಕರಿರುವರು. ಸಾಲಮನ್ನಾದಂತಹ ಅವಕಾಶಗಳು ಅವರಿಗೆ ಸಿಗುತ್ತವೆ. ಅದರ ಬದಲು ಸತ್ತರೆ, ಅವರ ಕುಟುಂಬಕ್ಕೆ ಯಾರು ಗತಿ?
   ತಾನೊಬ್ಬನೆ ಅಲ್ಲ, ಪ್ರಪಂಚದಲ್ಲಿ ಹಲವಾರು ಜನರಿಹರು. ಪ್ರೀತಿಯಲಿ ಸೋತವರೆಲ್ಲ ಸಾಯಲಾರರು, ಬದಲಾಗಿ ಹೊಸ ಜೀವನ ಕಟ್ಟಿಕೊಳ್ಳುವರು. ಜೀವನವನ್ನು ನರಕ ಮಾಡಿಕೊಳ್ಳುವುದು ನಾವೇ.. ನಮ್ಮನ್ನು ಎತ್ತರಕ್ಕೇರಿಸಿ ಕೊಳ್ಳುವುದೂ ನಾವೇ.. ನಮ್ಮ ಜೀವನ ಒಳ್ಳೆಯದು, ನಾಳೆ ನಮ್ಮನ್ನು ಜನ ಒಳ್ಳೆಯವರೆಂದು ನೆನಪಿಸ ಬೇಕು, ನಮ್ಮ ಕುಟುಂಬಕ್ಕೆ , ಸಮಾಜಕ್ಕೆ ನಾವೇ ಕಂಠಕರಾಗಬಾರದು, ನನ್ನ ಹೆಂಡತಿ, ಮಕ್ಕಳಿಗೆ, ತಂದೆ ತಾಯಿಯರಿಗೆ ನನ್ನ ಹೆಸರು ಹೇಳಲು ಹೇಸಿಗೆಯಾಗಬಾರದು, ಬದಲಾಗಿ ಹೆಮ್ಮೆಯೆನಿಸಬೇಕು  ಎಂಬ ಆಲೋಚನೆಗಳು ಮನದಲ್ಲಿದ್ದವರು ಮಾತ್ರ ಬದುಕಿನ ಗುರಿ ತಲುಪಿ ದಡ ಸೇರಲು ಸಾಧ್ಯ! ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ