ಬದುಕು ಹೀಗೆ
ಬದುಕದು ಸಾಗಿದೆ ಟಿವಿಯ ಜೊತೆಗೆ
ಕಂಡು ಹಿಡಿದವ ಸಂಶೋಧನೆಯಲಿ ಕುಳಿತ
ಕೆಲಸವಿಲ್ಲದವ ನೋಡುತ ಕುಳಿತ
ಚಾನಲ್ ಮಾಲೀಕ ದುಡ್ಡಲಿ ಕುಳಿತ...
ಮಗುವಿಗೆ ಚಿಂಟು ಅಪ್ಪಗೆ ಕ್ರಿಕೆಟು
ಚಾಮುಂಡಿಯಂಥ ಅಮ್ಮನ ಕೈಲಿದೆ ರಿಮೋಟು
ನೋಡಲು ಬೇಕು ಬಗೆಬಗೆ ಧಾರಾವಾಹಿ...
ನೋಡದೆ ಇದ್ದರೆ ಬದುಕೆನಿಸುವುದು ಕಹಿ...
ಕುಳಿತರೆ ಆರಕೆ ಮುಗಿವುದು ಹನ್ನೊಂದಕೆ
ಆಕಡೆ ಈಕಡೆ ಮನೆ ವಿಚಾರ ಯಾತಕೆ
ಸತ್ತವ ಸಾಯಲಿ ಬಿದ್ದವ ಬೀಳಲಿ
ಪುಟ್ ಗೌರಿಗೆ ಮಗುವಾಗಲಿ..
ವಿದ್ಯುತ್ ತೆಗೆದವ ಹಾಳಾಗಿ ಹೋಗಲಿ
ಪಕ್ಕದ ಮನೆ ಉರಿದರೂ ಅಗ್ನಿ ಸಾಕ್ಷಿ ನೋಡುವಂತಾಗಲಿ
ಸುಬ್ಬಕ್ಕನ ಸಂಸಾರ ಒಳ್ಳೆಯದಾಗಲಿ
ಗುಂಡಮ್ಮನ ಗಂಡ ಚೆನ್ನಾಗಿ ನೋಡಲಿ..
ಮಗಳು ಜಾನಕಿಗೆ ಹುಡುಗನು ಸಿಗಲಿ
ಮಂಗ್ಲೂರ್ ಹುಡುಗಿಯ ಹುಬ್ಳಿ ಹುಡುಗ ಬರಲಿ
ಅಜ್ಜಿಯು ನಿನ್ನೆಯ ಅನ್ನವ ತಿನ್ನಲಿ
ಮಗುವಿನ ಕೆಲಸವ ಮಗುವೇ ಮಾಡಲಿ
ಗಂಡನು ಊಟಕೆ ಪಾರ್ಸೆಲ್ ತರಲಿ
ಕೆಲಸವ ಮುಗಿಸಿ ತಡವಾಗಿ ಬರಲಿ
ದೇವಸ್ಥಾನ ಪೂಜೆ ವಾರದ ಕೊನೆಯಲಿ ಇರಲಿ
ನೆಂಟರು ಇಷ್ಟರು ಭಾನುವಾರವೆ ಬಂದ್ಹೋಗಲಿ...
ಪ್ರಪಂಚ ಬೀಳಲಿ, ಬಡವ ಬಾಡಲಿ
ನಮ್ಮನೆ ಟಿವಿ ಹಾಳಾಗದೆ ಇರಲಿ
ಮಾವನ ಮನೆ ಪೂಜೆಗೆ ಸಮಯವು ಎಲ್ಲಿ
ಗೆಳೆಯರ ಬಳಗವೂ ಬಂದರೆ ಮಾತುಕತೆಯೆಲ್ಲಿ?
ಸಾಗಿದೆ ಜೀವನ ಧಾರಾವಾಹಿಯ ಜೊತೆಗೆ
ಬದುಕು ಸಾಗೋದ್ಹೇಗೆ ಟಿವಿಯೇ ಇಲ್ಲದೆ?!!!
@ಪ್ರೇಮ್@
27.02.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ