ಧರ್ಮ
ಇರ್ಷಾದ್ ದೇವರ ಮೇಲೆ ನಂಬಿಕೆ ಇದ್ದವನಾಗಿದ್ದು ಎಲ್ಲೇ ಹೋದರೂ ಪ್ರಪಂಚದ ಶಾಂತಿಗಾಗಿ ಇತರರಲ್ಲಿ ಬೇಡುತ್ತಿದ್ದ. ತಮ್ಮ ಧರ್ಮದವರೇ ಭಯೋತ್ಪಾದನೆಯ ಹೆಸರಿನಲ್ಲಿರುವುದು ಅವನಿಗೆ ಬೇಸರ ತರಿಸಿತ್ತು. ಜನರೇಕೆ ತಮ್ಮನ್ನು ತಾವು ಕೊಂದುಕೊಳ್ಳಲು ಮುಂದಾಗುತ್ತಾರೆ? ಪವಿತ್ರ ಕುರಾನ್ ಶಾಂತಿ, ಸಹೋದರತೆಯ ಸಂದೇಶ ಸಾರುತ್ತದೆ, ಅವರೆಲ್ಲ ಅದನ್ನು ಓದಿಲ್ಲವೇ. ದೇವರಾಗಿ ನಮ್ಮನ್ನು ಮುನ್ನಡೆಸುವ ಅಲ್ಲಾಹ್ ಅವರನ್ನು ಎಂದಾದರೂ ಕ್ಷಮಿಸುವರೇ ಎಂಬಿತ್ಯಾದಿ ಯೋಚನೆಗಳು ಬರುತ್ತಿದ್ದವು ಅವನಿಗೆ. ಸದಾ ಅಲ್ಲಾಹ್ ನಿಗೆ ಪ್ರಾರ್ಥಿಸುವುದೊಂದೆ ಅವನಿಗೆ ತಿಳಿದ ಮಾರ್ಗವಾಗಿತ್ತು.
ಹೀಗಿರಲು ಒಂದು ದಿನ ಅವನಿಗೊಂದು ಸಂದೇಶ ಬಂದಿತು. ಕುಖ್ಯಾತ ಭಯೋತ್ಪಾದಕ ಗುಂಪಿನ ಸಂದೇಶವದು. ಇತರ ಧರ್ಮದ ಒಬ್ಬರನ್ನು ತಮ್ಮ ಧರ್ಮಕ್ಕೆ ಸೇರಿಸಿದರೆ ಇಂತಿಷ್ಟು ಇನಾಮು ಕೊಡುವ ಬಗ್ಗೆ ಬರೆದಿತ್ತು ಅಲ್ಲಿ! ಇರ್ಷಾದ್ ಯೋಚಿಸಲಾರಂಭಿಸಿದ. ನನಗೆ ಹಣವೇನೋ ಸಿಗಬಹುದು. ಆದರೆ...?? ನನ್ನ ಸಣ್ಣ ಮಗುವನ್ನು ಎತ್ತಿಕೊಂಡು ನಾನು ಬಸ್ಸಲ್ಲಿ ನಿಂತಿದ್ದಾಗ ಕುಳಿತಿದ್ದ ಕಾಲೇಜು ಹುಡುಗಿಯೊಬ್ಬಳು ಎದ್ದು ನಿಂತು 'ಕುಳಿತುಕೊಳ್ಳಿ ಅಣ್ಣಾ, ಮಗುವನ್ನು ಸಮಾಧಾನಪಡಿಸಿ" ಎನ್ನುವಾಗ ಧರ್ಮ ಕೇಳಿದಳೇ?
ಅಚಾನಕ್ ಆಗಿ ಕಾಲು ಜಾರಿ ಬಾವಿಗೆ ಬಿದ್ದ ಪಕ್ಕದ ಮನೆಯ ಲಕ್ಷ್ಮಕ್ಕನನ್ನು ಬಾವಿಯಿಂದ ಮೇಲೆತ್ತಲು ಬಾವಿಗಿಳಿದ ಇಸ್ಮಾಲಿಯವರು ಜಾತಿ, ಧರ್ಮ ನೋಡಿದರೇ.. ತನ್ನ ಮಗುವಿಗೆ ರಕ್ತದ ಅವಶ್ಯಕತೆಯಿದೆ ಎಂದು ರಮೇಶಣ್ಣ ಕರೆ ಮಾಡಿದಾಗ ಊರಿನ ನಾಲ್ಕು ಹುಡುಗರು ನಾ ಮುಂದು, ತಾ ಮುಂದೆಂದು ಹೋಗಿ ರಕ್ತದಾನ ಮಾಡಿದರಲ್ಲ, ಅದರಲ್ಲಿ ಜಾನ್, ನವೀನ್, ಕಲಂದರ್, ರಂಗನಾಥ ಎಲ್ಲರೂ ಇರಲಿಲ್ಲವೇ? ಆಗ ಮಾನವತೆ ಮಾತ್ರ ಧರ್ಮವಾಗಿತ್ತು! ಈಗೇಕೆ ಈ ರೀತಿ ಧರ್ಮದ ಜಂಜಾಟ, ಮುಂಚಿನಂತೆಯೇ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಶಾಂತಿಯ ಧರ್ಮವನ್ನು ಪಾಲಿಸಬಾರದೇ ಎಂದುಕೊಂಡು ತನಗೆ ಬಂದ ಸಂದೇಶವನ್ನು ಅಳಿಸಿ ಹಾಕಿ, ಊರಿನ ತನ್ನ ಗೆಳೆಯರೊಂದಿಗೆ ಸಂತಸದಿಂದ ಕ್ರಿಕೆಟ್ ಆಡಲು ಹೊರಟ! ಮಹಾನ್ ಅಲ್ಲಾಹ್ ಮೇಲಿಂದ ಅವನನ್ನು ಸಂತೃಪ್ತಿಯಿಂದ ನೋಡಿ ಹರಸಿಬಿಟ್ಟರೇನೋ ಎಂಬಂತೆ ಸುಂಯ್ ಎಂಬ ತಣ್ಣನೆಯ ತಂಗಾಳಿ ಬೀಸಿತು!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ