ಶುಕ್ರವಾರ, ಮಾರ್ಚ್ 8, 2019

837. ಬೇರೇನು ಹೆಸರುಂಟು ನಿನಗೆ

ಬೇರೇನು ಹೆಸರುಂಟು ನಿನಗೆ

ಸಂಸಾರದ ಕಣ್ಣು ಬೆಂಗಾವಲ ಬೆನ್ನು
ಎರಡು ಕುಟುಂಬಕ್ಕೆ ಸೇತುವೆಯು
ಬೆಳೆದ ಮನೆಗೆ ಹೊನ್ನು
ಹೋದ ಮನೆಯ ಗೃಹಲಕ್ಷ್ಮಿ
ಬೇರೇನು ಹೆಸರುಂಟು ನಿನಗೆ!

ತಾಳ್ಮೆಯ ಸಿರಿ, ಪ್ರೀತಿಯ ಗರಿ
ನೋವ ನುಂಗಿ ನಗೆ ಚೆಲ್ಲುವ ಪರಿ
ಇತರರಿಗಾಗಿ ಕಷ್ಟ ಸಹಿಸುವ ಧರೆ
ಮಕ್ಕಳು ಮರಿ ಬೆಳೆಸುವ ನಾರಿ..
ಮತ್ತೇನು ಹೆಸರುಂಟು ನಿನಗೆ!!!

ಹೃದಯವದು ವಿಶಾಲ, ಸಹನೆಗೆ  ಮೀಸಲು
ಗಹನತೆಯ ಅಂತರಾಳ ತನ್ಮಯತೆಯು ಬಹಳ
ತನ್ನವರ ಬದುಕ ಕಟ್ಟುವ ಮಹಿಳೆ
ಬೇರೇನು ಹೆಸರುಂಟು ನಿನಗೆ!

ಇನಿಯನ ಪ್ರಾಣ, ಸಹೋದರರ ನಯನ
ಅಪ್ಪನ ಮುದ್ದು ಅಮ್ಮನ ಪೆದ್ದು
ಮಧುರ ಸೊಸೆ,  ಕತೆ ವ್ಯಥೆಗಳ ಅಜ್ಜಿ
ಮತ್ತೇನು ಹೆಸರುಂಟು ನಿನಗೆ..

ತಾಯಿ ಭಾರತಿ, ಕಾವ ಭುವನೇಶ್ವರಿ
ಶಕ್ತಿ ದೇವತೆ, ಮಾತೃ ವಾತ್ಸಲ್ಯ ದಾತೆ
ದುಷ್ಟ ಸಂಹಾರಿಣಿ, ಶಿಷ್ಟ ರಕ್ಷಿಣಿ
ಸಲಿಲ ವಾಹಿನಿ , ವೀಣಾಪಾಣಿ
ಇನ್ನೇನು ಹೆಸರುಂಟು ನಿನಗೆ!
@ಪ್ರೇಮ್@
10.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ