ಗಝಲ್-70
ಮಗುವಂತೆ ಮಡಿಲಲಿ ಹಗಲಿರುಳು ದುಡಿದು ಕಾಯುತಿರುವೆ ನಾನು.
ಗಿರಿ ಕಂದರಗಳಲೂ ಗೆಡ್ಡೆ ಗೆಣಸು ಹಿಡಿದು ಕಾಯುತಿರುವೆ ನಾನು.
ನಿನ್ನುಸಿರಿಗೆ ಮರಗಳ ಶುದ್ಧ ಗಾಳಿಯನು ಕೊಡಿಸಿಹೆ..
ನೀ ನನ್ನ ಸ್ವಚ್ಛವಾಗಿಡುವೆಯೆಂದು ಕಾಯುತಿರುವೆ ನಾನು..
ಪಶು -ಪಕ್ಷಿ -ಕೀಟ ಜೀವಿಗಳ ಸಲಹಿ ಪೊರೆಯುತಲಿರುವೆ.
ಬುದ್ಧಿ ಇರುವ ನೀನದರ ಜೀವಕ್ಕೆ ಕೊಳ್ಳಿ ಇಡಲಾರೆಯೆಂದು ಕಾಯುತಿರುವೆ ನಾನು!!
ಪ್ಲಾಸ್ಟಿಕ್, ಫೈಬರ್, ರಾಸಾಯನಿಕಗಳ ನನ್ನ ಹೊಟ್ಟೆಗೆ ಹಾಕದಿರಲು ಕೋರಿಕೆ.
ದೀನಳಾಗಿ ಅವುಗಳು ನನ್ನುದರದಲಿ ಕರಗಬಹುದೆಂದು ಕಾಯುತಿರುವೆ ನಾನು!!
ಕೀಟನಾಶಕ ಕ್ರಿಮಿನಾಶಕಗಳ ಬಳಸಿ ಕೊಲ್ಲುತಿರುವೆ ಜೀವಿಗಳನು.
ನನ್ನ ಸರವಣಿಯು ತುಂಡಾಗದಿರಲೆಂದು ಕಾಯುತಿರುವೆ ನಾನು.
ತಾನೇ ದೇವರೆಂದು ಹೆಜ್ಜೆ ಹೆಜ್ಜೆಗೂ ಮರೆಯುತಿಹೆ ನೀ ಮಾನವ!
ನನ್ನ ಪ್ರೇಮದ ರಕ್ಷೆಯಿರದೆ ನೀ ಬದುಕಬಹುದೇ ಎಂದು ಕಾಯುತಿರುವೆ ನಾನು..
@ಪ್ರೇಮ್@
20.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ