ಬುಧವಾರ, ಆಗಸ್ಟ್ 28, 2019

1199. ಮಮತೆ

ಮಮತೆ

ಮಮತೆಯು ಬೇಕು
ಮಕ್ಕಳ ಮೇಲೆ ಯಾವಾಗಲೂ
ಅವರೆ ನಮ್ಮಯ ಮುಂದಿನ ಕುಡಿಗಳು..

ಆದರೆ ಅತಿಯಾಗಬಾರದು.
ಅಮೃತವೂ ವಿಷವಂತೆ ಅತಿ ಕುಡಿದರೆ,
ತನ್ನನು ತಾನು ಪೊರೆಯಲು ಬಾರದಂತೆ ಮಮತೆಯೇ..

ಕೆಲಸವ ಮಾಡಲಿ,
ತಿಂದ ತಟ್ಟೆಯ ತಾನೇ ತೊಳೆಯಲಿ,
ಬಂಧಿತ ಮನವು ವಿಕಸಿತಗೊಳ್ಳಲಿ ಸದಾ..

ಕಲಿಯಲಿ ನಿತ್ಯವೂ
ಹೊಸತನು ಬಾಳಲಿ ಪ್ರಯೋಗಿಸಲಿ..
ಸುಳ್ಳನು ಹೇಳದೆ ಸತ್ಯದ ದಾರಿಯ ಬೆಳಗಿಸಲಿ..

ಸ್ವತಂತ್ರವಾಗಿ ಆಲೋಚಿಸಲಿ,
ಪ್ರೀತಿಯೆ ಬಂಧನವಾಗದೆ ಇರಲಿ,
ಮಮತೆಯು ಕಲಿಕೆಗೆ ಪ್ರೇರಕವಾಗಲಿ, ಮಾರಕವಾಗದಿರಲಿ.
@ಪ್ರೇಮ್@
29.08.2019

ಸೋಮವಾರ, ಆಗಸ್ಟ್ 26, 2019

1198. ಕವನ-ಮುಳುಗಿರುವೆ ನಾನು

ಮುಳುಗಿರುವೆ ನಾನು

ನಿನ್ನ ಪ್ರೀತಿಯ ಧಾರೆಯಲಿ
ಮುಳುಗಿ ಹೋಗಿರುವೆ ನಾನು!
ನಿನ್ನ ಬಾಹು ಬಂಧನದಲಿ
ಕರಗಿ ಹೋಗಿರುವೆ ನಾನು!

ಪ್ರತಿಕ್ಷಣ ನಿನ್ನ ನೆನಪಲಿ
ಬಾಳಿ ಬದುಕುತಲಿರುವೆ ನಾನು,
ನೆನೆಯುತ ನಗೆಯ ನಿನ್ನ ಮೊಗದಲಿ
ಕಷ್ಟಗಳ ಮರೆತಿರುವೆ ನಾನು!

ಪ್ರೀತಿ ಸಾಗರವು ಉಕ್ಕುತಲಿ
ನನ್ನೆ ಮರೆತಿರುವೆ ನಾನು.
ಪೂಜಿಸುತ ಹೃದಯ ಗುಡಿಯಲಿ
ನಿಜ ಭಕ್ತಳಾಗಿರುವೆ ನಾನು!

ಮನದ ಬಯಕೆಗಳ ಚೆಲ್ಲುತಲಿ
ಸದಾ ಧನ್ಯಳಾಗಿರುವೆ ನಾನು!
ಕಷ್ಟ ಸುಖಗಳ ನಿನ್ನೊಡೆ ಹಂಚುತ
ಬಾಳ ಬಂಡಿ ಎಳೆಯುತಿಹೆ ನಾನು!
@ಪ್ರೇಮ್@
27.08.2019

ಭಾನುವಾರ, ಆಗಸ್ಟ್ 25, 2019

1197. ಗಝಲ್-21

ಗಝಲ್

ಹಚ್ಚ ಹಸಿರಾಗಿ ಕುಣಿವ ಗಿಡಮರಗಳೆನ್ನ ಉಸಿರು!
ಸ್ವಚ್ಛ ಜಲ ಹೊತ್ತು ಓಡುವ ನದಿಗಳೆನ್ನ ಉಸಿರು!

ಪಶುಪಕ್ಷಿ ಜೀವಿಗಳ ಮೌನದ ಭಾಷೆ ಸುಮಧುರ!
ಅವುಗಳ ನಡುವಿನ ಮುಗ್ಧ ಪ್ರೀತಿಯೆನ್ನ ಉಸಿರು!

ಹದವಾಗಿ ಸಂಭ್ರಮಿಸುತಲಿ ಅರಳುವುದು ಹೂವು!
ಅರಳುತಿಹ ಮೊಗ್ಗಿನ ಸಿಹಿ ಸುಗಂಧವೆನ್ನ ಉಸಿರು!

ಹಸುಳೆ ಕಂದನು ಹಾಲು ಕುಡಿವ ಪರಿಯೆಂತು ಸೊಗಸು!
ಹಸು-ಕರುಗಳ ಮಿಲನದ ವೈಭೋಗವೆನ್ನ ಉಸಿರು.

ವಸುಧೆಯಲಿ ತಾಯಿ ಮಗುವಿನ ಅಪ್ಪುಗೆ ಶ್ರೇಷ್ಠ!
ಕಸುವು ಮಾಡುತ ಹಿತದಿ ಬದುಕುವವರೆನ್ನ ಉಸಿರು!

ವಸಂತನಾಗಮನಕೆ  ಹಾಡುವ ಕೋಗಿಲೆಯ ಖುಷಿ
ಕಸದಂತಿದ್ದರು ನಿಸರ್ಗಸ್ನೇಹಿ ಹುಳಗಳೆನ್ನ ಉಸಿರು!

ಪರಹಿತವ ಬಯಸುವ ಮನುಜರು ಬಹಳವಿಹರು,
ಪ್ರೇಮದಿ ಬಾಳಬಂಡಿಯೆಳೆವ ಜೀವಿಗಳೆನ್ನ ಉಸಿರು!
@ಪ್ರೇಮ್@
26.08.2019

ಶನಿವಾರ, ಆಗಸ್ಟ್ 24, 2019

1196. ನಾಯಿಪಾಡು

ಬೀದಿನಾಯಿ ಸಣ್ಣದೊಂದು ಬಿಲವ ಹುಡುಕಿತು
ಗುಂಡಿ ಮಾಡಿ ಮೂರು ಮರಿಯ ಹಾಕಿತು.
ದಿನವೂ ಬಾಯಿಯಲ್ಲಿ ಅನ್ನ ತಂದು ಕೊಟ್ಟಿತು,
ಅಲೆದು ಎಲ್ಲೋ ಸಿಕ್ಕ ಊಟ ತಂದು ಬಡಿಸಿತು..

ಎರಡು ಗಂಡು ಮರಿಯ ಜನರು ಕೊಂಡು ಹೋದರು,
ಹೆಣ್ಣು ಮರಿಯ ಅಲ್ಲೆ ಬಿಟ್ಟು ಸಾಗುತ್ತಿದ್ದರು..
ಹೊರಗೆ ಹೋದ ತಾಯ ಮೇಲೆ ಕಾರು ಹರಿಯಿತು,
ಊಟ, ಹಾಲು ಇಲ್ಲದೇನೆ ಹೊರಗೆ ಹೊರಟಿತು..

ಅಲ್ಲಿ ಇಲ್ಲಿ ಹೋಗಿ ತಾನು ತಾಯ ಹುಡುಕಿತು,
ತಾಯಿ ಕಾಣದಿರಲು ಮನದಿ ನೊಂದಿತು
ಹೊಟ್ಟೆ ಹಸಿವು ತಡೆಯದೆ ನೋವನುಂಡಿತು,
ದಾರಿಯಲ್ಲಿ ಕೂಗುತ ನಡೆಯುತ್ತಿದ್ದಿತು..

ದೂರದಲಿ ಒಂದು ನಾಯ ಕಂಡು ಹಿಗ್ಗಿತು,
ತನ್ನ ತಾಯಿಯೆಂದೆ ಅದರ ಬಳಿಗೆ ಸಾರಿತು!
ಕೋಪಗೊಂಡ ಗಂಡು ನಾಯಿ ಕಚ್ಚಿಬಿಟ್ಟಿತು,
ನೋವನ್ನೆಲ್ಲ ಸಹಿಸದಾಗಿ ಓಟಕಿತ್ತಿತು!

ಅಲ್ಲೆ ಬಂತು ಮೋಟಾರ್ ಬೈಕು ವೇಗದಿಂದಲಿ
ಪುಟ್ಟ ಮರಿಯು ಕೂಗುತಿತ್ತು ನೋವಿನಿಂದಲಿ,
ಆತುರದ ಮನುಜನವನು ವೇಗದಿಂದಲಿ,
ಹರಿಸಿದನು ಗಾಡಿಯನು ಮರಿಯ ಮೇಲೆಯೇ..

ತನ್ನ ಜೀವ ಕಳೆದುಕೊಂಡು ಮರಿಯು ಸತ್ತಿತು,
ಬುವಿಗೆ ಬಂದು ನಾಲ್ಕು ದಿನದ ನರಕ ನೋಡಿತು!
ಜೀವಿಗಳ ಬದುಕ ಪಾಡು ಕಷ್ಟ ಅಲ್ಲವೇ..
ದಯೆ, ಕರುಣೆ, ಸಹಾಯವನ್ನು ಮಾಡಬೇಕಲ್ಲವೇ?
@ಪ್ರೇಮ್@
25.08.2019

1195. ವರ್ಗಾವಣೆ

ವರ್ಗಾವಣೆ

ಒಂದೆಡೆ ಕಾರ್ಯವು, ಮತ್ತೊಂದೆಡೆ ಕುಟುಂಬವು
ಹಗಲು ರಾತ್ರಿ ವರ್ಗಾವಣೆಯ ಕನವರಿಕೆಯು,
ಸರಕಾರದ ನೀತಿಯ ಮೇಲಿದೆ ಕೋಪವು,
ನಮ್ಮವರ ಸೇರುವ ನಿರಂತರ ತವಕವು...

ಬಂತು ವರ್ಗಾವಣೆಯೆನುವ ಕಾರ್ಯವು,
ತಂದಿತು ಸರ್ವರ ಮನದಲಿ ಹರುಷವು,
ಜಿಗಿಯಿತು ಹೋಗಿ ಸೇರುವೆನು ಗೂಡೆನುತ ಮನವು,
ನಾಲ್ಕೆ ಶೇಕಡಕೆ ಮುಗಿಯಿತು ಕೆಲಸವು!

ನೋವಲಿ ಬೆಂದನು ಶಿಕ್ಷಕ ಅನುದಿನವು,
ಸಣ್ಣ ಕೋಣೆಯಲಿ ಬದುಕಿನ ನಿತ್ಯ ಜಂಜಾಟವು,
ಹಗಲೆಲ್ಲಾ ತರಗತಿಯಲಿ ಪಾಠವು..

ರಾತ್ರಿ ನಾಳಿನ ಪಾಠಕೆ ಸಿದ್ಧತೆಯ ಭರವು,
ಸ್ಪರ್ಧೆಯು, ಆಟವು, ಓಟವು, ಊಟವು!
ನೃತ್ಯ, ನಾಟಕ,ಚಿತ್ರಕಲೆ,  ಪಾತ್ರಾಭಿನಯವು !

ಕಳೆದೇ ಹೋಯಿತು ಬಾಳಿನ ಘಳಿಗೆಯು,
ಸೇವಾ ಹಿರಿತನ, ಸೇವಾ ಜೇಷ್ಟತೆ ಪದಗಳ ಬಳಕೆಯು,
ಮತ್ತಷ್ಟು ಮಗದೊಂದಿಷ್ಟು ಕೆಲಸದ ಹೊರೆಯು,
ಪ್ರಶಸ್ತಿಯು ನಮಗೆ ವಿದ್ಯಾರ್ಥಿ ದೊರೆಯು!

ನೂರು ಶೇಕಡಾ ಪಾಸಾಗುವ ಕನಸದು,
ಪ್ರತಿ ವರುಷವು ಇದಕೆ ಶಿಕ್ಷಕರ ಹೋರಾಟವದು,
ಕನಸೇ ಇಲ್ಲದ ವಿದ್ಯಾರ್ಥಿಯ ಮನಸದು,
ಸಾಧನೆ ಬೇಕೆಂದರೆ ತಾನೇ ತಾನೇ ಸಾಧಿಸುವುದು?

ಜೀವನ ಮುಗಿಯಿತು, ಬಂತು ನಿವೃತ್ತಿಯು!
ಮಾಡಿದ್ದು ಕೆಲಸ ಹಳ್ಳಿಯ ಶಾಲೆಯು,
ಇರಲು ನೆಲೆಯಿಲ್ಲ,ಹೋದೆಡೆ ಗುರುತು ಹಿಡಿವವರಿಲ್ಲ!
ತನ್ನೂರಲಿ ತಾನೇ ಅಲೆಮಾರಿಯು!!
@ಪ್ರೇಮ್@
25.08.2019

ಬುಧವಾರ, ಆಗಸ್ಟ್ 21, 2019

1174. ಪರಿಸರ ಗೀತೆ

ಪರಿಸರ ಗೀತೆ

ಕೇಳಿರಿ ಕೇಳಿರಿ ನಾಡಿನ ಜನಗಳೇ
ನಮ್ಮಯ ಕಾರ್ಯದ ವೈಖರಿಯಾ..
ಕಸವನು ತೆಗೆದು ಬೀದಿಗೆ ಹಾಕುವ
ನಮ್ಮಯ ಪರಿಸರ ಕಾಳಜಿಯ..

ಪ್ಲಾಸ್ಟಿಕ್ ಬಳಕೆಯ ಹೆಚ್ಚಾಗಿ ಮಾಡಿ
ಬಿಲ್ಡಿಂಗ್ ಕಟ್ಟುವ ಕಾಳಜಿಯ..
ಸಂತೆ ಮಾರ್ಕೆಟ್, ಅಂಗಡಿ ಎದುರಲೂ
ಪ್ಲಾಸ್ಟಿಕ್ ರಾಕ್ಷಸ ಹಾವಳಿಯಾ...

ನದಿಯ ನೀರಲಿ ವಾಹನ ತೊಳೆಯುತ
ಮಾಡುವೆ ನೀರನು ಕೆಸರಂತೆ..
ಕೊಳೆಯನು ಚೆಲ್ಲುತ ನೀರನು ಕೆಡಿಸುತ
ಆಡುವೆ ಬುದ್ಧಿಯೇ ಇಲ್ಲದಂತೆ..

ಚಾಕ್ಲೇಟ್, ಬಿಸ್ಕೆಟ್, ಲೇಯ್ಸ್, ಗುಟ್ಕಾ
ಎಲ್ಲದರಲಿ ಪ್ಲಾಸ್ಟಿಕ್ ಕವರಂತೆ..
ತಿಂದು ಕೊನೆಯಲಿ ಕವರ ಬಿಸಾಕುತ
ಪರಿಸರ ಸ್ವಚ್ಛತೆ ಮರೆತಂತೆ...

ಮನೆಯ ಕಸವನು ವಿಲೇವಾರಿ ಮಾಡದೆ
ಬೆಂಕಿಗೆ ಹಾಕಿ ಉರಿಸುವೆಯಾ?
ಉರಿಯುತ ವಾಸನೆ ಬರಲಿದೆಯೆಂದರೆ
ದೂರಕೆ ಕಟ್ಟಲಿ ಎಸೆಯುವೆಯಾ..

ಎಳನೀರು ಕುಡಿದು ಇಡಿಯ ಕಾಯಿಯನೆ
ಅಂಗಡಿಯೆದುರು  ಎಸೆಯುವೆಯಾ..
ನೀರದು ನಿಂತು ಸೊಳ್ಳೆಯು ಹೆಚ್ಚಲು
ಡೆಂಗ್ಯೂ ಮಲೇರಿಯದಿ ನರಳುವೆಯಾ..

ಕೋಳಿ ಮೀನಿನ ತ್ಯಾಜ್ಯವ ತಂದು
ನಿರ್ಜನ ಜಾಗಕೆ ತಳ್ಳುವೆಯಾ..
ವಾಸನೆ ಬರುವುದು ಎನ್ನುತ ಸಾಗುತ
ಸ್ವಚ್ಛ ಪರಿಸರವ ಕೆಡಿಸುವೆಯಾ..
@ಪ್ರೇಮ್@
21.08.2019

ಭಾನುವಾರ, ಆಗಸ್ಟ್ 18, 2019

1193. ಸ್ವಾತಂತ್ರ್ಯದ ಬಳಕೆ

ಸ್ವಾತಂತ್ರ್ಯದ ಬಳಕೆ

ನಮಗಿರುವ ಸ್ವಾತಂತ್ರ್ಯವನು
ಬಳಸುವೆವು ಹೇಗೆ ಗೊತ್ತಾ?
ಸಾರ್ವಜನಿಕ ಮೂತ್ರಾಲಯಗಳಲಿ
ಬಾಟಲಿ, ಪ್ಯಾಕೆಟ್ಗಳಲಿ
ಮದುರಸವ ಸೇವಿಸುತ!

ಅದ್ಯಾವ ಪರಿಯ ಜನರಿಹರೋ
ಜಗದೊಳಗೆ ಈ ಮನಸಿನ!
ಹರಿಯೇ! ಸೃಷ್ಟಿಸಿದ ಬ್ರಹ್ಮನನೇ
ಗಲಿಬಿಲಿಗೊಳಿಪರು ಮಾನವರು!
@ಪ್ರೇಮ್@

1192. ಎರಡು ಚುಟುಕುಗಳು

ಚುಟುಕು-1

ಮಳೆ

ಮಳೆ ಬಂದು ನೆರೆ ಬಂದು
ಎಲ್ಲವೂ ತೊಯ್ದೋಯ್ತು!
ಒಣಗದ ಬಟ್ಟೆಯದು
ಕುಂಬಾಗಿ ಹಾಳಾಯ್ತು!!

ಚುಟುಕು-2

ನಾಯಿ

ನಾಯಿ ಪಾಡದು ಬೇಡ
ಊಟವಿಲ್ಲದೆ ನೋಡ!
ಬೀದಿ ಬದಿ ಬಿದ್ದಿಹುದು
ಹಾಡುತ ಕುಂಯ್ ಕುಂಯ್ ಹಾಡ!
@ಪ್ರೇಮ್@
19.08.2019

1190. ಜನಮನಕೆ

ಹಾಯ್! ನಿಮ್ಮನ್ನು ಯಾರಾದ್ರೂ ಗೇಲಿ ಮಾಡುತ್ತಾರೆಯೇ..ಯಾರಾದ್ರೂ ನಿಮಗೆ ಅವ್ಯಾಚ್ಯ ಶಬ್ದಗಳಿಂದ ಬೈತಾರಾ? ನೀನೆನಕ್ಕೂ ಪ್ರಯೋಜನ ಇಲ್ಲಾಂತ ಹಂಗಿಸ್ತಾರಾ..ಹಾಗಾದ್ರೆ ಮುಂದೆ ಓದಿ....
          ನಮ್ಮ ಬಗ್ಗೆ ಹೆಚ್ಚು ತಿಳಿದವರು ನಾವೇ. ಇತರರಿಗೇನು ಗೊತ್ತು ನಾವೇನು ಅಂತ! ಇತರರು ನಮ್ಮ ಕಾಲೆಳೆಯುತ್ತಿದ್ದಾರೆಂದರೆ ಅವರು ನಮ್ಮ ಕಾಲ ಕೆಳಗಿದ್ದಾರೆಂದು ಅರ್ಥ. ಇತರರು ನಿಮ್ಮ ಹಿಂದೆ ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆಂದರೆ, ನೀವು ಅವರಿಗಿಂತ ಮುಂದಿದ್ದೀರೆಂದು ಅರ್ಥವಲ್ಲವೇ!
             ನಿಜ ಜೀವನವೇ ಬೇರೆ, ಬರಹವೇ ಬೇರೆ, ಕೆಲವೊಮ್ಮೆ ಮನದ ನೋವುಗಳು ಬರಹದಲ್ಲಿ ಕಾಣಬಹುದು. ನಮಗಾಗದವರನ್ನು ಬರಹದಲ್ಲಿ ಟೀಕಿಸಬಹುದು. ಹಾಗಂತ ಕೆಟ್ಟದು ಹೇಳಿದರು, ಯಾರೋ ಏನೋ ಅಂದರೆಂದು ನಮ್ಮ ಸಂತೋಷವನ್ನು ಅವರಿಗಾಗಿ ಹಾಳು ಮಾಡಿಕೊಳ್ಳಲಾದೀತೇ. ಯಾರು ಏನೇ ಹೇಳಿದರೂ ನಾನೇನು ಅಂತ ನನಗೆ ಗೊತ್ತು. ನನ್ನ ಒಳ್ಳೆಯ ದಾರಿಯಲ್ಲಿ ನಾನು ನಿತ್ಯ ಸಾಗುವೆ, ಇತರರ ಬಗೆಗೆ ತಲೆ ಕೆಡಿಸಿಕೊಳ್ಳಲಾರೆ, ನನ್ನ  ಜೀವನವನ್ನು ನಾನು ಹೇಗೆ ರೂಪಿಸಿಕೊಳ್ಳಬೇಕೆಂಬುದು ನನಗೆ ತಿಳಿದಿದೆ. ನನಗೆ ಸಂಬಂಧಿಸದ, ನನ್ನ ಏಳಿಗೆಯನ್ನು ಸಹಿಸದ, ನಾನು ಪ್ರೀತಿಸದ , ನನ್ನ ಬಗ್ಗೆ ತಿಳಿಯದ, ಇತರರು ಏನು ಮಾತಾಡಿಕೊಂಡರೆ ನನಗೇನು? ನಾಯಿ ಬೊಗಳುವುದರಿಂದ ನಕ್ಷತ್ರ ಉರುಳುವುದೇ?
        ನಾನು ಏನೆಂಬುದು ನನಗೆ ಮಾತ್ರ ಗೊತ್ತು, ಇತರರಿಗಲ್ಲ, ನನ್ನ ಮೇಲೆ ನನಗೆ ಪ್ರೀತಿಯಿದೆ, ಭರವಸೆಯಿದೆ, ಆಸೆಯಿದೆ! ನನ್ನನ್ನು ನಾನು ಇತರರಿಗಾಗಿ ಅಲ್ಲ, ನನಗಾಗಿ ಬದುಕಿಸಿಕೊಂಡಿದ್ದೇನೆ. ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಬೇಕಾದ ಶಕ್ತಿಯನ್ನು ನಾನು ಕಳೆದುಕೊಳ್ಳಬಾರದು. ಮಾನಸಿಕವಾಗಿ ಎಂದಿಗೂ ಕುಗ್ಗಬಾರದು. ನನ್ನ ದೃಢತೆ, ಶಕ್ತಿ ನಾನೇ ಹೆಚ್ಚಿಸಿಕೊಳ್ಳಬೇಕು. ನನ್ನನ್ನು ಈ ಪ್ರಪಂಚದ ಯಾವ ಶಕ್ತಿಯೂ ಕುಗ್ಗಿಸಲಾರದು. ನನ್ನ ಮನಸ್ಸನ್ನು ನಾನು ಸಂಬಂಧ ಇಲ್ಲದ ಇತರರಿಗಾಗಿ ಕುಗ್ಗಿಸಿಕೊಳ್ಳಲಾರೆ. ಇಂತಹ ದೃಢ ಮನಸ್ಸು ಬೇಕೇ ಹೊರತು, ಯಾರೋ ಅವರ ಮಾನಸಿಕ ಮಟ್ಟಕ್ಕೆ ಮಾತನಾಡಿದರೆಂದು ನಾವು ವಿಚಲಿತವಾಗುವುದೇ? 
        ಅವರವರು ಅವರವರ ಮಾನಸಿಕ ಮಟ್ಟಕ್ಕೆ ಸರಿಯಾಗಿ ಯೋಚಿಸುತ್ತಾರೆ. ಉದಾಹರಣೆಗೆ ದೇವರು ಪ್ರತ್ಯಕ್ಷನಾಗಿ ಎದುರು ಬಂದು ನಿನಗೇನು ಬೇಕೋ ಕೇಳಿದರೆ ಮಗುವೊಂದು ರಾಶಿ ಚಾಕಲೇಟ್ ಕೇಳಬಹುದು. ಒಬ್ಬ ಹಣ, ಐಶ್ವರ್ಯ ಕೇಳಿದರೆ ಮತ್ತೊಬ್ಬ ಪಕ್ಕದವನ ಧನ ಕರಗಲು ಆಶಯ ವ್ಯಕ್ತಪಡಿಸಬಹುದು. ಬುದ್ಧಿವಂತ ಆರೋಗ್ಯ, ಶಾಂತಿ, ನೆಮ್ಮದಿ ಕೇಳಬಹುದು. ಮತ್ತೋರ್ವ ಉತ್ತಮ ಸಮಾಜಕ್ಕಾಗಿ ಪ್ರಾರ್ಥಿಸಬಹುದು. ಹೀಗೆ ಮಾನವರಲ್ಲಿ ಭಿನ್ನಾಭಿಪ್ರಾಯ ಸದಾ ಇರುತ್ತದೆ. ಅದನ್ನು ಸ್ವೀಕರಿಸಿ, ತಿಳಿದು ಮುನ್ನಡೆಯ ಬೇಕು.
   ದಾರಿಯಲ್ಲಿ ನಡೆಯುವಾಗ ಕಲ್ಲು ಮುಳ್ಳುಗಳಿರೋದು ಸಹಜ. ಅವುಗಳನ್ನು ನಿವಾರಿಸಿಕೊಂಡು ಹೋಗಬೇಕೇ ಹೊರತು ನಡೆಯುವುದನ್ನೇ ನಿಲ್ಲಿಸುವುದೇ? 
    ನಮ್ಮ ಮನಸ್ಸಿಗೆ ಅಗಾಧ ಶಕ್ತಿಯಿದೆ. ನಾವು ಆಳವಾಗಿ ಯೋಚಿಸಿ, ದೃಢ ನಿರ್ಧಾರ ತಳೆದರೆ ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನೆನಪಿರಲಿ, ಬೇರೆಯವರು ಏನೋ ಹೇಳಿದರೆ ಅದು ಕುಗ್ಗಬಾರದು, ಹೊಗಳಿದರೆ ಹಿಗ್ಗಲೂ ಬಾರದು, ನಾವು ನಾವೇ. ಅರ್ಜುನನಂತೆ ನಮ್ಮ ಗುರಿ, ಛಲ ನಮ್ಮೊಡನಿದ್ದರೆ ಪ್ರಪಂಚದ ಯಾವ ವಸ್ತುವೂ, ಯಾವ ಜೀವಿಯೂ ನಮ್ಮನ್ನು ಅಲ್ಲಾಡಿಸಲೂ ಸಾಧ್ಯವಿಲ್ಲ.ಅಂತಹ ದೃಢ ನಿರ್ಧಾರ ಬದುಕಲ್ಲಿ ನಿಮ್ಮದಾಗಲಿ. ಏನಂತೀರಾ?
@ಪ್ರೇಮ್@

1189. ಲಘು ಬರಹ

ಲಘು ಬರಹ

ಹರಣದ ಕರುಣೆ

ರಂಗ-ರಂಗಿ ಮಾತಾಡ್ತಾ ಇದ್ರು. ರಂಗಿ ಹೇಳಿದ್ಳು- ಇವತ್ತು ಸ್ವಾತಂತ್ರ್ಯ ದಿನಾಚರಣೆ ಅಂತೆ, ಅದೊಂದ್ ದೋಡ್ ಹಬ್ಬಾನಂತೆ, ಪಾಯ್ಸಾನಾದ್ರೂ ಮಾಡಿ ಹಿರಿಯರ್ಗೆ ಎಡೆ ಇಡ್ಬೋದಾಗಿತ್ತೋ ಏನೋ..ಹೋಗ್ರೀ ಸಾಮಾನ್ ತಗೊಂಡ್ ಬರ್ರೀ.." ಅಲ್ಲಿದ್ದ ರಂಗ, "ಲೇ, ಅದು ಮನೇಲ್ ಮಾಡೋ ಹಬ್ಬ ಅಲ್ವೇ, ಅದು ಇಸ್ಕೂಲ್ ನಾಗೇ ಬಾವ್ಟ ಹಾರ್ಸೇ ಹಬ್ಬ. ಹೊಸ ಯೂನಿಪಾರ್ಮ್ ಆಕ್ಕೊಂಡು, ಹೂ ಇಡ್ಕೊಂಡ್ ಆಗ್ಲೇ ಐಕ್ಲು ಓಗಿದ್ ನೋಡಿಲ್ಲಾ ನೀನ್, ಎಡೆ ಬೇರೆ ಇಡ್ತಾಳಂತೆ!ಎಡೇನ!!" ರಂಗಿ, "ಸ್ವತಂತ್ರ ಬರೋಕೆ ಜನ ಎಲ್ಲ ಓರಾಡಿ, ಈಗ ಸತ್ತೋಗವ್ರೇ ಅಂತ ಮಾವ ಯೋಳಿಲ್ವೇ ಮತ್ತೆ, ಆ ಸತ್ತವ್ರಿಗೆ ಊಟ ಕೊಡೋದ್ಯಾವತ್ತು ಮತ್ತೇ?" ರಂಗ ಬಾಯ್ತೆರೆದು ನಗ್ತಾ ಹೇಳ್ದ, "ಅಯ್ಯೋ ಪೆದ್ದಿ, ಅಷ್ಟೂ ಗೊತ್ತಾಗಕ್ಕಿಲ್ವಾ ನಿನ್ ಮಂಕ್ ಬುದ್ಧೀಗೆ! ಅವ್ರಿಗೆಲ್ಲ ದಿನಾ ಇದಾನ್ ಸೋದದಾಗೆ ಮಂತ್ರಿಗಳೆಲ್ಲಾ ಕರ್ದು, ಮೀಟ್ಂಗ್ ಮಾಡಿ ಊಟ ಹಾಕ್ತಾರ್ ಕಣೇ. ಮತ್ತೆ ರೌಂಡಾಗಿ ಕೂತು ತಾವುಣ್ತಾರೆ, ನೋಡಿಲ್ವಾ ನೀನು ಟೀವಿನಾಗೆ! ಬರೇ ಧಾರ್ವಾಯಿ ನೋಡೋದ್ ಬುಟ್ಟು ನ್ಯೂಸಾ ನೋಡೋದೂ ಕಲ್ತ್ಕೋ ಮತ್ತೆ! ಇಲ್ಲಾಂದ್ರೆ ಬುದ್ಧಿ ಬೆಳೀವಲ್ದು! ರಂಗಿ,"ಸರಿ, ಬುಡ್ರೀ, ನಾ ಅಡ್ಗೇ ಮಾಡ್ತೀನೇಳಿ, ಲೇಟಾಯ್ತು.." ಹೀಗೆ ಸ್ವಾತಂತ್ರ್ಯ ಅಂದ್ರೆ ಇಸ್ಕೂಲ್ನಾಗೆ ಬಾವ್ಟ ಹಾರ್ಸೋ ಹಬ್ಬವಾಗುಳಿದಿದೆ ಈಗ!
    ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆ ಭಯಾನಕ ಕರಾಳ ದೃಶ್ಯಗಳು ಸಿನೆಮಾ ರೂಪದಲ್ಲಿ ಇನ್ನೂ ಬರಬೇಕಿದೆ. ಇಲ್ಲಾಂದ್ರೆ ಇನ್ನೂ ಹಲವರಿಗೆ ಅದು ಬಾವುಟ ಹಾರಿಸೋ ಹಬ್ಬವಾಗಿ ಮುಂದಿನ ತಲೆಮಾರಿಗೆ ಅದರ ಮಹತ್ವ ತಿಳಿಯಲಾರದು!
  ಹೇಳಿ ಕೇಳಿ ಪಾಶ್ಚಾತ್ಯರ ಸ್ವಚ್ಛತೆ, ಪರಿಸರ ಪ್ರಜ್ಞೆ ಇದನ್ನೆಲ್ಲಾ ಬಿಟ್ಟು ಅವರ ತುಂಡು ಬಟ್ಟೆಗಳ ಬಗ್ಗೆ, ಅವರು ರಸ್ತೆಯಲ್ಲಿ ಸಿಕ್ಕಾಗಲೂ ಮುತ್ತು ಕೊಟ್ಟು ತಮ್ಮನ್ನು ತಬ್ಬಿಕೊಳ್ಳೋ ಸಂಸ್ಕೃತಿಯನ್ನು ಮಾತ್ರ ಬೆಳೆಸಿಕೊಳ್ಳೋ ನಾವುಗಳು ಸ್ವಾತಂತ್ರ್ಯದ ಆಚರಣೆಯ ಮಹತ್ವ ಎಲ್ಲೆಡೆ ಸಾರಬೇಕಿದೆ, ನೀವೇನಂತೀರಿ?
@ಪ್ರೇಮ್@
16.08.2019

1188. ಪ್ರಾರ್ಥನೆ

ಪ್ರಾರ್ಥನೆ

ಬಾ ತಾಯೆ ಕಾಯೆಮ್ಮನು ಕರುಣೆಯ ಕೃಪೆ ತೋರಿ!
ನಿತ್ಯ ಪೊರೆಯೋ ನಮ್ಮ ತೋರುತಲಿ ಸರಿ ದಾರಿ//

ಶುದ್ಧ ಮನವನು ನೀಡಿ, ಸಹೃದಯದಿ ಮಾತಾಡಿ,
ಒಳ್ಳೆ ಕಾರ್ಯವ ಮಾಡಿ
ನಿತ್ಯ ಸಂತಸ ಮನೆಮಾಡಿ//
ಬದುಕ ದಾರಿಯಲುಂಟು ಕಲ್ಲು-ಮುಳ್ಳಿನ ನಡೆಯು,
ಬಾಳ ಏಣಿಯನೇರುವಾಗ ನೆನಪಿರಲಿ ಹಿರಿಯರ ನುಡಿಯು//

ಗಗನದಲಿ ತೇಲಿದಂತೆ ಸುಖದಿ ಮೆರೆಯುತಲಿರಲು,
ಕಷ್ಟವನೂ ಸಹಿಸುವ ಶಕ್ತಿ ನನೀಡುತಲಿರಲು//
ನಾನೆಂಬ ಅಹಂಕಾರ ದೂರ ಸರಿಯಲಿ ಎಂದೂ
ನೀನೇ ಸರ್ವ ಶಕ್ತಿಯೆಂಬ ನಿಜ ತಿಳಿಯಲೆಂದೂ//

ಸರ್ವರೊಂದೇ ಭಾವ ಹೆಡೆಯಾಡಲಿ ಮನದಿ,
ಒಗ್ಗಟ್ಟಿನಲಿ ಕಾರ್ಯ ಮಾಡುವಂತಾಗಲಿ ಪ್ರತಿ ದಿನದಿ//
ಬಯಕೆ ತೋಟದಿ ಬೇಲಿ ದಾಟಿ ಹೋಗದೆ ಇರಲಿ,
ಸರ್ವರೂ ಒಂದೆಂಬ ಭಾವನೆಯು ಬೆಳಗಲಿ//
@ಪ್ರೇಮ್@
16.08.2019

1191. ಸ್ವವಿಮರ್ಶೆ-ನಾನೇಕೆ ಬರೆಯುವೆ?

ನಾ ಬರೆಯುವೆ ನಿತ್ಯ..

ನಾನೇಕೆ ಬರೆಯುತ್ತೇನೆ? ಬಹಳ ಮನಸ್ಸಿಗೆ ನಾಟುವ ಪ್ರಶ್ನೆ. ಹಲವಾರು ಕಾರಣಗಳಿವೆ ನನ್ನ ಬರವಣಿಗೆಗೆ! ಸಿಲ್ಲಿ ಕಾರಣವೆಂದರೆ ನನಗೆ ಅಕ್ಷರ ಬರುತ್ತದೆ! ಸೀರಿಯಸ್ ಕಾರಣವೆಂದರೆ ಸಮಾಜಕ್ಕೆ ನಾನೇನೋ ಕೊಡಬೇಕೆಂಬ ತುಡಿತ! ಅದಷ್ಟೆ ಅಲ್ಲದೆ ಇನ್ನೂ ಹಲವಾರು ಕಾರಣಗಳಿಲ್ಲವೇ!? ಖಂಡಿತ ಇದೆ!
    ಕೆಲವೊಮ್ಮೆ ನಾನೇಕೆ ಬರೆಯುತ್ತೇನೆಂದು ನನ್ನನ್ನು ನಾನೇ ವಿಮರ್ಶಿಸಿಕೊಂಡರೆ ಗುಂಪಿನಲ್ಲಿ ನಾನೂ ಇತರರಂತೆ ಕೊಟ್ಟ ಪದಕ್ಕೆ ಚೆನ್ನಾಗಿ ಬರೆಯಬೇಕು, ಬರೆಯುವೆ! ಮತ್ತೊಂದು ಕಾರಣ. ನಾ ಬರೆಯುತ್ತಲೇ ಇರುವೆ. ಯಾರು ಓದಲಿ, ಬಿಡಲಿ, ಬರವಣಿಗೆ ನನ್ನ ಹವ್ಯಾಸ!
    ಮನಸ್ಸಿನಲ್ಲಿದ್ದುನನ್ನು ಹೊರಹಾಕಿದಾಗಲಷ್ಟೆ ಮನಸ್ಸು ಉಲ್ಲಾಸದಿಂದಿರಲು ಸಾಧ್ಯ! ಅದಕ್ಕೆ ಬರವಣಿಗೆ. ಬರವಣಿಗೆಯೊಂದು ಇಲ್ಲದೆ ಇರುತ್ತಿದ್ದರೆ ಹಲವಾರು ಕವಿಮನಗಳಿಗೆ ನಾನೆಲ್ಲಿ ಚಿರಪರಿಚಿತರಾಗುತ್ತಿದ್ದೆ? ಹಲವಾರು ಸಣ್ಣ ಕವಿಗಳ ದೊಡ್ಡ ಗುಣ, ಹಾಗೂ ಹಲವಾರು ದೊಡ್ಡ ಕವಿಗಳ ಸಣ್ಣಸಣ್ಣ ಗುಣಗಳನ್ನು ನಾ ಹೇಗೆ ತಿಳಿಯುತ್ತಿದ್ದೆ?
     ಅಷ್ಟೇ ಅಲ್ಲ, ಬರೆಯದೆ ಇರುತ್ತಿದ್ದರೆ ನಾ ಹೇಗೆ ಕವಿ ಕುಟುಂಬದ ಸದಸ್ಯಳಾಗಿರುತ್ತಿದ್ದೆ? ಬರವಣಿಗೆ ನನ್ನ ಮೆದುಳಿನ ಸೋಮಾರಿತನವ ಓಡಿಸಲು ಪ್ರತಿದಿನ ಮಸಾಜ್ ಮಾಡುತ್ತದೆ! ಚಂದನದಲ್ಲಿ ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ಬರುವ ಸಾಧಕರನ್ನು ನೋಡುವಾಗ ನಾನೇನೂ ಜೀವನದಲ್ಲಿ ಸಾಧಿಸಿಲ್ಲವಲ್ಲ ಎಂಬ ಭಾವನೆ ನನ್ನನ್ನು ಕಾಡುವುದಲ್ಲ, ಅದು ಹೆಚ್ಚು ಹೆಚ್ಚು ಬರೆಯಲು ನನ್ನ ಪ್ರೇರೇಪಿಸುತ್ತದೆ.
   ಬರವಣಿಗೆ ಮೆದುಳಿಗೆ ಮೇವಿನಂತೆ. ಓದಿದ ಹೊಸ ಹೊಸ ಪದಗಳ ಬಳಕೆ ಬರವಣಿಗೆಯಲ್ಲಾಗುತ್ತದೆ. ಶಾಲೆಯಲ್ಲಿ ಕಲಿಸುವುದು ಇಂಗ್ಲಿಷ್. ಸಾಹಿತ್ಯದ ಚೂರು ಕೃಷಿ ಇರದೆ ಇರುತ್ತಿದ್ದರೆ ಪ್ರಾಯಶಃ ಕನ್ನಡ ಬರವಣಿಗೆ ಉಪಯೋಗಕ್ಕೇ ಬರುತ್ತಿರಲಿಲ್ಲ! ಕನ್ನಡದಲ್ಲಿ ನಾನು ಬರೆಯಬೇಕೆಂದರೆ ಅಪಾರ ಕನ್ನಡದ ಜ್ಞಾನವಿರಬೇಕು. ಆ ಜ್ಞಾನವನ್ನು ಓದಿನಿಂದ ಪಡೆಯಬೇಕು. ಪಡೆದ ಜ್ಞಾನವು ಉಪಯೋಗವಾಗದೆ ಹೋದರೆ ಅದು ಮರೆತು ಹೋಗುತ್ತದೆ. ಮರೆಯದ ಜ್ಞಾನಕ್ಕಾಗಿ ಬರೆಯಬೇಕು!
     ಕನ್ನಡ ನೆಲದಲಿ ಹುಟ್ಟಿ, ಕನ್ನಡವನೆ ತಿಂದು, ತೇಗಿ, ಕನ್ನಡದ ಮಣ್ಣಿನ ವಾಸನೆಯುಂಡು, ಕನ್ನಡದ ಗಾಳಿ ಕುಡಿಯುತ್ತಾ ಬದುಕುವ ನಾವು ಕನ್ನಡದಲಿ ಸ್ವಲ್ಪವಾದರೂ ಕೃಷಿ ಮಾಡದಿದ್ದರೆ ಬದುಕಿದ್ದೂ ವ್ಯರ್ಥವಲ್ಲವೇ? ಅದಕ್ಕಾಗಿ ನಾ ಬರೆಯುವೆ. ನೀವೇನಂತೀರಿ?
@ಪ್ರೇಮ್@
18.08.2019

ಗುರುವಾರ, ಆಗಸ್ಟ್ 15, 2019

1186. 2ಹನಿಗಳು

ಹನಿ-1
ಬಾರೆ
ನನ್ನ ಪ್ರಪಂಚದಲಿ
ನೀನೇ ಚೆಲುವೆ..
ನೀನೇ ನನ್ನ ಬಾಳಿನ
ಬಂಗಾರದ ಒಡವೆ!
ಅದಕೆ ಕೇಳುತಿಹೆ,
ಆಗೋಣ ಮದುವೆ..

ಹನಿ-2.
ಬಾಹ್ಯ ಚೆಲುವು
ಕಣ್ಣು ಸವಿದರೆ
ಆಂತರಿಕ ಚೆಲುವ
ಹೃದಯ ಸವಿವುದು!
ಆಂತರಿಕವಾಗಿ
ಸುಂದರವಾಗಿರೋಣ!
@ಪ್ರೇಮ್@
02.08.2019

1185. ನಾನು ನೀನು

ನಾನು ನೀನು ನೀನೇ ನಾನು
ನನ್ನಿಂದಲೆ ನೀ ನಿನ್ನಿಂದಲೆ ನಾ
ನೂರಾರು ಜನುಮಕೂ ನಾವಿಬ್ಬರೆ ಜೊತೆಗೆ
ನೆನಪಲು ನಗುವಲು ನವಿರಿನೆಡೆಗೆ..

ನಾನೇನೆನ್ನೆ,ನೀನೇನನ್ನೆ...
ನಮ್ಮೊಲವ ನವೋಲ್ಲಾಸಕೆ ನಮ್ಮನೇನನ್ನುವರು
ನನ್ನಾಸೆಯ ಹೂವಿಗೆ ನಿನ್ನಾಸೆಯ ದುಂಬಿಯು..

ನೂರರ ನಾಲ್ಕರ ನಾವಿಕರು ನಾವೇ
ನೆನಪ ನಲಿವಿನಲಿ ನಗಾರಿ ನಲಿಯುತ
ನೋವೇ ಇಲ್ಲದೆ ನಗುವಲಿ ನೆನೆಯುತ..
ನವನಿಧಿ ನವಸಿರಿ ನವನೀತ ನಾದ!

ನಂಬಿಕೆ ನಡೆಸಿ, ನಂಜಿನ ನಕಾರ ನರ್ತನ
ನೂಕುತ ದೂರ ನಂತರ ನೆರೆದು
ನಲಿವಿನ ನವದಿನ ನಡೆಸುತ ಅನುದಿನ
ನೋವದು ನರಳಲಿ ನಂದನವನದಲಿ

ನಲ್ಮೆಯ ತರಲಿ ನಲಿವಿನ ನಯನದಿ
ನಿತ್ಯವು ನವೀನ ನವ್ಯತೆ ನಗಲಿ
ನಾನಾರೆಂಬ ನಯವಿನಯ ಬೆಳೆಯಲಿ
ನಸುನಗುತಲಿ ಪ್ರೀತಿ ನಿರಂತರ ಸಾಗಲಿ..
@ಪ್ರೇಮ್@

1183. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-55

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-55

         ಮಳೆ ಇಲ್ಲವೆಂದು ಕಪ್ಪೆ, ಕತ್ತೆಗೆ ಮದುವೆ , ಮೋಡ ಬಿತ್ತನೆ ಮಾಡಿದ,ಮರ ಕಡಿದು ಕಾಂಕ್ರೀಟ್ ಕಾಡಿನ ಸೃಷ್ಟಿ ಮಾಡಿ  ಐಶಾರಾಮಿ ಜೀವನ ನಡೆಸ ಹೊರಟ ಮಾನವನಿಗೆ ಪ್ರಕೃತಿ ತಾನೇನು ಎಂದು ತೋರಿಸುತಲಿದೆ. ತನ್ನ ಶಕ್ತಿಯ ರುದ್ರ ಪ್ರದರ್ಶನ ಮಾಡಿ, ತನ್ನ ಗುರಿ ಸಾಧಿಸಿ ಬಿಡುವ ಚಪಲತೆಯ ಕರಾಳ ಹಸ್ತದ ರುಚಿ ತೋರಿಸಿ, ಜಾತಿ ಮತ ಧರ್ಮಗಳ ಬೇಧವಿಲ್ಲದೆ, ಮಾನವನು ಹುಟ್ಟಿನಲ್ಲೂ, ಸಾವಿನಲ್ಲೂ, ಕಷ್ಟದಲ್ಲೂ ಒಂದೇ ಎಂದು ತಾನೇ ತೋರಿಸಿಕೊಟ್ಟಿತು!
            ಮನವೊಂದೇ. ಯಾವ ಜಾತಿ, ಭಾಷೆ, ಧರ್ಮದವರೂ ಪ್ರೀತಿಗೆ, ಒಳ್ಳೆಯತನಕ್ಕೆ ಬಾಗುತ್ತಾರೆ, ಪ್ರಾಣಿಗಳೂ ಬಾಗುತ್ತವೆ ಅಲ್ಲವೇ? ಜೀವಿಗಳಿಗೂ ನಿರ್ಜೀವಿಗಳಿಗೂ ಇರುವ ಲಕ್ಷಣ ಒಂದೇ! ಜೊತೆಗೆ ಎಪ್ಪತ್ತ ಮೂರನೇ ಸ್ವಾತಂತ್ರ್ಯೋತ್ಸವದ ಸಡಗರ! ಹಲವಾರು ಮಂದಿಯ ಮನೆ ಮಠಗಳು, ಸಾಕುಪ್ರಾಣಿಗಳು ನೀರುಪಾಲಾಗಿ, ಬಿತ್ತಿ ಬೆಳೆದು ಕಷ್ಟಪಟ್ಟ ಬೆಳೆ ನೀರಲ್ಲಿ ಮುಳುಗಿದಾಗ ಬದುಕೊಂದು ಉಳಿದರೆ ಸಾಕೆನುತ ಗಂಜಿ ಕೇಂದ್ರದಲ್ಲಿ ದಿನ ಕಳೆಯುವವರ ಕಷ್ಟಗಳ ಮುಂದೆ ನಮಾಮದೇನು ಅಲ್ಲವೇ?
      ವರುಣನಾರ್ಭಟ ನಿಲ್ಲಲಿ, ಸರ್ವ ಜನಕೂ ಶಾಂತಿಯಿಂದ ಬದುಕುವಂತಾಗಲಿ, ಪರಿಹಾರ ಕಾರ್ಯ ಎಲ್ಲರಿಗೂ ಸಿಗುವಂತಾಗಲಿ. ಎಲ್ಲರಿಗೂ ದೇವರಲ್ಲಿ ಬೇಡಿಕೊಳ್ಳೋಣ. ನಮಗೆ ಸಾಧ್ಯವಾದಷ್ಟು ಸಹಾಯ ಮಾಡೋಣ. ನೀವೇನಂತೀರಿ?
@ಪ್ರೇಮ್@
14.08.2019

1184. ಹನಿ -ಯೋಧ

ಚುಟುಕುಗಳು
1. ಯೋಧ

ಕಾಯುವೆ ನಿತ್ಯವು
ದೇಶದ ಗಡಿಯಲ್ಲಿ!
ಬಿಟ್ಟಿರುವೆ ಸಂಸಾರವ
ಭಾರತಿಯ ಒಡಲಲ್ಲಿ..

1182. ಅಮ್ಮನ ನುಡಿಗಳು

ಅಮ್ಮನ ನುಡಿಗಳು

ಕಾಣದ ರೋಗದಿ ಮಂಚದ ಮೇಲೆ
ಏಳಲು ಆಗದೆ ಮಲಗಿರುವೆ,
ದಯನೀಯ ದೇವರೆ ಕರುಣೆಯ
ತೋರೋ ನನ್ನಯ ಮೇಲೆ..

ಮಗನನು ಪ್ರೀತಿಸಿ ಚುಂಬಿಸಬೇಕು
ಮಗಳ ಮದುವೆ ಮಾಡಲುಬೇಕು
ಗಂಡನೆ ತಿನಿಸದು ನನ್ನದೆ ಕಾಯಕ
ಮನೆ ಮಠವೆಲ್ಲ ಸ್ವಚ್ಛವಿರಿಸಬೇಕು..

ಅಮ್ಮನ ಊರಿಗೆ ಹೋಗಲುಬೇಕು
ಗಂಡನ ಊರಲಿ ಪೂಜೆಯ ಇಡಬೇಕು,
ದೇವರೆ , ಮಗನಿಗೆ ಓದಿಸಲು ನಾ ಬೇಕು
ರಕ್ಷಿಸೆ ನನ್ನನು ನೀ ಈಗಲೆ  ಬರಬೇಕು..

ತಮ್ಮನ ಬದುಕನು ಕಟ್ಟಲು ಬೇಕು,
ತಂಗಿಯ ಮಕ್ಕಳಿಗೆ ಬುದ್ಧಿಯು ಬೇಕು,
ಅಕ್ಕನ ಮಗನ ಕೆಲಸಕೆ ಹಾಕಬೇಕು,
ಅಣ್ಣನ ಆರೋಗ್ಯ ವಿಚಾರಿಸಬೇಕು..

ತೋಟಕೆ ನೀರನು ಬಿಡುತಿರಬೇಕು
ನಾಯಿಯ ನಿತ್ಯ ನೋಡಿಕೋಬೇಕು,
ಕೆಲಸಕೆ ಮತ್ತೆ ಸೇರಿಕೋಬೇಕು
ಎಲ್ಲರ ನೋಡಲು ನಾನಿರಬೇಕು..
@ಪ್ರೇಮ್@
14.08.2019

1181. ಕಾಯೋ ಗುರುವೆ

ಕಾಯೋ ಗುರುವೆ

ಮನದ ಮಂಟಪದಿ ನಿನ್ನ ಕೂಡಿರುವೆ
ಆವೇಗದಿ ಪ್ರೀತಿಯ ಹಂಚುತಲಿರುವೆ..
ನೀನೇ ಗತಿಯೆನುತಲಿ ನಂಬಿರುವೆ
ನಿನ್ನ ಪ್ರೀತಿಗಾಗಿ ಕಾಯುತಲಿರುವೆ..

ನಿನ್ನ ನಾಮವನೆ ಸ್ಮರಿಸುತಲಿರುವೆ
ಮನದ ಭಾವಗಳ ತಿಳಿಸುತಲಿರುವೆ,
ತಿದ್ದಿ ತೀಡಿ ನನ್ನ ಮುನ್ನಡೆಸು ಗುರುವೆ,
ನೀನೇ ದೇವರೆಂದು ಬಳಿ ಸಾರಿರುವೆ..

ಮನದ ಭಕ್ತಿಯ ನಿನಗೆ ನೀಡಿರುವೆ
ತನುವಿನ ಕಾರ್ಯದಿ ಶುದ್ಧಗೊಳಿಸಿರುವೆ
ಅನುದಿನ ನಿನಗೆ ಜೋಗುಳ ಹಾಡುವೆ
ಕಾವನೆ ರಕ್ಷಿಸು ಎನುತ ಬೇಡುವೆ..

ತಂದೆ ತಾಯಿ ಎಲ್ಲ ನೀನೆನುವೆ,
ಬಂಧು ಬಳಗವನು ನಿನ್ನಲೆ ಕಾಣುವೆ
ತನುಮನ ನಿನಗೇ ಧಾರೆಯೆರೆದಿಹೇ
ನಾರಾಯಣ ನಿನ್ನ ಸೇವೆ ಮಾಡುವೆ..
@ಪ್ರೇಮ್@
14.08.2019

1180.ಕವಿತೆಗೆ

ಕವಿತೆಗೆ

ಕವಿತೆಯೇ ಬಾರೇ ಹೃದಯದ ಹೊರಗೆ
ಆವೇಗದಲಿ ನುಗ್ಗುತ ನನ್ನಯ  ಕೈಗಳಿಗೆ!
ನಿನ್ನಯ ಬರೆಯುತಲಿರುವೆ ಈ ಘಳಿಗೆ!
ಮರಳಿ ಸಾಗದಿರು ನರಗಳ ಕಡೆಗೆ!!

ಬರುತಲಿ ಭಾವಗಳ ನೀ ಅದುಮದಿರು
ತರುತಲಿ ಪದಗಳ ನೀ ಓಡದಿರು,
ಮನಕೆ ಶಾಂತಿಯ ನೀ ನೀಡುತಿರು,
ಕ್ಷಣಕೆ ಬಾಳನು ನೀ ಕಟ್ಟಿ ಕೊಡುತಿರು!

ಮನೆ ಮಠದಾಸೆಯ ತರಿಸದಿರು
ವಿಶ್ವ ಮಾನವನಾಗಲು ಹರಸುತಿರು,
ಇತರಗೆ ನೋವಾಗದಂತೆ ಬರುತಲಿರು
ಪದಭಂಡಾರವ ನೀ ತರುತಲಿರು..

ಆತುರ ಬೇಡವು ಗಮನವು ಇರಲಿ
ಕಾತರ ತಾಳೆನು ಪದಗಳು ಬಾಯಲಿ!
ಓದಿದ ಮೈಮನ ರೋಮಾಂಚನವಾಗಲಿ!
ನೋಡಿದ ಕಣ್ಗಳು ಸಾರ್ಥಕತೆ ಪಡೆಯಲಿ!
@ಪ್ರೇಮ್@
14.08.2019

1179.ನ್ಯಾನೋಕತೆ-ಸ್ವಾತಂತ್ರ್ಯ

ನ್ಯಾನೋ

            ಅವಳ ನಂಬಿ ಅವಳಿಗೆ ಕೊಟ್ಟ ಸ್ವಾತಂತ್ರ್ಯ ಅವಳ ಹಳೆಯ ಗೆಳೆಯನೆಡೆ ಕರೆದೊಯ್ದಿತ್ತು!
        ಅವನ ನಂಬಿ ನೀಡಿದ ಸ್ವಾತಂತ್ರ್ಯವು ಅವನನು ಬಾರಿನ ಮುಂದೆ ನಿಲ್ಲಿಸಿ ಬಾಟಲಿಯೆಡೆ ಸೆಳೆದಿತ್ತು! ಬದುಕು ಬರಡಾಗಿತ್ತು! ದಿನಗಳು ಬದಲಾಗಿತ್ತು! ಮಗುವು ಬಡವಾಯಿತು!
@ಪ್ರೇಮ್@
14.08.2019
    

1178. ನ್ಯಾನೋ ಕತೆ-ವಿಪರ್ಯಾಸ

ವಿಪರ್ಯಾಸ

ಮನೆ ಕಟ್ಟಬೇಕೆಂದು ರತ್ನಕ್ಕ ತನ್ನ ಜೀವಮಾನದಾಸೆಯನು ನಡೆಸಲು ಮನೆಗೆ ಬೇಕಾದ ಮರಳು, ಇಟ್ಟಿಗೆ ಎಲ್ಲವನೂ ಜೀವಮಾನ ಪೂರ್ತಿ ದುಡಿದು ಕೂಡಿಟ್ಟ ಹಣದಿ, ತರಿಸಿ ಇಟ್ಟಿದ್ದರು. ಮಳೆರಾಯ ಸ್ವತಂತ್ರದಿ ಸರ್ವವ ದೋಚಿಕೊಂಡು ಹೋಗಿ ನುಂಗಿ ನೀರು ಕುಡಿದಿದ್ದ!
@ಪ್ರೇಮ್@
14.08.2019

1176.ಗಝಲ್-22

ಗಝಲ್

ಕೆಟ್ಟದಾಗಿ ಕಾಡಕಡಿದು ಕರಗಿಸಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
ಕೆರಕೆ ಸಮನಾದ ಕೆರಳಿದ ಕೋಪ ತಾಳಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..

ಕೆದಕುತ್ತಾ ಕೆಲವು ಕೇಳಬೇಡವಾದ ವಿಷಯಗಳನು,
ಕೆಮ್ಮು ಕೆಮ್ಮುತಲಿ ಕೆರೆಗಾಹಾರವಾಗಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..

ಕೆಂಪ ಕೆಸರಿನ ರಾಡಿಯದು ನೆರೆಯಿಂದಾಗಿಹುದು,
ಮನೆ ಮಠವ ಮುಳುಗಿದವರ ಬಗ್ಗೆ ಬರೆಯಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ...

ಕೇಸರಿಯ ಶಕ್ತಿಯನು ಜಾತಿ ಮತಕೆ ತುಂಬುತಲಿ
ಘರ್ಜನೆಯ ಮಾಡುತಲಿ ಕಾರ್ಯ ಸಾಧಿಸದಿರಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..

ಕರಿಯ ಕಣ್ಣಿನಲಿ ಕಪ್ಪು ವಸ್ತುವ ನೋಡುತ
ಇತರರ ಕೆಟ್ಟ ಕದನ ಕಾರ್ಯವ ಕದ್ದಾಲಿಸಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ...

ಕುವರರಿವರು ಕರುಣೆಯ ಕರುನಾಡಿನ ಕಾಂತಿಯ,
ಕಸದಂತಿರದೆ ಕಸಿವಿಸಿಯಾಗದೆ ಬದುಕಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ...

ಕಂಪು ಬೀರುತಲಿ ಕಾಂತಿಯ ಚೆಲ್ಲುತಲಿ ಬದುಕೋಣ,
ಕಂಡೆಡೆ ಪ್ರೇಮದ ಮಾತುಗಳನಾಡಲು ಸ್ವಾತಂತ್ರ್ಯ ಸಿಕ್ಕಿದೆಯೆಮಗೆ..
@ಪ್ರೇಮ್@
13.08.2019

1177. ಐಕ್ಯತೆ

ಐಕ್ಯತೆ

ಹಿಂದೂ ಬೌದ್ಧ ಮುಸಲ್ಮಾನನು ನಾನು
ಕ್ರೈಸ್ತ ಪಾರ್ಸಿ ಜೈನನು ನಾನು
ಸರ್ವರಿಗೊಂದೇ ಕೆಂಪನೆ ರಕುತವು
ಸರ್ವರ ನೋವಿಗೂ ಪ್ರೀತಿಯೇ ಮದ್ದು..

ಮುದ್ದಿಗೆ ಇಲ್ಲವು ಯಾವುದೇ ಧರ್ಮ,
ಪಂಚ ಭೂತಗಳಿಗ್ಯಾವುದು ಧರ್ಮ?
ಗಾಳಿ ನೀರು ಅಗ್ನಿ ಆಕಾಶ ಭೂಮಿಯಲಿ
ಮಾನವರೆಲ್ಲ ಒಂದೇ ಅಲ್ಲವೇ..

ಸುಡಬೇಕು ಅಂತರಂಗದ ದ್ವೇಷ
ಸುರಿದು ಹೋಗಲಿ ರೋಷದ ಮಳೆಯು
ಉಸಿರಾಡಲಿ ಭಾರತ ಮಾತೆಯ ಗಾಳಿ!
ದೇಹಕೆ ಹೋಗಲಿ ರೈತನ ಬೆಳೆಯು..

ಯೋಧಗೆ ಗುರುವಿಗೆ ಜಾತಿಯು ಇಹುದೇ
ಡಾಕ್ಟರ್ ಲಾಯರ್ ಧರ್ಮವ ನೋಡುವುದೇ
ದ್ವೇಷದ ಕಿಡಿಯನು ಆರಿಸಿ ಬಿಡುತಲಿ
ಶಾಂತಿ ನೆಮ್ಮದಿಯು ಎಲ್ಲೆಡೆ ಹರಿಯಲಿ..
@ಪ್ರೇಮ್@
15.08.2019

1175. ನನ್ನಿಂದ ಕಲಿಯಿರಿ

ನನ್ನಿಂದ ಕಲಿಯಿರಿ

ಪರಿಸರ ಶುದ್ಧಿ ಜೀವಿಯು ನಾನು..
ನನ್ನಿಂದ ಕಲಿಯೋ ಮಾನವ ನೀನು..
ಬಿಸಿಲು- ಮಳೆ- ಚಳಿಗೂ ಅಂಜದೆ,
ಸ್ವಚ್ಛತೆ ಕಾರ್ಯವ ಮಾಡುವ ಗಂಡೆದೆ//

ಮುಗ್ದ ಗೆಳೆತನಕೆ ಹೆಸರಾದವ ನಾನು,
ನಿನ್ನುಳಿದಗುಳನು ತಿಂದು ಬೆಳೆವವನು.
ಪಿತೃ ಪಕ್ಷಕೆ ನಾನೇ ಬೇಕು, ಮೊದಲೂಟವು ನನಗಂದು,
ಎತ್ತಿಡುವೆ ನೀ ಊಟ ತಿಂಡಿಯ ಹಿರಿಯರು ತಿನಲೆಂದು//

ಸತ್ತ ಪ್ರಾಣಿಗಳ ದೇಹವ ತಿಂದರೂ
ನನ್ನಲಿ ಕಾಣೆ ನೀ ಕಪಟದ ನೆತ್ತರು,
ಮಾನವ ನೀನು ಬಿಡಲಾರೆ ನನ್ನಂಥ
ಸಣ್ಣ ಜೀವಿಗಳ ಬದುಕಲು ಸ್ವಂತ//

ಕಪ್ಪಾದರು ಬಣ್ಣವು ಶನಿಯ ವಾಹನವು
ನಿಮ್ಮಾರನು ಬಿಡದು ಶನಿ ಗ್ರಹವು..
ಮೆತ್ತಗೆ ಸ್ವಚ್ಛದಿ ಬಾಳುವುದ ಕಲಿಸುವೆ,
ಒಗ್ಗಟ್ಟಿನ ಶಕ್ತಿಯ ಸಂದೇಶ ಸಾರುವೆ!
@ಪ್ರೇಮ್@
07.08.2019

1174. ಬದುಕಲು ಕಲಿಯೋಣ

ಬದುಕಲು ಕಲಿಯೋಣ

ಮಣ್ಣಿನ ಮಕ್ಕಳು ನಾವಾಗಿ ಬದುಕಲು
ಪ್ರಕೃತಿ ಕೊಟ್ಟಿದೆ ನಮಗೆ ಒಕ್ಕಲು!
ಮನೆಮಠ ವರುಣನ ಬಿರುಸಿಗೆ ಸಾಲದು
ಮೂರು ದಿನದ ಬದುಕದು ನಿಲ್ಲದು..

ಆಟವೂ ಊಟವೂ ಮಡಿಲದು ನಿನ್ನದೆ
ಮಳೆಯೋ ಬಿಸಿಲೋ ಆಸರೆ ಬೇಡಿದೆ,
ರಕ್ಷಕನು ನೀನೇ ಶಿಕ್ಷಕನೂ ನೀನೇ
ನಿನ್ನಯ ಮಕ್ಕಳ ಕಾಯುವೆ ತಾನೇ..

ಮಳೆಯೇ ಬರಲಿ, ಮುಳುಗಡೆಯಾಗಲಿ
ಬಾಳನು ದೂಡುವ ಶಕ್ತಿಯು ನಮಗಿರಲಿ,
ಆತ್ಮಾನಂದದಿ ತೃಪ್ತಿಯ ಕಾಣುತ
ಜಗದಲಿ ಬಾಳುವ ಆಗುತ ಶಾಂತ…

ಇರಲದು ಸೂರು ಬದುಕಲು ಸಾರು
ಮನದ ಬಾಳ್ವೆಗೆ ಪ್ರಾರ್ಥನೆ ಚೂರು,
ಬದುಕನು ನೋಡು ಆಳದ ಕಣ್ಣಲಿ
ಸಾಗುತಲಿರುವೆವು ಕಷ್ಟದ ಕಡಡಲಲಿ..

@ಪ್ರೇಮ್@
09.08.20196

1194. ಅವಳು

ಅವಳು

ಹುಟ್ಟಿ ತಂದೆಯ ಪ್ರೀತಿಯಲಿ ಮುಳುಗಿಸಿದವಳು,
ತಾಯಿಯ ನೋವನು ತಾನೇ ಹಂಚಿಕೊಂಡವಳು!

ಕುಟುಂಬಗಳ ಒಟ್ಟಿಗೆ ಜೋಡಿಸ ಹೊರಟವಳು,
ಇತರರ ಮೊಗದಿ ನಗುತರಿಸೆ ತಾ ನೋವುಂಡವಳು!
ಅತ್ತೆ, ಮಾವ, ಅತ್ತಿಗೆ, ಮೈದುನ, ಪತಿಯರ ಸಾಕಿದವಳು!
ತಂದೆ, ತಾಯಿ, ತಮ್ಮ, ತಂಗಿಯರ ರಕ್ತ ಹಂಚಿಕೊಂಡವಳು!

ಕೋಪವನೆಲ್ಲ ತನ್ನ ಕಣ್ಣೀರಲೆ ಕರಗಿಸಿಕೊಂಡವಳು,
ಅಸಹಾಯಕತೆಯ ಪಾತ್ರೆಗಳ ಜೊತೆ ಹೇಳಿಕೊಂಡವಳು!
ಹೋದ ಮನೆಯಲಿ ಹೇಗಾದರೂ ಬದುಕಿ ಬಾಳಿದವಳು!
ಎರಡು ಮನೆಗಳ ಜೊತೆಗೆ ನಂಟ ಬೆಸೆದವಳು!

ಹುಟ್ಟಿದ ಮನೆಯ ಮರ್ಯಾದೆಯ ಕಾಯ್ದವಳು!
ಮಕ್ಕಳ ಬಾಳಿಗೆ ಭದ್ರವಾದ ಬುನಾದಿ ಹಾಕಿದವಳು,
ಕಂದರಿಗಾಗಿ ತನ್ನ ಆಸೆಗಳ ಮರೆತು ಬದುಕಿದವಳು!
ಸಹೃದಯತೆಗೆ ಮೂಕವಾದ ಸಾಕ್ಷಿಯಾದವಳು!

ಹೆಣ್ಣೆಂದು ಹೆಣ್ಣಿನ ಬಾಯಲೇ ಉಗಿಸಿಕೊಂಡವಳು!
ಕಷ್ಟವಿದ್ದರೂ ಹೆಣ್ಣು ಮಗುವಿಗೇ ಆಸೆ ಪಟ್ಟವಳು!
ಹೆರಿಗೆ ನೋವ ನಡುವೆಯೂ ಮಗುವ ನೋಡಿ ನೋವ ಮರೆತವಳು!
ನೋವಿನ ನಡುವೆಯೂ ತನ್ನ ಜವಾಬ್ದಾರಿಯ ಬಿಡದವಳು!

ಸಮಾಜಕೆ ತಾನೇನು ಎಂಬುದ ದುಡಿದು ತೋರಿಸಿದವಳು,
ತನ್ನ ಶಕ್ತಿಯ ಮಕ್ಕಳಿಗೆಲ್ಲ ಎರಕ ಹೊಯ್ದವಳು!
ಗಂಡನಿಲ್ಲದಾಗ ಅವನ ಕರ್ತವ್ಯಕೆ ಹೆಗಲು ಕೊಟ್ಟವಳು!
ಅಬಲೆಯೆಂದರೂ ಜಗಕೆ ತಾನು ಕಣ್ಣಾದವಳು!
@ಪ್ರೇಮ್@
10.08.2019