ಗುರುವಾರ, ಏಪ್ರಿಲ್ 16, 2020

1391. ಗಝಲ್

ಗಝಲ್

ಮನದ ಗುಡಿಯೆಾಳಗೆ ಪ್ರತಿಷ್ಠಾಪಿಸಿ ಅಭಿಷೇಕ ಮಾಡುತ್ತಿರುವೆ ಜಾನು
ತನುವಿನ ಅಂತರಾಳದಿ ಪಸರಿಸಿಕೊಳುತ ಜೀವಕೋಶಗಳೊಡನೆ ಬೆರೆತಿರುವೆ ಜಾನು..

ಹಗಲು ರಾತ್ರಿಯೆನದೆ  ಪ್ರೀತಿ ಸಾಗರದಿ ಈಜುವುದೆನ್ನ ಕಸುಬು
ಕ್ಷಣಕ್ಷಣವೂ ನೋಟದಲಿ ನೋಟಬೆರೆಸಿ ಕಣ್ಣಲೇ ಚಾಟ್ ನಲಿ ತೊಡಗಿರುವೆ ಜಾನು!

ಮೌನದಲು ಮಾತಿನಲು ಬರಹದಲು ಆಲೋಚನೆಯಲು ಹೃದಯದಲಿ ಧ್ಯಾನ.
ಪಕ್ಷಿ ಗೂಡಿನಲಿ ನಿನ್ನನಿಟ್ಟು ಗುಟುಕು ನೀಡಿ ಪೋಷಿಸುತಿರುವೆ ಜಾನು!

ಮುತ್ತಿನ ಅರಮನೆಯಲಿ ಸಿಂಗರಿಸಿ, ಮುತ್ತಿನಲೆ ಬಾರಿಬಾರಿಗೆ ಮೀಯಿಸಿರುವೆ,
ಪ್ರತಿ ತುತ್ತನು ಸಂತಸದಿ ನಿನ್ಹೆಹೆಸರಲೆ ಸವಿಯುತಿರುವೆ ಜಾನು!

ಕನಸ ಗೋಪುರಗಳ ಮೇಲೆ ಮೇಲೇರಿಸಿ ಕಟ್ಟಿ ಕೂರಿಸಿರುವೆ,
ನನಸ ಮಾಡಲು ಪ್ರಿಯಕರ ನೀ ಬರುವೆಯೆಂದು ಕಾದಿರುವೆ ಜಾನು!

ಬದುಕದು ನನ್ನದು ತೇಲುವ ಗಾಳಿಪಟ ದಾರ ಕೈಲಿಹುದಲ್ಲ!
ಬಿಡದೆ ಓಡಿಸುತಲಿರು ಎತ್ತರೆತ್ತರಕೆ, ಬಹಳ ನಂಬಿರುವೆ ಜಾನು!

ಪರಿಸರದ ಹಚ್ಚ ಹಸಿರಿನ ಹೊಸ ಲೋಕ ನಮ್ಮದಾಗಬೇಕಾಗಿದೆ.
ಪ್ರೇಮನ ಕೈ ಹಿಡಿದು ನಡೆಸುವಿಯೆಂದು ಬಿಡದೆ ಕಾಡಿರುವೆ ಜಾನು!
@ಪ್ರೇಮ್@
16.04.2020

ಕವನ ಮನದಾಳದಿಂದ ಬಂದಿದೆ.ತನ್ನ ಪ್ರೀಯತಮಗೆ..ಉಡುಗೊರೆ  ನೀಡಿದಂತಿದೆ.ತನ್ನ ಮನಸ್ಸಿನ ಭಾವನೆಗಳು ಲೇಖನಿಯ ಮೂಲಕ ಹೊರ ಹೊಮ್ಮಿದೆ.ಇದನ್ನೋದಿದ ನನ್ನ ಮನಸ್ಸು ಆನಂದದಿಂದ ನಲಿಯುತಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ