ಬಳಿವವರಾರು..
ಸತ್ತು ಹೋದ ಭಾವಕೆ ಬಣ್ಣ ಬಳಿವವರಾರು?
ಬೇಸತ್ತ ಬೇಡಿಕೆಗಳ ಪೂರೈಸುವವರಾರು?
ಬೇಲಿ ಇದ್ದರೂ ಜಿಗಿವ ಬೇಸರಕೆ ಬೆವರಿಳಿಸುವವರಾರು?
ಬೆನ್ನಿಗಂಟಿದ ಭಯದ ಭೂತಕೆ ಭಂಗ ತರುವವರಾರು?
ಭಾವದಲೆಗಳು ಎಂದೆಂದೂ ಭೃಂಗದಂತಿರಬೇಕಿತ್ತು!
ಭವಿಷ್ಯದ ಬಾಗಿಲ ತಟ್ಟಿ ಭೋರ್ಗರೆಯಬೇಕಿತ್ತು!
ಭೋಗ ಭಾಗ್ಯದ ಬಗೆಗೆ ಕನಸು ಕಾಣಬೇಕಿತ್ತು!
ಭೀಬತ್ಸ ರೂಪ ತಾಳದೆ ಬೇತಾಳನಂತಾಗಿರಬಾರದಾಗಿತ್ತು!
ಬುಳುಬುಳು ಹರಿಯುತ ಬಗೆಬಗೆಯಲಿ ಬಂದು
ಭವ ಸಾಗರದಲಿ ಈಜಿ ಬಲಗೊಳುವಂತೆ ಮಿಂದು
ಬಗಲಲ್ಲೆ ಬಹು ಕುದಿಯುವ ಕೆಂಡವ ಹಿಡುಕೊಂಡು
ಭವಿಷ್ಯತ್ತಿಗೆ ಬೇಕಾದ ಬಿರುಸಿನ ಕನಸು ಬರುವುದೆಂದು?
ಮತ್ತೆ ಬಳಿಯಬೇಕಿದೆ ಬಣ್ಣಗಳ ಮನಕ್ಕಿಂದು
ಕತ್ತೆಯಂತಾಗದೆ ಮಾನವತೆ ಮೆರೆಯಬೇಕಿದೆ ಬೆಂದು
ಬತ್ತದ ಭಾವಗಳ ಮತ್ತೆ ಬರಿಸಬೇಕಿಹುದೆಂದೆಂದು
ನೆತ್ತರ ಬರಿಸದೆ ಕತ್ತಿಯ ಬೀಸದೆ ನೆತ್ತಿಯನುಳಿಸಿ ಬಾಳುವೆವೆಂದು...
@ಪ್ರೇಮ್@
20.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ