ಸೋಮವಾರ, ಏಪ್ರಿಲ್ 6, 2020

1370. ಗಝಲ್-24

ಗಝಲ್

ನೊಂದ ಮನದ ಕಣ್ಣೀರೊರೆಸುವ ಕೈಯಾಗು ನೀ
ಬಡವರ ಪಾಲಿಗೆ ಆಸರೆಯಾಗುವ ವರವಾಗು ನೀ..

ಸೋಲಿನಲಿ ಸೋತವರು ಬಹಳ ಜನರಿಹರು ಜಗದಲಿ
ಗೆಲುವಿಗೆ ಭರವಸೆ ಕೊಡುವ ನಲಿವಾಗು ನೀ..

ಬದುಕಿನಲಿ ಭಯಪಡುವ ಭವಿಷ್ಯ ಬರಿದಾಯಿತೆನುವ ಬಡವರಿಹರು.
ಬಡತನದ ಬವಣೆಯ ಕಳೆಯುವ ಊರುಗೋಲಾಗು ನೀ..

ಮನ ಮುದುರಿಸಿ ಸಾವಿಗೆ ಶರಣಾಗುವವರೂ ಇಹರು
ಹೊಸಬಾಳಿಗೆ ಅವಕಾಶಗಳ ಕೊಡುವ ನಾಯಕನಾಗು ನೀ..

ಮೈಗಳ್ಳರು ಕಳ್ಳತನದಿ ಇತರರ ತಲೆಯೊಡೆಯುವ ಯೋಚನೆಯಲಿಹರು
ಕೆಲಸ ಮಾಡದೆ ಸುಖಪಡುವವರಿಗೆ ಭದ್ರಕಾಳಿಯಾಗು ನೀ..

ಗಿಡಮರಗಳು ನೀರಿಲ್ಲದೆ ಅಳುವಾಗ ಕಡಿದು ಮುಗಿಸುವವರಿಹರು.
ಸಾಲು ಮರದ ತಿಮ್ಮಕ್ಕನಂತೆ ನಗುವಾಗು ನೀ..

ಅನಾಥ ಮಕ್ಕಳು ಕ್ಷಣದ ಪ್ರೀತಿಗೆ ಹಂಬಲಿಸುತಿಹರು.
ಪ್ರೇಮವುಣಿಸುವ, ಸಂತೈಸಿ ಸಲಹುವ ದೇವತೆಯಾಗು ನೀ..
@ಪ್ರೇಮ್@
05.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ