ನನ್ನೊಡಲು..
ನೋವೇ ಆಗುವುದಿಲ್ಲ ನನಗೆ
ನೀನು ಎತ್ತಿನ ಮೇಲೆ ನೊಗವಿಟ್ಟು, ಹಿಂದೆ ನೇಗಿಲ ಕಟ್ಟಿ ನನ್ನ ಉಳುವಾಗ ನನ್ನೊಡಲು ನೋಯದು!
ಗುಂಡಿಗಳ ಹಾರೆ ಪಿಕ್ಕಾಸಿಗಳಿಂದ ಅಗೆದು, ಗೊಬ್ಬರವ ತುಂಬಿಸಿ,ಅದರೊಳಗೆ ಪುಟಾಣಿ ಗಿಡವ ನೆಟ್ಟಾಗಲೂ ನನ್ನೊಡಲು ನೋಯದು..
ನೀನು, ನಿನ್ನ ಮಕ್ಕಳು, ಪ್ರಾಣಿ ಪಕ್ಷಿಗಳು ಕಿಲಕಿಲನೆ ನಕ್ಕು ನಲಿದು,ಕುಣಿದು ಜಿಗಿಯುವಾಗಲೂ ನನ್ನ ಹೃದಯ ನೋಯದು!
ನೋವು ಯಾವಾಗ ಗೊತ್ತಾ...?
ನೂರಾರು ವರುಷ ಬಾಳಿ, ಪಶುಪಕ್ಷಿಗಳಿಗೆ ಆಹಾರ, ಆಶ್ರಯ, ನೆರಳು,ಹಣ್ಣು ನೀಡಿದ ಮರಗಳ ಬುಡ ಸಹಿತ ಕಿತ್ತು ಬಿಸಾಕಿ ನಿನಗಾಗಿ ರಸ್ತೆ ನಿರ್ಮಿಸುವಾಗ...
ಗುಡ್ಡ, ಪರ್ವತಗಳ ನಿನ್ನ ಜೆಸಿಬಿಯಿಂದ ಕತ್ತರಿಸಿ ಬಿಸುಟು, ಮಣ್ಣಿನೋಕುಳಿ ಹರಿದಾಗ...
ಕಾಡಿಗೆ ಬೆಂಕಿ ಹಚ್ಚಿ ನನ್ನೆಲ್ಲಾ ಗಿಡ ಮರ ಪಶು ಪಕ್ಷಿಗಳ ಜೀವಂತ ಸುಟ್ಟಾಗ....
ವಿಷವ ತಂದು ಮರಗಳ ಬುಡಕ್ಕೆ, ಗಿಡಗಳಿಗೆ, ಮಣ್ಣಿಗೆ, ಹೂವು,ಹಣ್ಣು ತರಕಾರಿಗಳಿಗೆ ಸುರಿವಾಗ...
ನನ್ನ ಮಕ್ಕಳ ಆರ್ತ ನಾದ ಕಂಡು ನನ್ನೊಡಲು ನೋವಾಗುತ್ತದೆ!
ಮುಂದಿನ ಜನಾಂಗದ ಮಕ್ಕಳು ಮರಿಗಳ ಭರ್ಬರ ಬದುಕನ್ನು ನೆನೆಸಿ ನನ್ನೊಡಲು ನೋಯುತಿದೆ...
@ಪ್ರೇಮ್@
13.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ