ಮಂಗಳವಾರ, ಮೇ 21, 2019

1022. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-45

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-45

ಪ್ರತಿ ಮನೆಯಲ್ಲು ಮನೆ ನಡೆಸುವ ಮಹಿಳೆಗೆ ಲೆಕ್ಕಾಚಾರದ ಕೊಂಚ ಮಟ್ಟಿನದ್ದಾದರೂ ಅರಿವಿರಬೇಕು. ಇಲ್ಲವಾದರೆ  ಅಡಿಗೆ ಮನೆ ನರಕವಾಗಿರುತ್ತದೆ. ಅಡಿಗೆ ಮನೆಯ ಬ್ಯಾಲೆಂಸಿಂಗ್ ತುಂಬಾ ಮುಖ್ಯವಾದುದು. ಮನೆಯಲ್ಲಿ ನಾಲ್ಕೇ ಜನರಿರುವಾಗ ಅನ್ನಕ್ಕೆ ಅಕ್ಕಿ ಎಷ್ಟು ಹಾಕಬೇಕು, ತರಕಾರಿ ಯಾವುದಕ್ಕೆ ಯಾವುದರೊಂದಿಗೆ ಬೆರೆಸಿದರೆ ಸೂಕ್ತ, ಎಷ್ಟು ಲೋಟ ನೀರಿಗೆ ಎಷ್ಟು ಹಾಲು, ಟೀಪುಡಿ, ಸಕ್ಕರೆ ಹಾಕಬೇಕು ಎಂಬುದರ ಪರಿವೆಯಿರಬೇಕು. ಎಷ್ಟು ಹೊತ್ತು ಅನ್ನಕ್ಕೆ, ಎಷ್ಟೊತ್ತು ತರಕಾರಿ ಬೇಯಲು ಬೇಕೆಂಬ ಅರಿವಿರದಿದ್ದರೆ ನಾಲ್ಕು ತಿಂಗಳಿಗೆ ಬರುವ ಗ್ಯಾಸ್ ಎರಡೇ ತಿಂಗಳಲ್ಲಿ ಮುಗಿಯುತ್ತದೆ. ಹಾಗೆಯೇ ಅಡಿಗೆ ಕೋಣೆಯಲ್ಲಿ ಕಾಲು ಕಿಲೋ ತಿಂಗಳಿಗೆ ಬೇಕಾದ ಸಾಮಾನು ಬ್ಯಾಲೆನ್ಸಿಂಗ್ ಇಲ್ಲದಿದ್ದರೆ ಒಂದು ಕಿಲೋ ಖರ್ಚಾಗುತ್ತದೆ! ಅಷ್ಟೆ ಅಲ್ಲ ,ಪ್ರಮಾಣ ಸರಿಯಿಲ್ಲದ ಆಹಾರ ಗುಣಮಟ್ಟದಲ್ಲೂ ಕೆಟ್ಟದಾಗಿರುತ್ತದೆ, ಅದನ್ನು ತಿನ್ನಲಾಗದು. ಆಗಲೂ ಅದು ತ್ಯಾಜ್ಯವೆನಿಸಿಕೊಳ್ಳುತ್ತದೆ. ಅದಕ್ಕೆ ಬಳಸಿದ ವಸ್ತುಗಳ ಬೆಲೆ ವ್ಯರ್ಥ, ರೆಡಿ ಮಾಡಲು ತೆಗೆದುಕೊಂಡ ಸಮಯ ವ್ಯರ್ಥ ಹಾಗೂ ಗ್ಯಾಸು ವ್ಯರ್ಥ.
   ಮತ್ತೆ ಕೆಲವರು ಪ್ರತಿ ದಿನ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲುವ ರೂಢಿಯಿರಿಸಿಕೊಂಡಿರುವವರು. ಪ್ರತಿದಿನ ಚೆಲ್ಲುವಾಗ ಸ್ವಲ್ಪವೇ ಆದರೂ ಅದು ತಿಂಗಳ ಪ್ರಮಾಣ ಲೆಕ್ಕ ಹಾಕುವಾಗ ದೊಡ್ಡದೇ ಅಲ್ಲವೇ? ಇನ್ನು ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಹಾಗೇ ಇಟ್ಟು, ಮರುದಿನ ಹಳಸಿದಂತಾದಾಗ ಬೇರೆಯವರಿಗೆ ಕೊಡುವುದು! ಯಾವ ಲಾಭಕ್ಕಾಗಿ? ನಮ್ಮಂತೆ ಇತರರೂ ಮನುಜರಲ್ಲವೇ?
   ಪ್ಲಾಸ್ಟಿಕ್ ನಲ್ಲಿ ತುಂಬಿ, ಕಟ್ಟಿ ಕಸ್ತೆಯ ಬದಿಯಲ್ಲಿ ಬಿಸಾಡುವವರು ಮಹಾ ಪಾಪಿಗಳು! ತಾವೂ ತಿನ್ನದೆ, ಇತರರಿಗೂ ಕೊಡಲಾಗದೆ, ನಾಯಿ,ಕೋಳಿ,ದನ, ಹಂದಿಗಾದರೂ ಕೊಡಲಾಗದೆ ಹಾಗೆ ಮಾಡಿ,ಬೀದಿ ಬದಿಯ ಜನಗಳು ಪ್ಲಾಸ್ಟಿಕ್ ಸಮೇತ ಅದನ್ನು ತಿಂದಾಗ ಪರೋಕ್ಷವಾಗಿ ದನಗಳ ಸಾವಿಗೆ ಕಾರಣವಾಗುವವರು! ಬೀದಿ ನಾಯಿಗಳ ಹೆಚ್ಚಳಕ್ಕೂ, ಕಿತ್ತಾಟಕ್ಕೂ ಇವರೇ ಕಾರಣ! ಆ ನಾಯಿಗಳು ಊಟ ತುಂಬಿದ ಕವರುಗಳನ್ನು ಎಳೆದಾಡಿ, ರಸ್ತೆ ತುಂಬಾ ಎಳೆದುಕೊಂಡು ಹೋಗಿ, ಅದರಲ್ಲಿ ತುಂಬಿಸಿದ ಮೀನು,ಕೋಳಿ, ಮೊಟ್ಟೆ, ಕುರಿ ಮಾಂಸದ ವೇಸ್ಟ್ ಗಳೆಲ್ಲಾ ದಾರಿಯುದ್ದಕ್ಕೂ ಚೆಲ್ಲಿ, ಸತ್ತ ಹೆಣ ಕೊಳೆತಂತೆ ವಾಸನೆ ಬರುತ್ತಾ ಪಾದಾಚಾರಿಗಳಿಗೆ ಸಾಗಲು ಕಷ್ಟವಾಗುವ ಪರಿಸ್ಥಿತಿಗೂ ಇವರೇ ಕಾರಣರು. ಅದರ ಬದಲು ಎಷ್ಟು ಬೇಕೋ ಅಷ್ಟೇ ಬೇಯಿಸಿ, ಉಳಿದರೆ ಮುಂದಿನ ಊಟಕ್ಕೆ ಅದನ್ನು ಬಳಸಿ, ಅಥವಾ ಬೇಡವೆಂದರೆ ಆಗಲೇ ಯಾರಿಗಾದರೂ ಕೊಟ್ಟರೆ ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದಲ್ಲವೇ?
    ಜೀವನವೆಂದರೆ ಎಲ್ಲರಿಗೂ ಎಂದಿಗೂ ಅಸಮತೋಲನವೇ. ಎಲ್ಲರಿಗೂ ಇಷ್ಟ ಪಟ್ಟವರು ಸಿಗಲಾರರು, ಇಷ್ಟಪಟ್ಟ ವಸ್ತುಗಳೂ ಸಿಗವು. ಸಿಕ್ಕಿದುದರಲ್ಲಿ ಹೊಂದಾಣಿಕೆ ಮಾಡಿಕೊಂಡು, ಮನಸನ್ನು ಸಮತೋಲನಕ್ಕೆ ತಂದುಕೊಂಡು, ಅತಿಯಾಸೆ ಪಡದೆ ಇದ್ದುದರಲ್ಲಿ ಬ್ಯಾಲೆನ್ಸ್ ಮಾಡಿಕೊಂಡು, ಲೆಕ್ಕಾಚಾರದ ಪ್ರಕಾರ ಬದುಕಿದಾಗ ಮಾತ್ರ ಬಾಳು ಸುಗಮವಾಗಿರುತ್ತದೆ. ಆದರೆ ಹಾಗೆ ಬದುಕುವುದು ಹೇಳಿದಷ್ಟು ಸುಲಭದ ಮಾತಲ್ಲ! ಅದಕ್ಕೇ ಪ್ರಾಥಮಿಕ ಶಾಲೆಯಿಂದಲೇ ಹೆಚ್ಚಿನವರಿಗೆ ಲೆಕ್ಕಾಚಾರವಿರುವ ಗಣಿತ ಕಷ್ಟ! ಬದುಕೂ ಹಾಗೆಯೇ! ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ