ಗುರುವಾರ, ಮೇ 16, 2019

1016. ನಿನ್ನಂತಾಗಬೇಕು ನಾನು

ನಿನ್ನಂತಾಗಬೇಕು ನಾನು..

ಸಾಗರದ ತಳದಿಂದ ವೇಗವಾಗಿ ಅಪ್ಪಳಿಸಿ,
ದಡದ ಮರಳಲಿ ಜಾರಿ ಆನಂದಿಸಿ,
ಉಕ್ಕುವ ಬಿಳಿ ನೊರೆಯ ಜಾಲಾಡಿಸಿ,
ಚಂದಿರನ ಎತ್ತರಕೆ ನೆಗೆವ ತೆರೆ ನಾನಾಗಬೇಕು...

ಸಂತಸದಿ ಜಲಬಿಂದುಗಳ ಸೇರಿಸಿ,
ಬೆಳದಿಂಗಳಿಗೆ ತನ್ನೆ ತಾನು ವಾಲಿಸಿ,
ಅಬ್ಬರದಿ ಬೊಬ್ಬಿರಿಸಿ ಚಿಮ್ಮುವ
ಮಹಾ ಸಾಗರದ ಅಲೆ ನಾನಾಗಬೇಕು...

ಬದುಕಿನ ನೋವ ಮರೆತು,
ಭೂತ, ಭವಿಷ್ಯ, ನಾಳೆಗಳ ತೊರೆದು
ಈ ಕ್ಷಣದಿ ಸುಖಪಡುತಲಿ
ದಡದ ಜನಕೆ ಖುಷಿ ನೀಡುವ
ನೀಲ ಕಡಲಾಳದ ತರಂಗ ನಾನಾಗಬೇಕು...

ಅಬ್ಬರಿಸಿ, ಆರ್ಭಟಿಸಿ ಎದ್ದೆದ್ದು ಬಂದು,
ತನ್ನ ಶಕ್ತಿ ಪರಾಕ್ರಮವ ತೋರಿಸುತ ನಿಂದು,
ನೀರು ತಾ ಜಗವನೆ ತೊಳೆವೆನೆಂದು
ಅಲೆಯಲೆಯುತಲಿ ಬಂದು ಭೋರ್ಗರೆಯುತಲಿ
ಉಕ್ಕುವ ಜಲಧಾರೆ ನಾನಾಗಬೇಕು...

ಪ್ರತಿ ಜೀವಿಯ ದಾಹ ತಣಿಸುತಲಿ
ಶುಚಿತ್ವಕೂ ಕಾರಣ ನಾನಾಗುತಲಿ,
ಹುಟ್ಟಿನಿಂದ ಸಾವಿನವರೆಗೂ ಸಹಾಯಕವಾದ
ಸರ್ವರಿಗೂ ಸರ್ವಕಾಲಕೂ ಬೇಕೆನಿಸುವ ನೀರ ಹನಿಬಿಂದು ನಾನಾಗಬೇಕು..
@ಪ್ರೇಮ್@
16.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ