ಮಂಗಳವಾರ, ಮೇ 21, 2019

1019. ಕತ್ತಲು ಬೆಳಕು

ಕತ್ತಲು-ಬೆಳಕು

ನಿತ್ಯ ಬರುತ್ತಿದ್ದರೂ ಕತ್ತಲು ಬೆಳಕೆಂದೂ
ಒಂದಾಗದೆಂಬ ನೀತಿಗೆ ತದ್ವಿರುದ್ಧವಾಗೊಂದು
ದಿನ ಕತ್ತಲು ಬೆಳಕು ಜತೆಗೂಡಿದವು!

ಅರ್ಧ ಕತ್ತಲು ಜನಕೆ, ಇನ್ನರ್ಧ ಬೆಳಕು!
ಸೂರ್ಯನ ಬೆಳಕು ಅರೆಗಾಜಿನಲಿ ಒಳಬಂದು ಮುತ್ತಿಟ್ಟಂತೆ!
ಒಂದು ಕೋಣೆಯ ಅರೆಬೆಳಕು
ಮತ್ತೊಂದರ ಬಾಗಿಲಿನೊಳಗೆ ನುಸುಳಿದಂತೆ!

ಕತ್ತಲೆಂದಿತು, "ನೋಡು,ನಿನಗಿಂತ ನಾನೇ ಶ್ರೇಷ್ಠ,
ಜನ ಕತ್ತಲೆಯ ಬಯಸುವರು!
ನಿದ್ದೆಗಾಗಿ, ಆರಾಮಕ್ಕಾಗಿ, ಜಗದ ಸೃಷ್ಠಿಗಾಗಿ!"

ಪ್ರತ್ಯುತ್ತರ ಬೆಳಕಿನದು, "ಜನ ಬೆಳಗಾಗುವುದ ಕಾಯುವರು,
ತಮ್ಮ ಹೊಟ್ಟೆ ತುಂಬುವ ಕಾರ್ಯಕ್ಕಾಗಿ, ಮಾತುಕತೆಗಾಗಿ"

ಕತ್ತಲು ನಕ್ಕಿತು, "ನೋಡು ಬೆಳಕೇ, ಭ್ರಮೆ ನಿನ್ನದು,
ಅವರಿಗೆ ಹಾಡುತ್ತಾ,ಕುಡಿದು ಕುಣಿದು ನರ್ತಿಸಲು
ಬೆಳಕು ಬೇಡ, ಕದ್ದು ಸಾಮಾನುಗಳ ಸಾಗಿಸಲೂ
ನೀ ಬೇಡ, ಅನೈತಿಕ ವ್ಯವಹಾರಗಳಿಗಂತೂ ನೀನೇ
ತಡೆ, ಮತ್ತೆ ಹೇಗೆ ನೀ ಮೇಲಾಗುವೆ?"

ಬೆಳಕು ಸುಮ್ಮನೆ ಕೈಕಟ್ಟಿ,"ದೇವರ ಪೂಜೆಗೆ, ಮದುವೆ, ಊಟದ ಸಮಯಕೂ ನಾ ಬೇಕಲ್ಲವೇ? ಒಳ್ಳೆ ಕಾರ್ಯಗಳಿಗೆ ನಾನೇ ಮೀಸಲು"

ಕತ್ತಲೆ ನಗುತ್ತಾ,"ಹಾ..ಹಾ..ಒಳ್ಳೆ ಕಾಲ,
ಒಳ್ಳೆ ಕಾರ್ಯಗಳೆಲ್ಲ ಇಂದು ಕಡಿಮೆಯಾಗುತ್ತಾ ಬಂದಿವೆ!
ಇದೀಗ ನನ್ನದೇ ಅಟ್ಟಹಾಸ!
ವಿಲನ್ ಈಗ ಹೀರೋ!
ಕತ್ತಲೆಯಲ್ಲೀಗ ಮಹಾನ್ ಕೆಲಸ!
ಹಗಲು ಸುಮ್ಮನೆ ನಿದ್ದೆಗೆ ಸೀಮಿತ!
ನೆನಪಿಟ್ಟುಕೋ, ನೀ ಹೆಚ್ಚು ದಿನ ಮೆರೆಯಲಾರೆ, ನಾನೇ ಮೇಲು!"

ಬೆಳಕಿನ ಉತ್ತರ, "ಮೌನ!"
"ಜನರೇ ಹಾಗೆ, ನಾನೇನನ್ನಲಿ?"
@ಪ್ರೇಮ್@
22.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ