ಬುಧವಾರ, ಮಾರ್ಚ್ 14, 2018

188. ಗಝಲ್-ನೀ ಸಿಗದೆ

ನೀ ಸಿಗದೆ- ಕವನ

ಬಾಳಲಿ ಬಿರುಗಾಳಿ ಬೀಸಿತು ನೀ ಸಿಗದೆ
ಬಳಲಿ ಬೆಂಡಾಗಿ ಬಸವಳಿದೆ ನೀ ಸಿಗದೆ..

ಬಿಸಿ ಉಸಿರ ತಾಪ ಮರೆತು ಹೋಯಿತು
ಹೃದಯದ ಭಾವ ನಿಂತು ಹೋಯಿತು ನೀ ಸಿಗದೆ..

ಮರದಲಿಹ ಹಸಿರ ಗಿಣಿ ಹಾಡು ಸ್ತಬ್ಧವಾದಂತೆ
ಬರದಲಿಹ ನೆಲ ಬಾಯಿಬಿಟ್ಟಂತೆ ಬದುಕು ನೀ ಸಿಗದೆ...

ಒಂಟಿ ನವಿಲು ಬೇಸರದಿ ಕುಣಿವಾಗ ತುಂಟ
ಮೀಸೆಯಡಿ ನೀ ನಕ್ಕ ನೆನಪು ಮಾತ್ರವೆ ನೀ ಸಿಗದೆ...

ತುಂಟಾಟ ನಗೆಯಾಟ ಕಣ್ಣಲ್ಲೆ ನಗುವಾಟ
ಪ್ರತಿಯೊಂದು ಮಾಯ ಈಗ ನೀ ಸಿಗದೆ..

ವಯಸ ಪರಿವೆಯಿರದೆ ಸುತ್ತಿ, ನೆಗೆದ ಕ್ಷಣ
ನವಿರು ಭಾವಗಳು ಮೊಳಕೆಯೊಡೆದು ಹಾಳಾಗಿವೆ ನೀ ಸಿಗದೆ..

ವಸಂತ ಮಾಸ ಮಾಸಿ, ಚೈತ್ರದ ಚಿಗುರು ಒಣಗಿ
ತರಗೆಲೆಯೇ ರಾಶಿ ಬಿದ್ದಂತಿದೆ ಬದುಕು ನೀ ಸಿಗದೆ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ