ನೀನೆಂದರೆ
ಈ ಭಾವನೆಗಳೇ ಹೀಗೆ.. ಎಲ್ಲಿ, ಹೇಗೆ, ಯಾವ ರೀತಿ ಬರುತ್ತವೆಯೋ ಗೊತ್ತಿಲ್ಲ, ಬದುಕಿನ ಘಟನೆಗಳ ಹಾಗೆ. ಅವು ಸಿಹಿ -ಕಹಿ, ಸುಖ-ದುಃಖ ಮಾತ್ರವಲ್ಲ.ಅರಿಷಡ್ವರ್ಗಗಳೂ, ನವರಸಗಳೂ ಒಟ್ಟಾಗಿ ಬರುವ ಸಂದರ್ಭಗಳು ಬದುಕಿನಲ್ಲಿ ಅನೇಕ!
ಅಂತೆಯೇ ನೀನೂ ಕೂಡ!
ನಿನ್ನಿಂದಲೇ ನನ್ನೆಲ್ಲಾ ನೆನಪುಗಳು! ಬೇಡದ ಆಲೋಚನೆಗಳು! ಉಕ್ಕುವ ಭಾವನೆಗಳು! ಅರ್ಥವಾಗದ ಕಲ್ಪನೆಗಳು!
ನೀನೊಂಥರಾ ನನ್ನ ಬಾಳಲ್ಲಿ ಪ್ರೀತಿಯ ಅಲರ್ಜಿ ನನಗೆ! ಥ್ಯಾಂಕ್ ಗಾಡ್ ನೀನಿದ್ದರೂ ನನ್ನ ಬದುಕಲ್ಲಿ ಪರ್ಮನೆಂಟಾಗಿ ನೀನಿಲ್ಲ! ನಾನೊಂಥರಾ ಸ್ಯಾಡಿಸ್ಟ್ ಅಂತ ನಿನಗೆ ಅನ್ನಿಸಬಹುದು! ನಾನು ಎಲ್ಲರೆದುರು ಪಾಪ! ಕೂಲ್, ಕಾಮ್! ಆದರೆ ನಿನಗಲ್ಲ! ನೀನು ಯಾರಿಗೂ ನಿಲುಕದ ಪದಕೋಶ! ಆದರೆ ನಿನಗೆ ತಿಳಿಯದೆಯೇ ನೀ ನನ್ನ ಬಳಿ ಇದ್ದಾಗಲೇ ನಿನ್ನ ಒಂದೊಂದನ ಪುಟವನ್ನೂ ಬಿಡದೆ ಓದಿ ಅರ್ಥೈಸಿಕೊಂಡಿರುವೆ. ನಿನಗದು ತಿಳಿದಿರಬಹುದು ಆದರೆ ನೀನದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂಬುದು ನನಗೆ ತಿಳಿದಿದೆ!
ಬದುಕು ಕೊನೆಯಿರದ ಪುಸ್ತಕ ಸಂಪುಟ. ನೀನೊಂದು ಪದಕೋಶ ಮಾತ್ರವೇ ತಿಳಿದುಕೋ... ನಾ ನಿನ್ನ ಓದಲಿ ಬಿಡಲಿ, ಓದುಗರು ಇದ್ದೇ ಇರುತ್ತಾರೆ! ಅರ್ಥೈಸಿಕೊಳ್ಳುವವರು ಸುಲಭವಾಗಿ ಸಿಗುವುದು ಕಷ್ಟ! ಸಿಕ್ಕರೆ ಪುಣ್ಯ. ನನಗಂತೂ ಸಿಗಲಿಲ್ಲ, ಸಿಗುವರೆಂಬ ನಂಬಿಕೆಯೂ ಇಲ್ಲ!
ನೀನೇನೇ ಹೇಳು ನಿನ್ನ ಮೇಲೆ ನಂಬಿಕೆ ಇಲ್ಲ ನನಗೆ.. ನೀನು ನನ್ನ ಕಷ್ಟಕ್ಕೆ ಸಹಾಯ ಮಾಡಬಲ್ಲೆ ಎಂಬ ತೀರಾ 1ಶೇಕಡಾ ನಂಬಿಕೆಯೂ ನನಗಿಲ್ಲ! ಮತ್ತೇಕೆ ನೀ ನನ್ನ ಬಾಳಲ್ಲಿರುವೆ? ನನ್ನಲ್ಲಿ ಉತ್ತರವಿಲ್ಲ!
ಕೆಲವೊಂದು ಘಟನೆಗಳಿಗೆ, ವ್ಯಕ್ತಿಗಳಿಗೆ ಬಾಳಿನಲ್ಲಿ ಅರ್ಥ, ಉತ್ತರ ಏನೂ ಇರಲ್ಲ!
ಕೆಲವೊಮ್ಮೆ ನಮ್ಮ ಬದುಕೇ ಅರ್ಥವಿಲ್ಲದ್ದು ಅನ್ನಿಸಿಬಿಡುತ್ತದೆ!
ನೀನೇನೇ ಹೇಳು ನನ್ನ ಬದುಕಲ್ಲಿ ನಿನ್ನ ಪಾತ್ರದಲ್ಲಿ ಏನೂ ಇಲ್ಲ, ಎಲ್ಲಾ ಇದೆ.
ನೀ ಬಂದು ನನಗೇನೋ ಕಲಿಸಿದೆ, ಬದುಕಲ್ಲಿ ಹಲವಾರು ಹೊಸತನ್ನು ನಿನ್ನಿಂದ ಕಲಿತೆ. ಜೀವನ ಎಂದರೆ ಹೀಗೂ ಇರುತ್ತದೆ ಅಂತ ತೋರಿಸಿಕೊಟ್ಟವ ನೀ. ಬರಡಾದ ಬಾಳಲ್ಲಿ ಶವಿಕಿರಣವಾಗಿ ನೀ ಬಂದೆ ಎಂದು ನಾನಂದುಕೊಂಡರೆ ನನ್ನಂಥ ಪೆದ್ದಿ ಬೇರೆ ಯಾರಿಲ್ಲ. ಏಕೆ ಗೊತ್ತಾ? ನೀ ಸಮಯ ಸಾಧಕ. ನಿನಗೆ ನಿನ್ನ ಇಷ್ಟಗಳು ಮಾತ್ರ ಗೊತ್ತು! ಇತರರು ನಿನಗೆ ಉಪಕಾರ ಮಾಡಲು ಬೇಕಷ್ಟೆ! ಇತರರಿಂದ ಪಡೆಯುವಷ್ಟು ಸಹಾಯವನ್ನು ಉಪಾಯದಿಂದ ಪಡೆದು ಯೂಸ್ ಲೆಸ್ ಎನಿಸಿದ ಕೂಡಲೇ ವಸ್ತುವಿನಂತೆ ಜನರನ್ನೂ ಕಸದ ತೊಟ್ಟಿಗೆ ಬಿಸಾಕುವ ಗುಣ ನಿನ್ನದು!
ನಿನ್ನ ಹೊಗಳಿಕೆ ಸಾಕಲ್ಲವೇ? ನಾನು ತುಂಬಾ ಕೆಟ್ಟವಳು ಯಾಕೆ ಗೊತ್ತಾ? ನಾನು ನಿನ್ನೆಲ್ಲಾ ತಪ್ಪುಗಳನ್ನೂ ಕ್ಷಮಿಸುತ್ತೇನೆ. ನೀನೆದುರು ಬಂದಾಗ ನನ್ನ ಕೋಪ ಕರಗಿ ನೀರಾಗುತ್ತದೆ.
ದಿನಾ ದೇವರಲ್ಲಿ ನೀ ಕಾಣದಿರಲೆಂದು ಬೇಡುತ್ತಿದ್ದೆ, ಆದರೆ ನನ್ನ ಕಣ್ಣುಗಳಿಗೆ ನಿನ್ನ ಕಣ್ಣುಗಳೊಡನೆ ಸಂಭಾಷಣೆ ಬೇಕಿತ್ತು! ಅವು ಒಂದನ್ನೊಂದು ಹುಡುಕುತ್ತಿದ್ದವು.
ಒಬ್ಬನ ನೆಗೆಟಿವ್ ಅಂಶಗಳೆಲ್ಲಾ ಗೊತ್ತಿದ್ದು ಅವುಗಳನ್ನೆಲ್ಲಾ ಕ್ಷಮಿಸುವವರು ತೀರಾ ವಿರಳ ಕಣೋ.. ಹುಡುಗಿಯರೆಲ್ಲ ಹಾಗಿರುತ್ತಿದ್ದರೆ ಒಂದೇ ಒಂದು ಡಿವೋರ್ಸ್ ಕೇಸೂ ಇರುತ್ತಿರಲಿಲ್ಲವೇನೋ.. ಆದರೆ ನಮ್ಮ ಆಸೆ ಆಕಾಂಕ್ಷೆಗಳೂ ಇವೆಯಲ್ಲ! ಅದ್ಯಾವುದಕ್ಕೂ ನೀ ಜವಾಬ್ದಾರನೇ ಅಲ್ಲ! ಮತ್ಯಾಕೆ ನೀ ನನ್ನ ಬಾಳಲಿ ಬಂದೆ? ನಿನ್ನ ಇಲ್ಲಿ ತಂದ ಆ ವಿಧಿಗೇ ಗೊತ್ತು!
ನಿನ್ನ ಪ್ರಕಾರ ನೀ ಪರಿಪೂರ್ಣ ಮನುಷ್ಯ! ಆದರೆ ನನ್ನ ಪ್ರಕಾರ ನೀ ಗುಳ್ಳೆನರಿ! ಲೋಕಕೆ ನೀ ಒಡೆಯನಾದರೂ ತಾಯಿಗೆ ಮಗನೇ ಅಲ್ಲವೆ? ನಿನಗೆಷ್ಟು ಸಮ್ಮಾನ ಪುರಸ್ಕಾರಗಳು! ನೀ ಉತ್ತಮ ಕೆಲಸಗಾರನಾಗಿರಬಹುದು, ಅದಕ್ಕೆ ಬದ್ಧನಾಗಿರಲೂ ಬಹುದು! ಆದರೆ ನನ್ನ ಪ್ರಕಾರ ನೀ ಜನರನ್ನು, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳದ...... ಈ ಬಿಟ್ಟ ಸ್ಥಳದಲ್ಲಿ ತುಂಬಬಹುದಾದ ಪದಕ್ಕಾಗಿ ಹುಡುಕಾಡಿ ಸೋತು ಹೋಗಿದ್ದೇನೆ. ಹೃದಯಕ್ಕೆ ಇಷ್ಟವಾದರೆ ಮನಸ್ಸು ಅದನ್ನು ಒಪ್ಪದು! ಮನಸ್ಸು ಹೇಳಿದರೆ ಹೃದಯ ಕೇಳದು! ಭಾವನೆಗಳ ಜಲ ಪ್ರಳಯವಾಗಿ ನನ್ನ ರಕ್ತದ ಒತ್ತಡ ಆಗಾಗ ಕಡಿಮೆಯಾಗುವುದು ನಿನ್ನಿಂದಲೇ ಅಲ್ಲವೇ? ಅಲ್ಲ, ನಿನ್ನ ಬಗ್ಗೆ ನಾ ಯೋಚಿಸುವುದರಿಂದ! ನಿನ್ನ ಜನ್ಮದಲ್ಲಿ ನೀ ಆ ಕೆಲಸ ಮಾಡಲಾರೆ! ನಾ ನಿನ್ನ ಹಾಗಲ್ಲವಲ್ಲ!
ನೀನೆಂದರೆ ನೀನೇ.. ಆಕಾಶದಲ್ಲಿ ಹಾರಬಲ್ಲೆ, ಸಮುದ್ರದೊಳಗೆ ಯಾರನ್ನಾದರೂ ನೂಕಿ ಅಲ್ಲಿಂದ ಹೊರ ತೆಗೆಯಬಲ್ಲೆ! ಆ ನ್ಯಾಕ್ ನಿನಗೆ ಗೊತ್ತಿದೆ! ಮಾತಲ್ಲೆ ನೀ ಮನೆಯ ಕಟ್ಟಬಲ್ಲೆ, ಮರವ ಹತ್ತಿಸಬಲ್ಲೆ, ಚಂದಿರನಲ್ಲಿ ಹೋಗಿ, ಸೂರ್ಯನಾಚೆ ಇಣುಕಿ, ಮಂಗಳನಲ್ಲಿ ಇಳಿದು, ಶನಿಯ ಉಪಗ್ರಹದಲ್ಲಿ ಜಾರಿ, ಶುಕ್ರನಲ್ಲಿ ಹೊಳೆದು, ನೆಪ್ಚೂನಲ್ಲಿ ತಿರುಗಿ, ಉಪಗ್ರಹದಲ್ಲಿ ನೆಗೆದು,ಪ್ಯಾರಾಚೂಟ್ ನಲ್ಲಿ ಇಳಿದು ಭೂಮಿ ತಲುಪಬಲ್ಲೆ!
ಆದರೆ ನೀ ನನ್ನ ತೃಪ್ತಿ ಪಡಿಸಲಾರೆ! ನನ್ನೆದೆ ದಾಹವ ತಣಿಸಲಾರೆ! ಇನ್ನೇಳು ಜನ್ಮ ಪಡೆದು ಬಂದರೂ ನನ್ನಂಥವರು ನಿನಗೆ ನಿನ್ನ ಜೀವನದಲ್ಲಿ ಸಿಗಲಾರರು ಮತ್ತು ನಿನ್ನ ಇಷ್ಟು ತಪ್ಪುಗಳನ್ನು ಆ ದೇವರೇ ಬಂದರೂ ಕ್ಷಮಿಸರು!
ನೀನೆಲ್ಲೇ ಇರು, ಸ್ವರ್ಗದಲ್ಲಾಗಲಿ, ನರಕದಲ್ಲಾಗಲಿ, ಅಥವಾ ಮರುಹುಟ್ಟು ಪಡೆದು ಭೂಮಿ ಮೇಲಾಗಲಿ, ನೀ ಹೆಣ್ಣಾಗಿರು! ಅಲ್ಲಿಯೇ ಚೆನ್ನಾಗಿರು! ನಿನ್ನಿಷ್ಟದಂತಿರು, ಇತರರ ಇಷ್ಟಾವಿಷ್ಟಗಳನ್ನು ತಿಳಿದು ಗೌರವಿಸು! ಇತರರಿಗೂ ನಿನ್ನಂತೆಯೇ ಇರುವುದು ಜೀವ, ಅಲ್ಲಿ ಬಯಕೆಗಳೂ ಇವೆ ಎಂಬುದನ್ನು ಅರ್ಥ ಮಾಡಿಕೋ..ಆಗ ನೀನು ಉತ್ತಮ ಜೀವಿಯಾಗಬಲ್ಲೆ, ಇಲ್ಲದಿದ್ದರೆ ನಿನ್ನ ಬಾಳು ನಿರರ್ಥಕ ಈ ಭೂಮಿ ಮೇಲೆ! ನಿನಗೆ ಜೀವ ಕೊಟ್ಟ ದೇವರಿಗೆ, ನಿನಗೆ ಬದುಕು ಕೊಟ್ಟ ನಿನ್ನ ಪೋಷಕರಿಗೆ ಧಿಕ್ಕಾರವಿರಲಿ!
ನಿನ್ನ ಬಾಳು ನರಕದಲ್ಲೆ ಇರಲಿ! ಆದರೂ ನಾನು ನಿನ್ನ ತಪ್ಪುಗಳನೆಲ್ಲ ಕ್ಷಮಿಸಿ ಹೇಳುವೆ ನೀ ನನ್ನ ಬಾಳಲ್ಲಿ ಅಡಿಯಿರಬಾರದಾಗಿತ್ತು! ನಿನ್ನಾಗಮನ ನನಗೆ ಬೇಡವಿತ್ತು! ತಂಪಾದ ಕೆರೆಯ ತಣ್ಣೀರಂತಿದ್ದ ನನ್ನ ಬಾಳಲ್ಲಿ ಗುಂಡು ಕಲ್ಲಿನಂತೆ ಬಿದ್ದು ರಾಡಿಯೆಬ್ಬಿಸಿಬಿಟ್ಟೆ! ನನ್ನೊಡಲಿಂದ ನಿನ್ನನೆಬ್ಬಿಸಿ ದೂರ ತಳ್ಳುವ ಸುನಾಮಿಯ ಶಕ್ತಿ ನನಗಿನ್ನೂ ಬಂದಿಲ್ಲ! ಆ ಶಕ್ತಿ ಬರಲೆಂದು ಕಾದಿರುವೆ, ಶಬರಿ ರಾಮನ ಕಾದಂತೆ! ಅಂದು ಇಂದು ಮುಂದು ಎಂದೆಂದೂ ನೀ ನನ್ನ ಬಾಳಿಗೆ ಅಲರ್ಜಿ, ಆದರೆ ಅದೇಕೋ ಗೊತ್ತಿಲ್ಲ ದ್ವೇಷ ಮನದೊಳಗೆ ಕುದಿಯುತ್ತಿದ್ದರೂ ನೀ ಪ್ರೀತಿಯ ಅಲರ್ಜಿ! ನಾನಿನ್ನು ಬರಲೇ..
ಎಂದೆಂದಿಗೂ ನಿನ್ನವಳಲ್ಲದವಳು....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ