ಬುಧವಾರ, ಏಪ್ರಿಲ್ 24, 2019

953. ನಲ್ಲೆಗೊಂದು ಪತ್ರ

ನನ್ನ ನಲ್ಲೆಗೊಂದು ಪತ್ರ..

ನಿತ್ಯ ನನ್ನ ಕನಸಲ್ಲಿ ಕಾಡುವ ಸುಂದರ ನಲ್ಲೆ...ವಾಟ್ಸಪ್, ಫೇಸ್ಬುಕ್, ಈ-ಮೇಲ್ ಮೆಸೆಂಜರ್, ಶೇರ್ಚಾಟ್ ಗಳ ಈ ಕಾಲದಲ್ಲೂ "ಓಲ್ಡ್ ಇಝ್ ಗೋಲ್ಡ್" ಎನ್ನುವ ಮಾತಿನಂತೆ ನಿನಗೊಂದು ಪತ್ರ ಬರೆಯಲು ಹೊರಟಿರುವೆ. ಕಾರಣವೇನೆಂದು ಕೇಳುವೆಯಾ? ಇದೋ ಹೇಳುವೆ.
     ಮನದ ಭಾವಗಳು ಹರಿದು ಕೈಗೆ ಬಂದು, ಕೈಯಿಂದ ಪೆನ್ನಿನ ಮೂಲಕ ಅಚ್ಚಾದಾಗ ಸಿಗುವ ಆ ಅಕ್ಷರದಾನಂದ! ಅದು ನಾನೇ ಬರೆದ ನನ್ನದೇ ಹಸ್ತಾಕ್ಷರವದು! ಎಂತಹ ಮುದ್ದು ಮುದ್ದಾದ ಭಾವನೆಗಳುಳ್ಳ ಪದಗಳ ಪಟ್ಟಿ! ಅನರ್ಘ್ಯ ಸಾಲುಗಳು! ಮಮತೆಯ ಕರೆಯೋಲೆಯಿದು!
     ನೀ ನನ್ನ ಹೃದಯ ಗೆದ್ದಂತೆ, ಜನ ನಿನ್ನ ಹೃದಯದಲಿರಿಸಿಕೊಳ್ಳುವ ಗುಣ ನಿನ್ನಲಿರಲಿ. ವರುಷಕೊಮ್ಮೆ ಬರುವ ಜನುಮ ದಿನದಂದು ಗಿಡ ನೆಟ್ಟು ಆಚರಿಸುವ ನೀತಿಯಿರಲಿ..

   ನನ್ನ ಮನದರಸಿಯ ಬಗೆಗೆ ನನಗಿರುವ ಕನಸುಗಳಲಿ ಸ್ವಚ್ಛತೆಯ ಅರಿವೂ ಬಹಳ ಮುಖ್ಯವಾದುದು. ನಮ್ಮ ಸ್ವಚ್ಛತೆ ನಮಗೆ ಹೆಮ್ಮೆ. ಸ್ವಚ್ಛತೆಯಿದ್ದಲ್ಲಿ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಅಡಿಗೆಮನೆಯ ಸ್ವಚ್ಛತೆ ನೋಡಿ ಒಂದು ಹೆಣ್ಣಿನ ಗುಣಮಟ್ಟ ಅಳೆಯಬಹುದಂತೆ. ಅಡಿಗೆ ಮನೆ ಮಾತ್ರವಲ್ಲ, ಮನೆಯ ಇತರ ಕೋಣೆಗಳೂ, ಅಂಗಳ, ಛಾವಣಿ, ಸಾಮಾನು, ಸರಂಜಾಮುಗಳು,ಮನೆಯ ಸುತ್ತಮುತ್ತಲಿನ ಸ್ವಚ್ಛತೆಗೆ ಆದ್ಯತೆ ನೀಡುವಂತಾಗಬೇಕು. ಜೊತೆಗೆ ವೈಯಕ್ತಿಕ ಸ್ವಚ್ಛತೆ ಕೂಡಾ.
  ಪ್ರೀತಿಯೇ ಬದುಕಿನ ಮೂಲವಾಗಬೇಕು. ಪ್ರೀತಿಯೊಂದಿದ್ದರೆ ಗುಡಿಸಲೂ ಅರಮನೆಯಾಗಬಲ್ಲುದು, ಗಂಜಿಯೂ ಮೃಷ್ಟಾನ್ನವಾಗಬಲ್ಲುದು. ಜೀವನವು ನಡೆಯುವಷ್ಟು ಸಂಬಳ, ಅಪರಿಮಿತ ಪ್ರೀತಿ ಇರುವ ಬದುಕು ನಮ್ಮದಾಗಲಿ. ಇರಲೊಂದು ಸೂರು, ತೊಡಲು ಬಟ್ಟೆಯಿದ್ದರೆ ಸಾಕು.
   ಮನದಂಚಿನ ಭಾವಗಳ ಒಬ್ಬರಿಗೊಬ್ಬರು ಅರ್ಥೈಸಿ, ಗೌರವಿಸಬೇಕು. ಪರೋಪಕಾರಕ್ಕೆ ಸ್ಥಳವಿರಬೇಕು. ಪರಹಿತವ ಬಯಸಬೇಕು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿಯಿರಬೇಕು. ಕಷ್ಟ ಪಟ್ಟು ದುಡಿದ ಅನುಭವ ಇರಬೇಕು. ಜೀವನ ಕಲ್ಲು ಮುಳ್ಳಿನ ಹಾಸಿಗೆಯೆಂದು ಅರ್ಥೈಸಿಕೊಂಡಿರಬೇಕು ನನ್ನ ನಲ್ಲೆ.
   ಇನ್ನೂ ಇದೆ ಹೇಳಲು. ಮುಂದಿನ ಪತ್ರದಲ್ಲಿ ತಿಳಿಸುವೆ. ಈ ಪತ್ರಕ್ಕೆ ಉತ್ತರಿಸು.
          ಪ್ರೀತಿಯಿಂದ.
                          @ಪ್ರೇಮ್@
                         24.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ