ನಿನ್ನಿಂದ...
ಬಳ್ಳಿಯ ಬದುಕಿಗೆ ಆಸರೆ ಮರವು!
ಮುಂದಕೆ ಸಾಗಲು ಆಲಿಂಗನ ನೆರವು!!
ಅಮ್ಮನ ತೋಳದು ಬಹಳವೆ ಒಲವು,
ಬದುಕಲಿ ಮೇಲೇರಲು ಪ್ರೀತಿಯ ಬಲವು..//೧//
ಕಂದಗೆ ಬೇಕದು ಕಲಿಯುವ ಛಲವು,
ಎತ್ತರಕೇರುತ ಸಾಗುವ ತನುಮನವು,
ಬಾನೂ ಬಾಗಿದೆ ಭೂಮಿಯ ಅಪ್ಪಲು..
ಬೇಡವು ಸಂಕೋಚ ಮಾನವ ತಬ್ಬಲು...//೨//
ಪ್ರೀತಿಯ ಪರಿಯಲಿ ಮಳೆಹನಿ ಜಾರುತ!
ಇಳೆಯನು ಸೇರಿ ಸಂತಸ ಪಡೆಯುತ!
ಧರೆಗೂ ಆನಂದ ತಣ್ಣನೆ ನೆನೆಯುತ,
ಆಗಸ ಕುಣಿವುದು ಸಡಗರ ಪಡುತ//೩//
ಭಾನೂ ಬರುವನು ಅವನಿಯ ಕರೆಯುತ,
ಬಯಲ ಆಟದಲಿ ಜನ ಮೈಮರೆಯುತ!
ಪ್ರೇಮದ ಮಾತದು ಬದುಕಿಗೆ ಸಂತತ!
ಮನವದು ತಣಿಯಲು ಬಾಳಲಿ ಸಂತಸ!!//೪//
ಜೀವನ ಖುಷಿಖುಷಿ ನಿನ್ನಿರವಿಂದ,
ಕಾವನ ದಯೆಯದು ಬರಲಿ ಮೇಲಿಂದ,
ನಾನು ನನ್ನದು ಬಂದುದು ಎಲ್ಲಿಂದ?
ಸರ್ವವ ಸಮರ್ಪಿಸಿ ಪಡೆಯುವ ಆನಂದ//೫//
@ಪ್ರೇಮ್@
03.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ