ಮಂಗಳವಾರ, ಏಪ್ರಿಲ್ 16, 2019

921. ಸ್ಫೂರ್ತಿ

ಸ್ಫೂರ್ತಿ

ಧರೆಯ ಮೇಲೆ ಕಣ್ಣು ಬಿಟ್ಟಾಗಲೇ
ನಾ  ಕೂಗಿದ ದನಿಗೆ ಬಹಳ ಹರುಷಗೊಂಡು,
ಸಂತಸದಿ ತನ್ನೆದೆಗೆ ಅಂಟಿಸಿದಂತೆ ಒತ್ತಿ ಹಿಡಿದು ಮುದ್ದಾಡಿ,
ತನ್ನ ಜೀವದ ರಕ್ತವ  ಹಾಲಾಗೆನಗೆ ಕುಡಿಸಿ,
ತನ್ನ ಅಮೂಲ್ಯ ಸಮಯವ ತನ್ನ  ಕುಡಿಗಾಗಿ ನೀಡಿ,
ಕಲ್ಲಿನಂತಿದ್ದ, ಮಾಂಸದ ಮುದ್ದೆಯಾಗಿದ್ದ ನನ್ನ ಸುಂದರ  ಶಿಲ್ಪವಾಗಿಸಿದ,
ಮುದ್ದಿನ ಪ್ರೀತಿಸಿಂಚನ ತಾಯಿ ನನ್ನ ಬರಹಕ್ಕೆ ಸ್ಫೂರ್ತಿ!

ಹಸಿರು ಗಿಡ ಮರಗಳ ನನಗಾಗಿ ಬೆಳೆಸಿಟ್ಟು,
ಸ್ವಚ್ಛ ಗಾಳಿ, ಪರಿಶುದ್ಧ ನೀರು ಕೊಟ್ಟು,
ಹಗಲಿಗೆ ಸೂರ್ಯನ, ಇರುಳ ತಂಪಿಗೆ ಚಂದ್ರನ ತಂದಿಟ್ಟು,
ಸಾಗರದಲೆಯನು ಉಕ್ಕಿಸಿ ಸಂತಸವಿಟ್ಟು,
ಹಸಿರೆಲೆಗಳ ತುದಿಯಲಿ ಮುತ್ತಿನ ಹನಿಯ ಅಂದವನಿಟ್ಟು,
ಪರ್ವತಗಳ ತುದಿಯಲಿ ಹಿಮದ ರಾಶಿಯ ಸುರಿದಿಟ್ಟು,
ನವಿರಾದ ನೆಲ ಮುಗಿಲಲಿ ಅಂದದ ಕಾಂತಿಯನೆ ನೆಟ್ಟ ಪ್ರಕೃತಿ ಮಾತೆ ನನ್ನ ಬರಹಕೆ ಸ್ಫೂರ್ತಿ!!

ದೇಹದೊಳಗೊಂದು ಮನವನಿಟ್ಟು,
ಮನದೊಳಗೆ ಅಸಂಖ್ಯಾತ ಭಾವನೆಗಳ ತುಂಬಿಟ್ಟು,
ಬದುಕಿನ ನಾಡಿಯನು ಭಾವನೆಗಳ ಲೋಕದಲಿ ಬಡಿಸಿಟ್ಟು,
ಊಟ, ಗಾಳಿ,ನಿದ್ರೆ, ನೀರಿನಂತೆ ಭಾವನೆಗಳು ಅಗತ್ಯ ವೆಂದು ಅರಿವು ಕೊಟ್ಟು,
ಬದುಕ ಬೇರನು ಭಾವಗಳೊಳಗೆ, ಕೊಂಬೆ, ಚಿಗುರನು ಆಸೆಗಳೊಳಗೆ ಹರಿಬಿಟ್ಟು,
ಪ್ರೀತಿ,ನೀತಿ,ಕೀರ್ತಿ,ಭಕ್ತಿ,ಶಾಂತಿ,ಶಕ್ತಿಗಳ ತುರುಕಿಟ್ಟು,
ಅಸೂಯೆ,ಕಾಮ, ಲೋಭ,ಮೋಹ, ಮದ, ಕ್ರೋಧದ ಬೀಜವನೂ ಬಿಡಬೇಕೆಂಬ ಬುದ್ಧಿ ಕೊಟ್ಟ
ನಮ್ಮ ಸಲಹುವ ದೈವೀಶಕ್ತಿಯೂ ನನ್ನ ಬರಹಕ್ಕೆ ಸ್ಫೂರ್ತಿ!

ಸುತ್ತ ಮುತ್ತಲಲಿ ಪ್ರೀತಿ ಹಂಚುವ ಗೆಳೆಯರು,
ಕತ್ತಲಲೂ ಕಣ್ಣಲ್ಲಿ ಕಣ್ಣಿಟ್ಟು ಸಲಹುವ ಬಾಳ ಸಂಗಾತಿ,
ಬತ್ತದೆ ಪ್ರೇಮ ಸ್ಫುರಿಸುವ ಬಂಧು ಬಳಗ,
ಕಲಿತು, ಕಲಿಸಿರೆಂಬ ಆಸೆಯಿಂದ ಭಕ್ತಿಯಿಟ್ಟು ನಮಿಸುವ ಮುಂದಿನ ಜನಾಂಗದ ಕುಡಿಗಳು,
ದೇವರಂತೆ ಬಂದು ಸಹಾಯ ಮಾಡಿ ಹೋಗುವ ಅರಿವಿಲ್ಲದ ಮನಗಳು,
ಏನೂ ಅರಿಯದ, ಹೊಳಪು ಕಂಗಳ ಮುಗ್ಧ ಕಂದಮ್ಮಗಳು,
ಆಟದಲ್ಲೆ ಪಾಠ ಕಲಿತು ತನ್ನೆ ತಾನು ಮರೆವ ಮಕ್ಕಳು,
ಸದಾ ನನ್ನ ಬರಹಕ್ಕೆ ಸ್ಫೂರ್ತಿ!

ತಮ್ಮ ಜೀವ ಒತ್ತೆಯಿಟ್ಟು ನಮ್ಮ ಕಾಯ್ವ ಯೋಧರು,
ತನ್ನ ಕಷ್ಟದಲ್ಲು ನಮಗೆ ಅನ್ನ ಕೊಡುವ ರೈತರು,
ಕಾಲ ಸರಿದರೂ ಕೆಲಸದಲ್ಲೆ ಮುಳುಗಿ ಹೋದ ಕೂಲಿ ಕಾರ್ಮಿಕರು,
ಜೀವ ನೋವ ಸಹಿಸದಾಗ ಧೈರ್ಯ ಕೊಡುವ ವೈದ್ಯರು!
ಅನ್ಯಾಯವಾಗಿ ಸೋತುಹೋಗಿ ಬೀಳುವಾಗ ಎತ್ತಿ ಹಿಡಿವ ನ್ಯಾಯಾಧೀಶರು,
ಬರಹ ಕಲಿಸಿ ಓದು ತಿಳಿಸಿ, ಬುದ್ಧಿ ತುಂಬಿದ ಗುರುಗಳು
ನನ್ನ ಬರಹಕ್ಕೆ ಸ್ಫೂರ್ತಿ!

@ಪ್ರೇಮ್@
17.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ