ಗಝಲ್-80
ನದಿಯ ನಡುವೆ ಮಲಗಿಹ ದೊಡ್ಡ ಆಡಂಬರವಿಲ್ಲದ ಬಂಡೆ ನಾನು.
ಆನೆಯಂತೆ ಸೋಮಾರಿಯಾಗಿ ಆರಾಮದಿ ಬಿಸಿಲಿಗೆ ಮೈಯೊಡ್ಡಿದ ಬಂಡೆ ನಾನು..
ಜನ ಬರುತ್ತಿದ್ದರು, ನನ್ನ ಮೇಲೆ ನಡೆದಾಡುತ್ತಲೇ ಇದ್ದರು!
ಮಲಗಿ ನಿದ್ರಿಸುತಲಿದ್ದರೂ ನಿಮ್ಮ ಬಡಿದೆಬ್ಬಿಸಲೆತ್ನಿಸದ ಬಂಡೆ ನಾನು..
ಬಟ್ಟೆಯ ಕುಕ್ಕಿ, ಬಡಿದು, ಬೀಸಿ, ಹೊಡೆದು, ಉಜ್ಜಿ ತೊಳೆಯುತ್ತಿದ್ದರಂದು!
ನೆರೆಯಿತ್ತು, ನೀರಿತ್ತು, ಬಿರುಸಾದ ಸುಳಿಯ ಎದುರಿಸುತಲಿ ಬದುಕಿದ ಬಂಡೆ ನಾನು!
ವಿಜಯಿಗಳಾದೆಡೆ ಜನ ಬಂದು ನನ್ನ ಮೇಲೆ ಹತ್ತಿ ಕುಣಿಯುತ್ತ ಬಾವುಟ ಹಿಡಿದು ಖುಷಿಪಡುತ್ತಿದ್ದರು,
ಬರದಲ್ಲೊಣಗುತ್ತಾ, ಕತ್ತಲಾದೊಡೆ ಕುಡುಕರ ಬಾಟಲಿಯಿಂದ ಹೊಡೆಸಿಕೊಳ್ಳುತ್ತ ಬಂದ ಬಂಡೆ ನಾನು!
ಮಕ್ಕಳು ಅಂದು ನನ್ನ ಮೇಲೆ ಜಿಗಿದು ಕುಣಿದು ಏನೇನೋ ಆಟವಾಡುತ್ತ ಖುಷಿಪಡುತ್ತಿದ್ದರು!
ಒಡೆದ ಗಾಜಿನ ಚೂರಿಗೆ ಹೆದರಿ ಎಲ್ಲರಿಂದ ದೂರವಾಗುಳಿದ ಬಂಡೆ ನಾನು!
ಆಹಾ!ನನ್ನ ಮೈ ಎಷ್ಟು ನಾಜೂಕಾಗಿ ಹೊಳಪಾಗಿತ್ತಂದು ಮಿರಿಮಿರಿ ಮಿಂಚುತ್ತಾ!
ಮಹಿಳೆಯರು ಬಂದು ಮುಖಕ್ಕೆ ಹಚ್ಚಲು ಶ್ರೀಗಂಧ ಚಂದನ ಅರೆಯುತ್ತಲಿ ಬೆಳೆದ ಬಂಡೆ ನಾನು!
ಪ್ರೀತಿಯಿಂದ ಜನ ನನ್ನ ಗೌರವಿಸಿ , ಉಳಿಸಿ ಕಾಪಾಡುತ್ತಿದ್ದರು ನೀರಲ್ಲಿ ಮುಳುಗಿದ್ದ ನನ್ನನಂದು!
ನೀರಿಂಗಿ ಸೊರಗಿ, ಗಾಜಿನ ಚೂರಿನ ಮಧ್ಯೆ ಪ್ರೇಮವಿಲ್ಲದೆ ಪರಿತಪಿಸುತ್ತಲಿರುವ ಬಾಡಿದ ಬಂಡೆ ನಾನು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ